ಭೋಪಾಲ್ : ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಪಾಕಿಸ್ಥಾನ ಜಮ್ಮು ಮತ್ತು ಕಾಶ್ಮೀರದ ಮೇಲೆ ದಾಳಿ ನಡೆಸಿದಾಗ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಪಾಕ್ ದಾಳಿಯನ್ನು ಎದುರಿಸಲು ಆರ್‌ಎಸ್‌ಎಸ್ ನೆರವನ್ನು ಕೋರಿದ್ದರು; ಅಂತೆಯೇ ಸಂಘದ ಕಾರ್ಯಕರ್ತರು ಅಲ್ಲಿಗೆ ಧಾವಿಸಿ ನೆರವು ನೀಡಿದ್ದರು ಎಂದು ಕೇಂದ್ರ ಸಚಿವೆ ಉಮಾ ಭಾರತಿ ತಿಳಿಸಿದ್ದಾರೆ.
“ರಾಷ್ಟ್ರೀಯ ಸ್ವಯಂ ಸೇವಕ ಸಂಘವು ದೇಶದ ರಕ್ಷಣೆಗಾಗಿ ಕೇವಲ ಮೂರು ದಿನಗಳಲ್ಲಿ ಯುದ್ಧಕ್ಕೆ ಸಜ್ಜಾಗುವ ಸಾಮರ್ಥ್ಯವನ್ನು ಹೊಂದಿದೆ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ್ದ ಹೇಳಿಕೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಖಂಡಿಸಿ “ದೇಶದ ಹೆಮ್ಮೆಯ ಸೇನೆಯನ್ನು ಅವಮಾನಿಸಿರುವ ಭಾಗವತ್ ಅವರಿಗೆ ನಾಚಿಕೆಯಾಗಬೇಕು; ಅವರು ದೇಶದ ಮುಂದೆ ಕ್ಷಮೆಯಾಚಿಸಬೇಕು’ ಎಂದು ಗುಡುಗಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಉಮಾ ಭಾರತಿ ಐತಿಹಾಸಿಕ ವಿದ್ಯಮಾನವನ್ನು ಆಧರಿಸಿ ಈ ಹೇಳಿಕೆಯನ್ನು ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಉಮಾ ಭಾರತಿ ಅವರು, ಭಾಗವತ್ ಅವರ ಹೇಳಿಕೆಗೆ ನೇರ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
”ಭಾರತಕ್ಕೆ ಸ್ವಾತಂತ್ರ್ಯಕ್ಕೆ ಸಿಕ್ಕಿದಾಕ್ಷಣ ಜಮ್ಮು ಕಾಶ್ಮೀರದ ಮಹಾರಾಜ ಹರಿ ಸಿಂಗ್ ಅವರು ಕಾಶ್ಮೀರವನ್ನು ಭಾರತಕ್ಕೆ ಸೇರಿಸುವ ಒಪ್ಪಂದಕ್ಕೆ ಸಹಿ ಹಾಕಲಿಲ್ಲ; ಆಗ ಶೇಖ್ ಅಬ್ದುಲ್ಲ ಅವರು ಸಹಿ ಹಾಕುವಂತೆ ಹರಿ ಸಿಂಗ್ ಅವರನ್ನು ಒತ್ತಾಯಿಸುತ್ತಿದ್ದರು. ನೆಹರೂ ಅವರಿಗೆ ಆಗ ಏನು ಮಾಡಬೇಕೆಂದು ತೋಚಲಿಲ್ಲ; ಅಷ್ಟರೊಳಗೆ ಪಾಕಿಸ್ಥಾನ ಜಮ್ಮು ಕಾಶ್ಮೀರದ ಮೇಲೆ ದಾಳಿ ನಡೆಸಿ ಅದರ ಸೈನಿಕರು ಉಧಾಂಪುರದ ವರೆಗೂ ಮುನ್ನುಗ್ಗಿ ಬಂದಿದ್ದರು. .ಪಾಕ್ ದಾಳಿಯನ್ನು ಎದುರಿಸಲು ಆಗ ಭಾರತೀಯ ಸೇನೆಯ ಬಳಿ ಯಾವುದೇ ಹೈಟೆಕ್ ಶಸ್ತ್ರಾಸ್ತ್ರಗಳು ಇರಲಿಲ್ಲ. ಆ ಸಂದರ್ಭದಲ್ಲಿ ನೆಹರೂ ಅವರು ಆಗಿನ ಆರ್‌ಎಸ್‌ಎಸ್ ಮುಖ್ಯಸ್ಥ ಗುರು ಗೋಲ್‌ವಾಲ್ಕರ್ ಅವರಿಗೆ ಪತ್ರ ಬರೆದು ಆರ್‌ಎಸ್‌ಎಸ್ ಕಾರ್ಯಕರ್ತರ ನೆರವನ್ನು ಕೋರಿದರು. ತತ್‌ಕ್ಷಣವೇ ಆರ್‌ಎಸ್‌ಎಸ್ ಕಾರ್ಯಕರ್ತರು ಜಮ್ಮು ಕಾಶ್ಮೀರಕ್ಕೆ ಧಾವಿಸಿ ನೆರವಾದರು” ಎಂದು ಉಮಾ ಭಾರತಿ ಹೇಳಿದರು.