Advertisement
ಆರ್.ವಿ. ರಸ್ತೆ-ಬೊಮ್ಮಸಂದ್ರ ನಡುವೆ ನಿರ್ಮಿಸಲು ಉದ್ದೇಶಿಸಿರುವ ಮೆಟ್ರೋ ಮಾರ್ಗಕ್ಕಾಗಿ ಜಯದೇವ ಹೃದ್ರೋಗ ಆಸ್ಪತ್ರೆ ಬಳಿ ಇರುವ ಫ್ಲೈಓವರ್ (ಮಾರೇನಹಳ್ಳಿ ಮೇಲ್ಸೆತುವೆ) ಒಡೆಯಲು ಈಗಾಗಲೇ ಉದ್ದೇಶಿಸಲಾಗಿದೆ. ಇದಕ್ಕೆ ಈ ಮೊದಲೇ ಸಂಚಾರ ಪೊಲೀಸರಿಂದ ಅನುಮತಿಯೂ ದೊರಕಿತ್ತು. ಆದರೆ, ಮುಹೂರ್ತ ನಿಗದಿ ಆಗಿರಲಿಲ್ಲ. ಇನ್ನೇನು ಕಾಮಗಾರಿ ಚುರುಕುಗೊಳ್ಳಬೇಕು ಎನ್ನುವಷ್ಟರಲ್ಲಿ ಲೋಕಸಭಾ ಚುನಾವಣೆ ಘೋಷಣೆ ಆಯಿತು.
Related Articles
Advertisement
ಇಲ್ಲಿ ಮೆಜೆಸ್ಟಿಕ್ ಮಾದರಿಯ ಪ್ರಮುಖ ಇಂಟರ್‌ಚೇಂಜ್ ನಿಲ್ದಾಣ ಬರಲಿದೆ. ಆದ್ದರಿಂದ ಆದ್ಯತೆ ಮೇರೆಗೆ ನಿರ್ಮಿಸಬೇಕು ಎನ್ನುವುದು ಬಿಎಂಆರ್‌ಸಿ ಉದ್ದೇಶ. ಇದನ್ನು 2021ರ ಮಾರ್ಚ್‌ನಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದೆ. ಆದರೆ, ಪ್ರಸ್ತುತ ಸ್ಥಿತಿಯಲ್ಲಿ ನಿಗದಿತ ಗುರಿಯಲ್ಲಿ ಪೂರ್ಣಗೊಳಿಸುವುದು ಅನುಮಾನ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ನಿಗಮದ ಉನ್ನತ ಅಧಿಕಾರಿ.
ಮೆಟ್ರೋ ಎರಡನೇ ಹಂತದಲ್ಲಿ ಬರುವ ಎರಡು ಪ್ರತ್ಯೇಕ ಹೊಸ ಮಾರ್ಗಗಳ ಪೈಕಿ ಸುಮಾರು 18.82 ಕಿ.ಮೀ. ಉದ್ದದ ಆರ್.ವಿ. ರಸ್ತೆ- ಬೊಮ್ಮಸಂದ್ರ ಕೂಡ ಒಂದು. 5,744.09 ಕೋಟಿ ಅಂದಾಜು ಯೋಜನಾ ವೆಚ್ಚದಲ್ಲಿ ಇದನ್ನು ನಿರ್ಮಿಸಲು ಉದ್ದೇಶಿಸಿದ್ದು, ಸಿವಿಲ್ ಕಾಮಗಾರಿಯ ಯೋಜನಾ ವೆಚ್ಚ 797.29 ಕೋಟಿ ರೂ. ಆಗಿದೆ.
ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಹೆಚ್ಚು-ಕಡಿಮೆ ಎರಡು ವರ್ಷಗಳಾದವು. ಉಳಿದ ನಿಲ್ದಾಣಗಳನ್ನು ನಿರ್ಮಿಸಿದರೂ ಅವುಗಳ ನಡುವಿನ ಸಂಪರ್ಕ ಸೇತುವೆ ಇದೇ ಜಯದೇವ ಫ್ಲೈಓವರ್. ಸರ್ಕಾರದ ಪಾಲಿಗೆ ಸದ್ಯಕ್ಕೆ ಈ ಸೇತುವೆ “ಪಾರಂಪರಿಕ ಕಟ್ಟಡ’. ಆದರೆ, ಬಿಎಂಆರ್‌ಸಿ ಪಾಲಿಗೆ ಮಗ್ಗಲು ಮುಳ್ಳು!
ಏನೇನು ಬರುತ್ತೆ?: ಎತ್ತರಿಸಿದ (ಎಲಿವೇಟೆಡ್) ಚತುಷ್ಪಥ ರಸ್ತೆ ಮೂರನೇ ಹಂತದಲ್ಲಿ ನಿರ್ಮಾಣವಾಗಲಿದೆ. ಈ ಮೂರು ರಸ್ತೆಗಳ ಮೇಲ್ಭಾಗದಲ್ಲಿ ಒಂದರ ಮೇಲೆ ಒಂದರಂತೆ ಎರಡು ಪ್ರತ್ಯೇಕ ಮೆಟ್ರೋ ಮಾರ್ಗಗಳು (ಆರ್.ವಿ ರಸ್ತೆ ನಿಲ್ದಾಣ ಬೊಮ್ಮಸಂದ್ರ ಮಾರ್ಗ ಹಾಗೂ ಗೊಟ್ಟಿಗೆರೆನಾಗವಾರ ಮಾರ್ಗ) ಬರಲಿವೆ. ಈ ಎರಡೂ ಮಾರ್ಗಗಳನ್ನು ಒಳಗೊಂಡು ಮೆಟ್ರೋ ಇಂಟರ್‌ಚೇಂಜ್ ನಿಲ್ದಾಣ ನಿರ್ಮಾಣವಾಗಲಿದೆ. ಇದು ನಗರದ ಇತರ ಮೆಟ್ರೋ ನಿಲ್ದಾಣಗಳಿಗಿಂತ ಭಿನ್ನವಾಗಿರಲಿದೆ.
ಹಿನ್ನೆಲೆ ಏನು?: ಜಯದೇವ ಬಳಿಯ 8 ಕಿ.ಮೀ. ಮೆಟ್ರೋ ಮಾರ್ಗವು ಜಯದೇವ ಆಸ್ಪತ್ರೆ ಆವರಣದಲ್ಲಿ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿತ್ತು. ಇದಕ್ಕೆ ಆಸ್ಪತ್ರೆ ಆಕ್ಷೇಪ ವ್ಯಕ್ತಪಡಿಸಿತು. ಪರಿಣಾಮ ಆಸ್ಪತ್ರೆಯ ವಿರುದ್ಧ ದಿಕ್ಕಿನಲ್ಲಿರುವ ಸ್ಥಳಕ್ಕೆ ವರ್ಗಾವಣೆಗೊಂಡಿತ್ತು.
ಇದಕ್ಕೂ ವಾಣಿಜ್ಯ ಕಟ್ಟಡಗಳು ಹಾಗೂ ಹಿರಿಯ ನಾಗರಿಕರ ಮನೆಗಳು ಸೇರಿದಂತೆ ಸುಮಾರು 90ಕ್ಕೂ ಹೆಚ್ಚು ಮನೆಗಳು ನೆಲಸಮಗೊಳ್ಳುತ್ತಿದ್ದವು. ಈ ಬದಲಾವಣೆಯನ್ನು ಖಂಡಿಸಿ ಜಯದೇವ ಇಂಟರ್‌ಚೇಂಜ್ ಮೆಟ್ರೋ ಸಂತ್ರಸ್ತರ ವೇದಿಕೆ ವಿರೋಧ ವ್ಯಕ್ತಪಡಿಸಿತ್ತು. ಎತ್ತರಿಸಿದ ಮಾರ್ಗದಿಂದ ನಿವಾಸಿಗಳಿಗೆ ತೊಂದರೆಯಾಗಲಿದ್ದು, ಈ ಮಾರ್ಗವನ್ನು ಸುರಂಗ ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂದೂ ವೇದಿಕೆ ಆಗ್ರಹಿಸಿತ್ತು.
ಆದರೆ, ಸುರಂಗ ಮಾರ್ಗ ನಿರ್ಮಾಣ ವೆಚ್ಚ ದುಪ್ಪಟ್ಟು ಆಗಲಿದೆ. ಈ ಹಿನ್ನೆಲೆಯಲ್ಲಿ ಎರಡೂ ಮಾರ್ಗಗಳನ್ನು ಕೈಬಿಟ್ಟು, ರಸ್ತೆ ಮಧ್ಯದಿಂದ ಮಾರ್ಗ ನಿರ್ಮಾಣಕ್ಕೆ ನಿಗಮ ನಿರ್ಧರಿಸಿತು. ಈ ಕಾಮಗಾರಿಯನ್ನು ನಿಗಮವು 36 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದೆ.
ಚುನಾವಣೆಗೂ ಫ್ಲೈಓವರ್ ಒಡೆಯುವ ಕಾರ್ಯಕ್ಕೂ ಸಂಬಂಧವಿಲ್ಲ. ಈ ಮೊದಲೇ ನಿಗದಿಯಾದಂತೆ ಆರ್.ವಿ. ರಸ್ತೆ- ಬೊಮ್ಮಸಂದ್ರ ನಡುವಿನ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದೆ. ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ಜಯದೇವ ಫ್ಲೈಓವರ್ ನೆಲಸಮಗೊಳಿಸುವ ಕಾರ್ಯವನ್ನು ಎರಡು ತಿಂಗಳ ನಂತರ ಕೈಗೆತ್ತಿಕೊಳ್ಳಲಾಗುವುದು.-ಅಜಯ್ ಸೇಠ್, ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿ