Advertisement

ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಒಯ್ದ ನೆಹರೂ ತಪ್ಪು ಹಿಮಾಲಯಕ್ಕಿಂತಲೂ ದೊಡ್ಡದು

10:20 AM Sep 30, 2019 | Team Udayavani |

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಮತ್ತೆ ಮಾಜೀ ಪ್ರಧಾನಿ ಜವಾಹರ ಲಾಲ್ ನೆಹರೂ ವಿರುದ್ಧ ಮಾತಿನ ಚಾಟಿ ಬೀಸಿದ್ದಾರೆ. ಕಾಶ್ಮೀರ ಸಮಸ್ಯೆ ಸುದೀರ್ಘ ಸಮಯದಿಂದ ಇತ್ಯರ್ಥವಾಗದೇ ಇರಲು ನೆಹರೂ ಅವರೇ ನೇರ ಕಾರಣ ಎಂದು ಅಮಿತ್ ಶಾ ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ.

Advertisement

ನೆಹರೂ ಅವರ ಈ ತಪ್ಪು ಹಿಮಾಲಯ ಪರ್ವತಕ್ಕಿಂತಲೂ ದೊಡ್ಡದಾಗಿತ್ತು ಎಂದು ಶಾ ಅವರು ಅಭಿಪ್ರಾಯಪಟ್ಟರು. ಸರ್ದಾರ್ ಪಟೇಲ್ ಅವರು 630 ಪ್ರಾಂತ್ಯಗಳನ್ನು ಒಗ್ಗೂಡಿಸಿದರು. ನೆಹರೂ ಅವರಿಗಿದ್ದಿದ್ದು ಜಮ್ಮುಕಾಶ್ಮೀರವನ್ನು ಭಾರತದೊಂದಿಗೆ ಒಗ್ಗೂಡಿಸುವ ಒಂದು ಜವಾಬ್ದಾರಿಯಷ್ಟೇ ಆಗಿತ್ತು, ಆದರೆ ಅವರು ಅದರಲ್ಲೂ ವಿಫಲರಾದರು ಮತ್ತು ಈ ಕಾರ್ಯವನ್ನು 2019ರಲ್ಲಿ ಪೂರ್ಣಗೊಳಿಸಲಾಯಿತು ಎಂದು ಅಮಿತ್ ಶಾ ಅವರು ತಿಳಿಸಿದರು.

370ನೇ ಪರಿಚ್ಛೇದ ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಇವತ್ತಿಗೂ ಹಲವಾರು ಗಾಳಿಸುದ್ದಿಗಳು ಹರಡುತ್ತಿದ್ದು ಇವುಗಳಿಗೆಲ್ಲಾ ಸ್ಪಷ್ಟನೆ ನೀಡುವುದು ಅಗತ್ಯವಾಗಿದೆ ಎಂದು ಹೇಳುವ ಮೂಲಕ ಶಾ ಅವರು ಮೋದಿ ಸರಕಾರ ಕೈಗೊಂಡ 370ನೇ ವಿಧಿ ರದ್ಧತಿ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡರು.

ಇತಿಹಾಸವನ್ನು ತಿರುಚಿದ್ದಾರೆ ಎಂಬ ಕಾರಣಕ್ಕಾಗಿ ಅಮಿತ್ ಶಾ ಅವರು ಈ ಹಿಂದಿನ ಕಾಂಗ್ರೆಸ್ ಸರಕಾರವನ್ನೂ ಸಹ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ‘1947ರಿಂದ ಕಾಶ್ಮೀರವು ವಿವಾದಗ್ರಸ್ಥ ಪ್ರದೇಶವಾಗಿದ್ದು ದೇಶದೆಲ್ಲೆಡೆ ಚರ್ಚೆಯ ವಸ್ತುವಾಗಿತ್ತು. ಆದರೆ ತಿರುಚಿದ ಇತಿಹಾಸವನ್ನು ಜನರ ಮುಂದೆ ಇಡಲಾಯ್ತು. ಅಂದು ಯಾರು ಈ ತಪ್ಪನ್ನು ಮಾಡಿದ್ದರೋ ಅವರೇ ತಪ್ಪು ಇತಿಹಾಸವನ್ನು ಜನರ ಮುಂದೆ ಇಟ್ಟಿದ್ದರು, ಸತ್ಯಾಂಶವನ್ನು ಜನರಿಂದ ಮರೆಮಾಚಲಾಗಿತ್ತು. ಹಾಗಾಗಿ ಸರಿಯಾದ ಇತಿಹಾಸವನ್ನು ಬರೆದು ಜನರ ಮುಂದೆ ಇರಿಸುವ ಸಮಯ ಇದೀಗ ಬಂದಿದೆ ಎಂದು ನನಗೆ ಅನ್ನಿಸುತ್ತಿದೆ’ ಎಂದು ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next