Advertisement
ಮೊಟ್ಟಮೊದಲ ಬಾರಿಗೆ ಬಜೆಟ್‌ನಲ್ಲಿ ಘೋಷಣೆಯಾದ ಉತ್ತರ ಕರ್ನಾಟಕ ಭಾಗದ ಯೋಜನೆಯೊಂದಕ್ಕೆ ಆಡಳಿತ ಯಂತ್ರ ತೀವ್ರ ಪ್ರಗತಿಯ ಸ್ವರೂಪ ನೀಡಿದಂತಾಗಿದ್ದು, ಅಂತಿಮವಾಗಿ ರಾಯನಾಳ ಗ್ರಾಮದಲ್ಲಿ ಆಸ್ಪತ್ರೆ ತಲೆ ಎತ್ತುವುದು ಪಕ್ಕಾ ಆಗಿದೆ.
Related Articles
Advertisement
ಸ್ಥಳ ಪರಿಶೀಲಿಸಿದ ಕಾರ್ಯದರ್ಶಿ: ಜಯದೇವ ಹೃದ್ರೋಗ ಸಂಸ್ಥೆ ಸ್ಥಾಪನೆ ಕುರಿತು ಆರೋಗ್ಯ ಇಲಾಖೆ ಕಾರ್ಯದರ್ಶಿ ನವೀನರಾಜ್ ಸಿಂಗ್ ಅವರು ಹಿರಿಯ ಅಧಿಕಾರಿಗಳ ಜೊತೆಗೆ ಕಳೆದ ವಾರ ರಾಯನಾಳಕ್ಕೆ ಭೇಟಿಕೊಟ್ಟು ಜಾಗ ಪರಿಶೀಲನೆ ಮಾಡಿದ್ದಾರೆ. ಈಗಾಗಲೇ ಹುಬ್ಬಳ್ಳಿ ನಗರದ ಹೊರವಲಯ ಸಾಕಷ್ಟು ಬೆಳೆದಿದ್ದು, ರಾಯನಾಳ ಆಸ್ಪತ್ರೆಗೆ ಸೂಕ್ತ ಎನ್ನುವ ಅಭಿಮತಕ್ಕೆ ಅಧಿಕಾರಿಗಳೂ ಬಂದಿದ್ದಾರೆ ಎನ್ನಲಾಗಿದೆ.
ನಗರ ಮಧ್ಯದಲ್ಲಿರುವ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಈಗಾಗಲೇ ಹೈಟೆಕ್ ಆಸ್ಪತ್ರೆ ಗುತ್ಛಗಳೇ ತಲೆ ಎತ್ತುತ್ತಿದ್ದು, ಹೃದ್ರೋಗ ಆಸ್ಪತ್ರೆಗೆ ಸಾಕಷ್ಟು ಸ್ಥಳಾವಕಾಶ ಮತ್ತು ಪ್ರತ್ಯೇಕ ವ್ಯವಸ್ಥೆ ಸೂಕ್ತ ಎನ್ನುವ ಅಭಿಮತದ ಹಿನ್ನೆಲೆಯಲ್ಲಿ ರಾಯನಾಳಕ್ಕೆ ಅಧಿಕಾರಿ ವರ್ಗವೂ ಹಸಿರು ನಿಶಾನೆ ತೋರಿಸಿದೆ ಎನ್ನಲಾಗಿದೆ.
ಸ್ವಂತ ಕಟ್ಟಡಕ್ಕೂ ಮುನ್ನವೇ ಆಸ್ಪತ್ರೆ? ಜಯದೇವ ಹೃದ್ರೋಗ ಸಂಸ್ಥೆ ಸ್ವಂತ ಕಟ್ಟಡ ನಿರ್ಮಾಣಕ್ಕೂ ಮುನ್ನವೇ ಜಿಲ್ಲೆಯಲ್ಲಿ ತಾತ್ಕಾಲಿಕವಾಗಿ ಎಲ್ಲಿಯಾದರೂ ಆಸ್ಪತ್ರೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಸಣ್ಣ ಪ್ರಮಾಣದ ಯಂತ್ರೋಪಕರಣ ಮತ್ತು ವೈದ್ಯರ ತಂಡ ರಚಿಸಿ ತಾತ್ಕಾಲಿಕವಾಗಿ ವೈದ್ಯಕೀಯ ಸೇವೆ ಆರಂಭಿಸುವ ಚಿಂತನೆ ನಡೆದಿದ್ದು, ಈ ಕುರಿತು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಜಿಲ್ಲಾಡಳಿತದ ಜೊತೆ ಸಂಪರ್ಕ ನಡೆಸಿದ್ದಾರೆ ಎನ್ನಲಾಗಿದೆ. ಐಐಟಿಯನ್ನು ವಾಲ್ಮಿ ಕಟ್ಟಡದಲ್ಲಿ ನಡೆಸಿದ ಮಾದರಿಯಲ್ಲೇ ಹೃದ್ರೋಗ ಸಂಸ್ಥೆಯನ್ನು ಶೀಘ್ರವೇ ಆರಂಭಿಸಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ.
ಷಟ್ಪಥ ಕಾಮಗಾರಿಗೂ ಚುರುಕು: ಹು-ಧಾ ಬೈಪಾಸ್ ಷಟ್ಪಥ ಕಾಮಗಾರಿಯೂ ತೀವ್ರತೆ ಪಡೆದುಕೊಂಡಿದ್ದು ಈ ಸಂಬಂಧದ ಭೂ ಸ್ವಾಧೀನ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ. ಈಗಾಗಲೇ 67 ಎಕರೆ ಭೂಮಿಯನ್ನು ಹೆದ್ದಾರಿ ನಿರ್ಮಾಣಕ್ಕೆ ಜಿಲ್ಲಾಡಳಿತ ಭೂ ಸ್ವಾಧೀನ ಮಾಡಿಕೊಂಡಿದ್ದು, ಕಾಮಗಾರಿಯೂ ಶೀಘ್ರವೇ ಆರಂಭಗೊಳ್ಳುವ ಸಾಧ್ಯತೆ ಇದೆ. ಅಷ್ಟೇಯಲ್ಲ, 2024ರ ಒಳಗಾಗಿಯೇ ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನೂ ಮುಕ್ತಾಯಗೊಳಿಸುವ ಯೋಜನೆ ರೂಪಿಸಲಾಗಿದೆ. ಈ ಹೆದ್ದಾರಿ ಹೃದ್ರೋಗ ಆಸ್ಪತ್ರೆ ಸಂಪರ್ಕವನ್ನು ಇನ್ನಷ್ಟು ಸರಳಗೊಳಿಸಲಿದೆ.
ಅವಳಿನಗರ ಮಧ್ಯದ ಜಾಗದ ಹುಡುಕಾಟ: ಜಯದೇವ ಹೃದ್ರೋಗ ಸಂಸ್ಥೆಯನ್ನು ಅವಳಿನಗರದ ಯಾವ ಭಾಗದಲ್ಲಿ ಸ್ಥಾಪನೆ ಮಾಡಬೇಕು ಎನ್ನುವ ಕುರಿತು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸಲಹೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಮೊದಲು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸ್ಥಾಪಿಸುವ ಚಿಂತನೆ ಇತ್ತು. ನಂತರ ಅವಳಿನಗರ ಮಧ್ಯದ ಜಾಗದ ಹುಡುಕಾಟ ನಡೆಯಿತು. ಕೊನೆಗೆ ರಾಯಾಪುರ, ತಡಸಿನಕೊಪ್ಪ, ಇಟ್ಟಿಗಟ್ಟಿ, ತಾರಿಹಾಳ, ಚಿಕ್ಕಮಲ್ಲಿಗವಾಡ ಸೇರಿ ಬೈಪಾಸ್ ಅಕ್ಕಪಕ್ಕದ ಅನೇಕ ಜಾಗಗಳನ್ನು ಗುರುತಿಸಲಾಗಿತ್ತು. ಇದೀಗ ರಾಯನಾಳ ಸೂಕ್ತ ಸ್ಥಳ ಎಂದು ನಿಗದಿ ಮಾಡಲಾಗಿದೆ.
ಉತ್ತರ ಕರ್ನಾಟಕ ಭಾಗದ ಹೃದ್ರೋಗಿಗಳಿಗೆ ಆದಷ್ಟು ಬೇಗ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬಜೆಟ್‌ನಲ್ಲಿ ಘೋಷಣೆಯಾದ ಬೆನ್ನಲ್ಲೇ ಆಸ್ಪತ್ರೆ ನಿರ್ಮಾಣದ ಕೆಲಸ ತೀವ್ರಗತಿಯಲ್ಲಿ ಸಾಗಿದೆ. ಎರಡು ವರ್ಷದ ಅವಧಿಯಲ್ಲಿ ಕಟ್ಟಡ ಕಾಮಗಾರಿಗಳನ್ನು ಮುಗಿಸುವ ಗುರಿ ಹೊಂದಲಾಗಿದೆ. –ಆರೋಗ್ಯ ಇಲಾಖೆ ಹಿರಿಯ ಅಧಿಕಾರಿ, ಬೆಂಗಳೂರು
ರಾಯನಾಳ ಸೇರಿದಂತೆ ಜಯದೇವ ಆಸ್ಪತ್ರೆ ಸ್ಥಾಪನೆಗೆ ಅನೇಕ ಜಾಗಗಳನ್ನು ಗುರುತಿಸಲಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಜನರ ಅಭಿಮತ ಪಡೆದು ಅಂತಿಮಗೊಳಿಸಲಾಗುವುದು. ಈ ಕುರಿತು ಶೀಘ್ರವೇ ಸರ್ಕಾರದ ಆದೇಶ ಹೊರಬೀಳಲಿದೆ. –ನಿತೇಶ ಪಾಟೀಲ್, ಜಿಲ್ಲಾಧಿಕಾರಿ
-ಬಸವರಾಜ ಹೊಂಗಲ್