ಮುಂಬೈ: ತವರಿನ ವಿಶ್ವಕಪ್ ಗೆ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾಗೆ ಮಹತ್ವದ ಆಟಗಾರರ ಫಿಟ್ನೆಸ್ ನದ್ದೇ ಸಮಸ್ಯೆಯಾಗಿದೆ. ಪ್ರಮುಖ ಆಟಗಾರರಾದ ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ಮತ್ತು ಕೆಎಲ್ ರಾಹುಲ್ ಅವರು ಗಾಯಗೊಂಡಿದ್ದು, ಹಲವು ಸಮಯದಿಂದ ತಂಡಕ್ಕೆ ಲಭ್ಯವಾಗುತ್ತಿಲ್ಲ.
ಇದೀಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ವೇಗಿ ಜಸ್ಪ್ರಿತ್ ಬುಮ್ರಾ ಅವರ ಬಗ್ಗೆ ಮಹತ್ವದ ಅಪ್ಡೇಟ್ ಕೊಟ್ಟಿದ್ದಾರೆ. ಬುಮ್ರಾ ಅವರು ಸಂಪೂರ್ಣ ಫಿಟ್ ಆಗಿದ್ದು, ಮುಂದಿನ ಐರ್ಲೆಂಡ್ ಸರಣಿಗೆ ಆಯ್ಕೆಯಾಗಲಿದ್ದಾರೆ ಎಂದಿದ್ದಾರೆ.
ಜಸ್ಪ್ರೀತ್ ಬುಮ್ರಾ ಅವರು ಬೆನ್ನು ನೋವಿನ ಕಾರಣದಿಂದ ಹಲವು ಸಮಯದಿಂದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಸಂಪೂರ್ಣ ವೇಗದಲ್ಲಿ ಬೌಲಿಂಗ್ ಮಾಡುವ ಬಗ್ಗೆ ಕೆಲ ದಿನಗಳ ಹಿಂದೆ ಬಿಸಿಸಿಐ ಮಾಹಿತಿ ನೀಡಿತ್ತು.
ಇದನ್ನೂ ಓದಿ:Bantwala: ಪೊಲೀಸ್ ಕುಟುಂಬದ ಮಾನಭಂಗಕ್ಕೆ ಯತ್ನ; ಇಬ್ಬರ ಬಂಧನ
ಭಾರತ ತಂಡವು ಐರ್ಲೆಂಡ್ ವಿರುದ್ಧ ಐರ್ಲೆಂಡ್ ನಲ್ಲಿ ಮೂರು ಟಿ20 ಪಂದ್ಯಗಳ ಸರಣಿ ಆಡಲಿದೆ. ಈ ಮೂರು ಪಂದ್ಯಗಳು ಆಗಸ್ಟ್ 18, 20 ಮತ್ತು 23ರಂದು ಡಬ್ಲಿನ್ ನಲ್ಲಿ ನಡೆಯಲಿದೆ.
ಭಾರತ ತಂಡವು ಸದ್ಯ ವೆಸ್ಟ್ ಇಂಡೀಸ್ ನಲ್ಲಿ ಏಕದಿನ ಸರಣಿ ಆಡುತ್ತಿದೆ. ಇದಾದ ಬಳಿಕ ಐದು ಟಿ20 ಪಂದ್ಯಗಳು ನಡೆಯಲಿದೆ. ಇದರ ಬಳಿಕ ಭಾರತ ತಂಡವು ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಇದಕ್ಕೆ ಇನ್ನೂ ತಂಡ ಪ್ರಕಟಿಸಿಲ್ಲ.