Advertisement
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2010ರಲ್ಲಿ ಸರ್ಕಾರ ಮಂಜೂರು ಮಾಡಿದ 15 ಎಕರೆ ಜಾಗದಲ್ಲಿ ನಾಲ್ಕು ಅಂತಸ್ತಿನ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗಿದ್ದು, ಇನ್ನು 4 ರಿಂದ 6 ವಾರಗಳಲ್ಲಿ ಹೊಸ ಕಟ್ಟಡದಲ್ಲಿ ಪೂರ್ಣಪ್ರಮಾಣದಲ್ಲಿ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ. ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ ಸರ್ಕಾರ 150 ಕೋಟಿ ರೂ. ಅನುದಾನ ನೀಡಿದ್ದು, ಆಸ್ಪತ್ರೆಯ ಉಪಕರಣಗಳು ಇನ್ನಿತರೆ ಆಂತರಿಕ ಸೌಲಭ್ಯಗಳಿಗೆ ಸಂಸ್ಥೆಯ ಆಂತರಿಕ ಸಂಪನ್ಮೂಲಗಳಿಂದ 60 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಹೇಳಿದರು.
Related Articles
Advertisement
ಸದ್ಯ ಮೈಸೂರು ಶಾಖೆಯಲ್ಲಿ ತಜ್ಞ ವೈದ್ಯರು, ಶುಶ್ರೂಷಕರುಗಳು, ತಂತ್ರಜ್ಞರು ಸೇರಿದಂತೆ ಒಟ್ಟು 180 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಎಲ್ಲಾ ಸಿಬ್ಬಂದಿ ಹೊಸ ಕಟ್ಟಡಕ್ಕೆ ವರ್ಗಾವಣೆಯಾಗಲಿದ್ದಾರೆ ಎಂದು ತಿಳಿಸಿದರು.
ಟೆಲಿಮೆಡಿಸನ್: ಹೊಸ ಆಸ್ಪತ್ರೆ ಕಾರ್ಯಾರಂಭವಾದ ನಂತರ ಮೈಸೂರು ಸುತ್ತಮುತ್ತಲಿನ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳ ಜತೆಗೆ ಟೆಲಿಮೆಡಿಸನ್ ಆರಂಭಿಸಲಾಗುವುದು. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ವೈದ್ಯಕೀಯ ವರದಿ ಆಧರಿಸಿ, ಸೂಕ್ತ ಚಿಕಿತ್ಸಾ ಸಲಹೆ ನೀಡಲಾಗುವುದು. ಜತೆಗೆ ಹೃದಯಾಘಾತಕ್ಕೆ ಒಳಗಾಗಿ ಬರುವವರಿಗಾಗಿಯೇ ಒಂದು ಕ್ಯಾತಲಾಬ್ ಮೀಸಲಿಡಲಾಗುವುದು.
ಇನ್ನು ಮುಂದೆ ತರೆದ ಹೃದಯ ಶಸ್ತ್ರಚಿಕಿತ್ಸೆಗೂ ಬೆಂಗಳೂರಿಗೆ ಬರಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದರು. ಜಯದೇವ ಹೃದ್ರೋಗ ಸಂಸ್ಥೆಯ ಮೈಸೂರು ಶಾಖೆ ಮುಖ್ಯಸ್ಥ ಡಾ.ಸದಾನಂದ, ಬೆಂಗಳೂರಿನ ಡಾ.ರವೀಂದ್ರನಾಥ್, ಮೈಸೂರು ಶಾಖೆ ಮುಖ್ಯ ಆಡಳಿತಾಧಿಕಾರಿ ಚಿಕ್ಕತಿಮ್ಮಯ್ಯ, ಕಾಳಪ್ಪ ಇದ್ದರು.
ತುರ್ತು ಸಂದರ್ಭದಲ್ಲಾದರೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮೊದಲು-ಪಾವತಿ ನಂತರ ಎನ್ನುವ ಭಾವನೆ ಬರಬೇಕು. ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಮಾನವೀಯತೆಗೆ ಮೊದಲ ಆದ್ಯತೆ.-ಡಾ.ಸಿ.ಎನ್.ಮಂಜುನಾಥ್, ನಿರ್ದೇಶಕರು, ಜಯದೇವ ಹೃದ್ರೋಗ ಸಂಸ್ಥೆ