ಬೆಂಗಳೂರು: ಅಕ್ರಮ ಆದಾಯ ಗಳಿಕೆ ಆರೋಪ ಪ್ರಕರಣದಲ್ಲಿ ಸಜಾ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ
ತಮಿಳುನಾಡಿನ ಶಶಿಕಲಾ ನಟರಾಜನ್ ಹಾಗೂ ಇಳವರಸಿ ಕನ್ನಡ ಭಾಷೆ ಕಲಿಕೆ ಮೇಲೆ ಒಲವು ತೋರಿದ್ದಾರೆ.
2017ರ ಫೆಬ್ರವರಿಯಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ, ಇಳವರಸಿ ಈಗಾಗಲೇ ಕನ್ನಡ ಪದಗಳನ್ನು ಕಲಿತಿದ್ದು, ಭಾಷೆ ಅರ್ಥ ಮಾಡಿಕೊಳ್ಳುತ್ತಾರೆ. ಸರಳವಾಗಿ ಕನ್ನಡವನ್ನು ಮಾತನಾಡುತ್ತಾರೆ ಎಂದು ತಿಳಿದು ಬಂದಿದೆ.
ಕನ್ನಡ ಭಾಷೆ ಬಗೆಗಿನ ತಮ್ಮ ಪ್ರೀತಿ ಮುಂದುರಿಸುವ ದ್ಯೋತಕವಾಗಿ ಒಂದು ವರ್ಷದ ಡಿಪ್ಲೋಮಾ ಕೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಶಶಿಕಲಾ ಹಾಗೂ ಇಳವರಸಿ ಅವರ ಅರ್ಜಿಗಳು ಬೆಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ಕೇಂದ್ರಕ್ಕೆ ಸಲ್ಲಿಕೆಯಾಗಿವೆ ಎಂದು ಕಾರಾಗೃಹ ಇಲಾಖೆಯ ಉನ್ನತ ಮೂಲಗಳು”ಉದಯವಾಣಿ’ಗೆ ಸ್ಪಷ್ಟಪಡಿಸಿವೆ.
ಒಂದು ವರ್ಷದ ಡಿಪ್ಲೋಮಾ ಕೋರ್ಸ್‌ಗೆ ಶಶಿಕಲಾ ಹಾಗೂ ಇಳವರಸಿ ಅವರ ಅರ್ಜಿ ಸ್ವೀಕೃತೊಂಡಿದ್ದು, ಸದ್ಯದಲ್ಲಿಯೇ ಕೋರ್ಸ್ ಕೂಡ ಆರಂಭವಾಗಲಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ದೂರಶಿಕ್ಷಣ ಕೇಂದ್ರದ ನಿರ್ದೇಶಕ ಬಿ.ಸಿ ಮೈಲಾರಪ್ಪ ತಿಳಿಸಿದ್ದಾರೆ.
ಶಶಿಕಲಾ ಅವರು ಸಾಮಾನ್ಯ ಕೈದಿಗಳಂತೆ ಎಲ್ಲರೂ ಜತೆಯೂ ಬೆರೆಯುತ್ತಾರೆ.ವಹಿಸಿದ ಕೆಲಸವನ್ನು ನಿರ್ವಹಿಸುತ್ತಾರೆ. ಈ ಹಿಂದೆ ಕಲ್ಲಂಗಡಿ ಹಣ್ಣು ಬೆಳೆಯಲು ಆಸಕ್ತಿ ತೋರಿದ್ದರು ಅದರಲ್ಲಿ ಯಶಸ್ವಿಯೂ ಆಗಿದ್ದರು. ಇದೀಗ, ತರಕಾರಿ ಬೆಳೆಯುತ್ತಿದ್ದಾರೆ ಎಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದರು.
ತಮಿಳುನಾಡಿನ ಮಾಜಿ ಸಿಎಂ ಜೆ. ಜಯಲಲಿತಾ ಅವರ ಆಪ್ತೆಯಾಗಿರುವ ಶಶಿಕಲಾ ಅಕ್ರಮ ಆಸ್ತಿಗಳಿಕೆ ಆರೋಪ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದರಿಂದ ಸಜಾ ಕೈದಿಯಾಗಿ 2017ರ ಫೆಬ್ರವರಿಯಿಂದ ಜೈಲಿನಲ್ಲಿದ್ದಾರೆ.