ಮೈಸೂರು: ಆಳುವವರು ಪ್ರಜೆಗಳ ಭೌತಿಕ ಮತ್ತು ಲೌಖೀಕ ಅಗತ್ಯಗಳನ್ನು ಪೂರೈಸಬೇಕು ಎಂಬುದನ್ನು ಜಯಚಾಮರಾಜ ಒಡೆಯರ್ ಅರಿತಿದ್ದರು ಎಂದು ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ನಾಗರಾಜ್ ಅಭಿಪ್ರಾಯಪಟ್ಟರು.
ಶ್ರೀ ಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವದ ಪ್ರಯುಕ್ತ ಕರ್ನಾಟಕ ರಾಜ್ಯ ಮುಕ್ತ ವಿವಿ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪೀಠ ಮತ್ತು ದಿ ಮಿಥಿಕ್ ಸೊಸೈಟಿ ವತಿಯಿಂದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿರುವ ಜಯಚಾಮರಾಜ ಒಡೆಯರ್ ಅವರ ಜೀವನ ಮತ್ತು ಸಾಧನೆಗಳು ಕುರಿತು ಎರಡು ದಿನಗಳ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸಿಂಹಾಸನ ತ್ಯಾಗ: ಕನ್ನಡ ನಾಡು ಒಂದಾಗಬೇಕು ಎಂಬ ಉದ್ದೇಶದಿಂದ ಮೈಸೂರು ಸಂಸ್ಥಾನವನ್ನು ಒಕ್ಕೂಟ ವ್ಯವಸ್ಥೆಗೆ ಸೇರಿಸಿ ಅಧಿಕಾರ ಹಾಗೂ ಸಿಂಹಾಸನವನ್ನು ತ್ಯಾಗ ಮಾಡಿ ಮಹಾರಾಜರಾದವರೂ ಜಯಚಾಮರಾಜ ಒಡೆಯರ್. ಅವರೂ ಕೂಡ ಗಾಂಧಿ, ವಿವೇಕಾನಂದ, ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಸಾಲಿಗೆ ಸೇರುತ್ತಾರೆ. ಹೈದರಾಬಾದ್, ಬಾಂಬೆ ಯಾವುದೇ ಪ್ರಾಂತ್ಯಕ್ಕೆ ಸೇರಿದ ಪ್ರಜೆಯಾಗಿರಲಿ ನಮಗೆ ಜಯಚಾಮರಾಜ ಒಡೆಯರ್ ಅವರೆ ದೊರೆ ಎಂಬ ಭಾವನೆ ಬಂದಿದೆ. ಹಾಗಾಗಿ, ಅವರು ಕನ್ನಡಿಗರ ದೊರೆಯಾಗಿದ್ದಾರೆ ಎಂದರು.
ಏಕೀಕರಣಕ್ಕೆ ಚಾಲನೆ: ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಕನ್ನಡ ಮಾತನಾಡುವವರು ಒಟ್ಟಿಗೆ ಇರಬೇಕು ಎಂಬ ಆಲೂರು ವೆಂಕಟರಾಯರ ಆಶಯದಲ್ಲಿ ಬಲವಾದ ನಂಬಿಕೆ ಹೊಂದಿದ್ದ ಜಯಚಾಮರಾಜರು ಮೈಸೂರು ಸಂಸ್ಥಾನವನ್ನು ಭಾರತದ ಒಕ್ಕೂಟಕ್ಕೆ ಸೇರಿಸಿ, ಕರ್ನಾಟಕದ ಏಕೀಕರಣಕ್ಕೆ ಚಾಲನೆ ನೀಡುವ ಮೂಲಕ ತಮ್ಮ ಅಧಿಕಾರವನ್ನು ತ್ಯಾಗ ಮಾಡಿದರು. ಜನ ಹಿತವನ್ನು ಬಯಸುತ್ತಿದ್ದ ಅವರು ನಾಡಿನ ಜೀವವೈವಿಧ್ಯತೆಯ ಬಗ್ಗೆಯೂ ಅಪಾರ ಆಸಕ್ತಿ, ಕಾಳಜಿಯನ್ನು ಹೊಂದಿದ್ದರು ಎಂದು ಹೇಳಿದರು.
ವಿಚಾರ ಸಂಕಿರಣ: ವೇದಿಕೆ ಕಾರ್ಯಕ್ರಮದ ನಂತರ ನಡೆದ ವಿಚಾರಸಂಕಿರಣದಲ್ಲಿ ಸಹಪ್ರಾಧ್ಯಾಪಕ ಡಾ.ಲ.ನ.ಸ್ವಾಮಿ ಅವರು ಶ್ರೀ ಜಯಚಾಮರಾಜ ಒಡೆಯರ್: ಜೀವನ ಮತ್ತು ಸಾಧನೆಗಳು, ಪತ್ರಗಾರ ಇಲಾಖೆಯ ನಿವೃತ್ತ ಉಪನಿರ್ದೇಶಕಿ ಡಾ.ಜೆ.ವಿ.ಗಾಯತ್ರಿ ಅವರು ಜಯಚಾಮರಾಜ ಒಡೆಯರ್: ಸ್ವಾತಂತ್ರ ಚಳವಳಿ ಮತ್ತು ಸಹಪ್ರಾಧ್ಯಾಪಕಿ ಡಾ.ವಿ.ಅನುರಾಧಾ ಅವರು 1958 ರಿಂದ 1974ರವರೆಗಿನ ಸ್ಥಿತ್ಯಂತರಗಳು ಎಂಬ ವಿಷಯದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರಾಮುವಿ ಕುಲಪತಿ ಡಾ.ವಿದ್ಯಾಶಂಕರ್, ಕುಲಸಚಿವ ಪ್ರೊ.ಬಿ.ರಮೇಶ್, ಮಿಥಿಕ್ ಸೊಸೈಟಿ ಅಧ್ಯಕ್ಷ ಪ್ರೊ.ಕೃ.ನರಹರಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಪೀಠದ ಸಂಯೋಜನಾಧಿಕಾರಿ ಡಾ.ಶಲ್ವಪ್ಪಿಳೈ ಅಯ್ಯಂಗಾರ್ ಸೇರಿದಂತೆ ಮತ್ತಿತರರು ಇದ್ದರು.
ಒಡೆಯರ್ ಬಗ್ಗೆ ಸರ್ದಾರ್ ಪಟೇಲ್ ಏನು ಹೇಳಿದ್ರು?: ಆಳುವವರು ಪ್ರಜೆಗಳ ಭೌತಿಕ ಮತ್ತು ಲೌಖೀಕ ಅಗತ್ಯಗಳನ್ನು ಪೂರೈಸಬೇಕು ಎಂಬುದನ್ನು ಜಯಚಾಮರಾಜ ಒಡೆಯರ್ ಅರಿತಿದ್ದರು ಅದರಂತೆ ಆಡಳಿತ ನಡೆಸಿದ ಆದರ್ಶ ರಾಜ. ಅವರ ಅವಧಿಯಲ್ಲಿ ಮೈಸೂರು ಪ್ರಗತಿಯನ್ನು ನೋಡಿದ ಸರ್ದಾರ್ ವಲ್ಲಭಾಯ್ ಪಟೇಲರು “ಮೈಸೂರು ರಾಜರಂತಹ ರಾಜರು ಇದ್ದರೇ ನಮಗೆ ಸ್ವತಂತ್ರ ಮತ್ತು ಪ್ರಜಾಪ್ರಭುತ್ವ ಬೇಕಾಗಿಲ್ಲ ಎಂದು ಹೇಳಿದ್ದರು’ ಎಂಬುದನ್ನು ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ನಾಗರಾಜ್ ಉಲ್ಲೇಖೀಸಿದರು.
ಜಯಚಾಮರಾಜರು ಫಿಲಾಸಫಿಯಲ್ಲಿಯೂ ಕಿಂಗ್ ಆಗಿದ್ದರು. ಭಾರತೀಯ ತತ್ವ ಶಾಸ್ತ್ರ, ಆಧ್ಯಾತ್ಮದಲ್ಲಿ ವಿದ್ವತ್ ಹೊಂದಿದ್ದ ಅವರು ಪಾಶ್ಚಾತ್ಯರಿಗೆ ಉಪನ್ಯಾಸ ನೀಡುತ್ತಿದ್ದರು. ಅಲ್ಲದೇ, ತತ್ವಶಾಸ್ತ್ರದ ಸಾಕಷ್ಟು ಪುಸ್ತಕಗಳನ್ನು ಅವರು ರಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.