ಮುಂಬೈ: ಟಿ20 ವಿಶ್ವಕಪ್ 2024 ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಇನ್ನು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ ಮಾತ್ರ ಮುಂದುವರಿಯುದಾಗಿ ರೋಹಿತ್ ಹೇಳಿದ್ದರು. ಭಾರತೀಯ ತಂಡದಲ್ಲಿ ಇಬ್ಬರು ನಾಯಕರನ್ನು ಹೊಂದುವ ಸಂಪ್ರದಾಯ ಇರದ ಕಾರಣ ರೋಹಿತ್ ಶರ್ಮಾ ಅವರು ಏಕದಿನ ಮತ್ತು ಟೆಸ್ಟ್ ನಾಯಕತ್ವವನ್ನೂ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಈಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟನೆ ನೀಡಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಭಾನುವಾರ ವೆಸ್ಟ್ ಇಂಡೀಸ್‌ನಲ್ಲಿ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಟೀಮ್ ಇಂಡಿಯಾವನ್ನು ವೀಡಿಯೊ ಸಂದೇಶದ ಮೂಲಕ ಅಭಿನಂದಿಸಿದ್ದಾರೆ. ಅಲ್ಲದೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂದಿನ ವರ್ಷದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಬಾರ್ಬಡೋಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಶಸ್ತಿ ಗೆಲುವಿನ ನಂತರ ಟಿ20ಗಳಿಂದ ನಿವೃತ್ತಿ ಘೋಷಿಸಿದ ಹಿರಿಯ ಮೂವರು ರೋಹಿತ್, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಗೆಲುವನ್ನು ಅರ್ಪಿಸಿದರು.
“ಈ ಗೆಲುವಿನ ನಂತರ ಮುಂದಿನ ಹಂತವು 2025 ರ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಮತ್ತು ಚಾಂಪಿಯನ್ಸ್ ಟ್ರೋಫಿಯಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ನಾವು ಎರಡೂ ಪಂದ್ಯಾವಳಿಗಳನ್ನು ಗೆಲ್ಲುತ್ತೇವೆ ಎಂದು ನನಗೆ ನಿಜವಾಗಿಯೂ ವಿಶ್ವಾಸವಿದೆ” ಎಂದು ಶಾ ಹೇಳಿದರು.
ಈ ಮೂಲಕ ಜಯ್ ಶಾ ಅವರು ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವ ಮುಂದುವರಿಯುವ ಬಗ್ಗೆ ಜಯ್ ಶಾ ಖಚಿತ ಪಡಿಸಿದ್ದಾರೆ.