Advertisement

ಜಯದೇವ ಸೇತುವೆ ಅಧ್ಯಯನ ಮರೆತ ತಜ್ಞರು!

11:13 AM Feb 29, 2020 | Team Udayavani |

ಬೆಂಗಳೂರು: ನಗರದಲ್ಲಿ ಇದೇ ಮೊದಲ ಬಾರಿಗೆ ಎತ್ತರಿಸಿದ ಬೃಹತ್‌ ಸೇತುವೆಯೊಂದು ನೆಲಸಮಗೊಳ್ಳುತ್ತಿದೆ. ಅದು ಇನ್ನೂ ಎಷ್ಟು ವರ್ಷ ಬಾಳಿಕೆ ಬರಬಹುದಾಗಿತ್ತು? ಈಗಾಗಲೇ ಎಲ್ಲೆಲ್ಲಿ ಬಿರುಕುಗಳು ಮೂಡಿದ್ದವು? ಭವಿಷ್ಯದಲ್ಲಿ ತಲೆಯೆತ್ತಲಿರುವ ಹತ್ತಾರು ಫ್ಲೈಓವರ್‌ಗಳ ವಿನ್ಯಾಸ ಬದಲಾವಣೆ ಅಥವಾ ಗುಣಮಟ್ಟ ಸುಧಾರಣೆಗೆ ಈ ಸೇತುವೆ ಪಾಠ ಆಗಬಹುದಾಗಿತ್ತಾ?

Advertisement

-“ನಮ್ಮ ಮೆಟ್ರೋ’ ಎರಡನೇ ಹಂತಕ್ಕೆ ಬಲಿಯಾಗುತ್ತಿರುವ ಜಯದೇವ ಹೃದ್ರೋಗ ಆಸ್ಪತ್ರೆ ಬಳಿ ಇರುವ ಮಾರೇನಹಳ್ಳಿ ಮೇಲ್ಸೇತುವೆ (ಜಯದೇವ ಫ್ಲೈಓವರ್‌) “ಪೋಸ್ಟ್‌ ಮಾರ್ಟಮ್‌’ ಮಾಡಿದರೆ, ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಆದರೆ ಇದಕ್ಕಾಗಿ ಎಂಜಿನಿಯರಿಂಗ್‌ ಸಂಸ್ಥೆಗಳು, ಗುಣಮಟ್ಟ ನಿರ್ಧರಣಾ ಹಾಗೂ ಸಂಶೋಧನಾ ಸಂಸ್ಥೆಗಳು, ಸ್ಟ್ರಕ್ಚರಲ್‌ ಎಂಜಿನಿಯರ್‌ ಗಳು ನೆಲಸಮಗೊಳ್ಳುತ್ತಿರುವ ಫ್ಲೈಓವರ್‌ನತ್ತ ನೋಡಬೇಕಾಗುತ್ತದೆ.

ದಶಕಗಳ ಈಚೆಗೆ ನಿರ್ಮಿಸಿದ ಫ್ಲೈಓವರ್‌ಗಳನ್ನು ಧ್ವಂಸ ಮಾಡುವುದು ತುಂಬಾ ಅಪರೂಪ. ಅಂತಹ “ಅನಿವಾರ್ಯ (?)’ ಕಾರಣಗಳಿಗಾಗಿ ಜಯದೇವ ಫ್ಲೈಓವರ್‌ ಅನ್ನು ಕೆಡವಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಒಂದು ಅಧ್ಯಯನ ತುರ್ತು ಅವಶ್ಯಕತೆ ಇತ್ತು ಎಂಬ ಅಭಿಪ್ರಾಯಗಳು ನೆಲಸಮಗೊಳಿಸುತ್ತಿರುವ ಎಂಜಿನಿಯರ್‌ ಗಳ ವಲಯದಿಂದ ಕೇಳಿಬರುತ್ತಿವೆ.

ಭವಿಷ್ಯದ ಯೋಜನೆಗೆ ಮಾರ್ಗ: “ಸಾಮಾನ್ಯವಾಗಿ ನಮ್ಮಲ್ಲಿ ಮೇಲ್ಸೇತುವೆಗಳನ್ನು ನೆಲಸಮ ಮಾಡುವುದು ತುಂಬಾ ಅಪರೂಪ. ಅದರಲ್ಲೂ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅಂತಹದ್ದೊಂದು ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಅವಘಡಗಳು ಸಂಭವಿಸಿದಾಗ ಅಥವಾ ಯಾವೊಂದು ಸೇತುವೆ ಬಗ್ಗೆ ಕಳಪೆ ಗುಣಮಟ್ಟದ ಮಾತುಗಳು ಕೇಳಿಬಂದಾಗ ಆಕ್ರೋಶ ವ್ಯಕ್ತಪಡಿಸುವವರು ಈಗ ನೆಲಸಮಗೊಳ್ಳುತ್ತಿರುವ ಸೇತುವೆಯತ್ತ ಕಣ್ಣುಹಾಯಿಸುವ ಅವಶ್ಯಕತೆ ಇತ್ತು. ಯಾಕೆಂದರೆ, ಅದರ ಸ್ಥಿತಿಗತಿ ಏನಿತ್ತು? ಇನ್ನೂ ಎಷ್ಟು ದಿನ ಅದು ಬಾಳಿಕೆ ಬರುತ್ತಿತ್ತು? ಎಂಬುದನ್ನು ತಿಳಿಯಬಹುದಿತ್ತು. ಅದನ್ನು ಆಧರಿಸಿ, ಅಗತ್ಯಬಿದ್ದರೆ ಭವಿಷ್ಯದ ಯೋಜನೆ ಗಳಲ್ಲಿ ಮಾರ್ಪಾಡು ಕೂಡ ಮಾಡಬಹುದಿತ್ತು. ಆದರೆ, ಯಾರೊಬ್ಬರೂ ಅದರತ್ತ ನೋಡದಿರುವುದು ಸೋಜಿಗ’ ಎಂದು ಹೆಸರು ಹೇಳಲಿಚ್ಛಿಸದ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಎಂಜಿನಿಯರೊಬ್ಬರು ಅಚ್ಚರಿ ವ್ಯಕ್ತಪಡಿಸುತ್ತಾರೆ.

ಪರೀಕ್ಷೆ ಹೇಗೆ? :  ಸೆನ್ಸರ್‌ಗಳ ಸಹಾಯದಿಂದ ಸೇತುವೆ ಒಳಭಾಗದಲ್ಲಿ ಏನೇನು ಆಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಯಬಹುದು. ಬಣ್ಣದ ಡೈ ಹಾಕಿ, ಸೇತುವೆ ಎಲ್ಲೆಲ್ಲಿ ಬಿರುಕು ಬಿಟ್ಟಿತ್ತು ಹಾಗೂ ಯಾವ ಭಾಗದಲ್ಲಿ ಹೆಚ್ಚು ಜಖಂಗೊಂಡಿತ್ತು ಮತ್ತು ಅದರ ಸಾಮರ್ಥ್ಯ ಎಷ್ಟಿತ್ತು ಎಂಬುದನ್ನೂ ನೋಡಬಹುದು. ಈ ಹಿಂದೆ ಹಲವು ಕಡೆಗಳಲ್ಲಿ ಇದು ನಡೆದಿದೆ. ಇನ್ನು ಯಾವೊಂದು ಸೇತುವೆ ನೆಲಸಮಗೊಳಿಸಿದಾಗ ಭವಿಷ್ಯದ ದೃಷ್ಟಿಯಿಂದ ಅದರ ಅಧ್ಯಯನ ತುಂಬಾ ಮಹತ್ವದ್ದು ಕೂಡ ಆಗಿದೆ ಎಂದು ಸ್ಟ್ರಕ್ಚರಲ್‌ ಎಂಜಿನಿಯರ್‌ಗಳು ತಿಳಿಸುತ್ತಾರೆ.

Advertisement

“ನೆಲಸಮಗೊಳ್ಳುತ್ತಿರುವ ಜಯದೇವ ಫ್ಲೈಓವರ್‌ ನ ಅಧ್ಯಯನ ಮಾಡಿದ್ದರೆ ಒಳ್ಳೆಯದಿತ್ತು. ಈ ಬಗ್ಗೆ ಸಂಬಂಧಪಟ್ಟ ಸಂಸ್ಥೆಗಳು ಮತ್ತು ಎಂಜಿನಿಯರ್‌ಗಳು ಮೊದಲೇ ಯೋಚಿಸಬೇಕಿತ್ತು. ಆದರೆ ಈಗ ಒಡೆದಾಗಿದೆ. ಹಾಗಾಗಿ, ಅಷ್ಟಾಗಿ ಉಪಯೋಗ ಇಲ್ಲ. ಇದೆಲ್ಲದಕ್ಕಿಂತ ವಿಚಿತ್ರವೆಂದರೆ ಬಿಎಂಆರ್‌ಸಿಎಲ್‌, ರೈಲು ಮಾರ್ಗದ ಜತೆಗೆ ಅದೇ ಸೇತುವೆ ಹಾದುಹೋಗು ಕಡೆಗೆ ರಸ್ತೆ ಕಂ ರೈಲು ಯೋಜನೆ ಕೈಹಾಕಿದ್ದು. ನನ್ನ ಪ್ರಕಾರ ಅದರ ಅವಶ್ಯಕತೆ ಇರಲಿಲ್ಲ. ಸೇತುವೆಗಳ ಬದಲಿಗೆ ಸಮೂಹ ಸಾರಿಗೆಗೆ ಒತ್ತುಕೊಡುವುದು ಸೂಕ್ತ’ ಎಂದು ವಾಸ್ತುಶಿಲ್ಪಿ ಪ್ರೊ. ನರೇಶ್‌ ನರಸಿಂಹನ್‌ ತಿಳಿಸುತ್ತಾರೆ.

ದಶಕದ ಹಿಂದಿನ ಸೇತುವೆ :  ಸುಮಾರು 12 ವರ್ಷಗಳ ಹಿಂದಷ್ಟೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸುಮಾರು 21 ಕೋಟಿ ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗಿತ್ತು. ಇದು ಬನ್ನೇರುಘಟ್ಟ ಮಾರ್ಗದ ಸಿಗ್ನಲ್‌ ಮುಕ್ತ ಸಂಚಾರ ಸೇವೆ ಒದಗಿಸುತ್ತಿತ್ತು. ಅದರಲ್ಲೂ ಮುಖ್ಯವಾಗಿ ಐಟಿ ಹಬ್‌ಗ ಇದು ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು. ಈಗ ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಇಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಅಂದಹಾಗೆ, ಸಾಮಾನ್ಯವಾಗಿ ಒಂದು ಸೇತುವೆ 80-100 ವರ್ಷ ಬಾಳಿಕೆ ಬರುತ್ತದೆ

ನಾವು ಸ್ವಯಂ ಪ್ರೇರಿತವಾಗಿ ಈ ಅಧ್ಯಯನ ನಡೆಸುವುದಕ್ಕಿಂತ ಬಿಎಂಆರ್‌ಸಿಎಲ್‌ನಿಂದ ಇಂಥ ದ್ದೊಂದು ಪ್ರಸ್ತಾವನೆ ಅಥವಾ ಮನವಿ ನಮಗೆ ಬಂದರೆ ಉತ್ತಮ. ಅಂಥದ್ದೊಂದು ಪ್ರಸ್ತಾವನೆ ಬಂದರೆ, ಪರಿಶೀಲಿಸಲು ಸಿದ್ಧ’  -ಜೆ.ಎಂ. ಚಂದ್ರಕಿಶನ್‌,ಐಐಎಸ್‌ಸಿ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರೊಫೆಸರ್‌

 

-ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next