Advertisement

ಸವಳು-ಜವಳು ನೆಲದಲ್ಲಿ ನಾಯಕರ ಮತ ಜೋಳಿಗೆ

02:26 PM Apr 07, 2018 | |

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಕೇವಲ ಎರಡೇ ಕುಟುಂಬಗಳು ಬಹುತೇಕ ಆಧುನಿಕ ಸಾಮ್ರಾಜ್ಯ ಮಾಡಿಕೊಂಡು ವಾಡೆ ಮನೆತನದ ಅಘೋಷಿತ ಮೀಸಲು ಕ್ಷೇತ್ರದಂತಿರುವ ವಿಶಿಷ್ಟ ಕ್ಷೇತ್ರ. ಈ ಕ್ಷೇತ್ರದಲ್ಲಿ ಕಳೆದ 9 ಚುನಾವಣೆಗಳಲ್ಲಿ ಗೆದ್ದಿರುವ ವಾಡೆಗೌಡರ ಪ್ರಾಬಲ್ಯವನ್ನು ಬೇಧಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಗೆದ್ದಿರುವ ಎರಡು ಕುಟುಂಬದವರಲ್ಲಿ ಸಚಿವರಾಗಿಯೋ, ಸಚಿವ ಸ್ಥಾನಕ್ಕೆ ಸಮಾನವಾದ ಹುದ್ದೆಗಳ ಅಧಿಕಾರವನ್ನೋ ಪಡೆಯುತ್ತಲೇ ಬಂದರೂ ಸಮಸ್ಯೆಗಳ ಆಗರವಾಗಿರುವ ಕ್ಷೇತ್ರ.

Advertisement

ಮುದ್ದೇಬಿಹಾಳ ಕ್ಷೇತ್ರ ಬಸವೇಶ್ವರರ ಪತ್ನಿ ನೀಲಮ್ಮ ತಾಯಿಯ ಐಕ್ಯಸ್ಥಳದ ಮಡಿಲಲ್ಲಿರುವ ಪವಿತ್ರ ಭೂಮಿಯೂ ಹೌದು. ಪಕ್ಕದಲ್ಲೇ ನದಿ ಹರಿದರೂ ಹಾಗೂ ಪೂರ್ವ-ಪಶ್ಚಿಮದಲ್ಲಿ ಜಲಾಶಯಗಳು ತಲೆ ಎತ್ತಿದರೂ ಇತರೆ ಕ್ಷೇತ್ರಗಳಂತೆ ಇಲ್ಲಿಯೂ ಕುಡಿಯುವ ನೀರಿಗೆ ಪರದಾಡುವ ದುಃಸ್ಥಿತಿ ತಪ್ಪಿಲ್ಲ. ಹಲವೆಡೆ ನೀರಾವರಿ ಶಾಪವಾಗಿಯೂ ಪರಿಣಮಿಸಿದೆ ಎಂಬುವುದಕ್ಕೆ ಸವಳು-ಜವಳು ಸಮಸ್ಯೆಯಿಂದ ರೈತರು ಸಂಕಷ್ಟ ಎದುರಿಸುತ್ತಿರುವುದೇ ಸಾಕ್ಷಿ.

ಆಲಮಟ್ಟಿ ಎಡದಂಡೆ ನಾಲೆ ಈಗಾಗಲೇ ಕ್ಷೇತ್ರದ ಕೆಲ ಪ್ರದೇಶಕ್ಕೆ ನೀರಾವರಿ ಕಲ್ಪಿಸಿದ್ದರೆ, ಚಿಮ್ಮಲಗಿ ಯೋಜನೆ ಪ್ರಾಯೋಗಿಕವಾಗಿ ನೀರು ಹರಿಸಿದೆ. ಕ್ಷೇತ್ರದಲ್ಲಿ ಸುಮಾರು 60-70 ಸಾವಿರ ಹೆಕ್ಟೇರ್‌ ನೀರಾವರಿ ಸೌಲಭ್ಯ ಕಾಣಲಿದೆ. ನೀರಾವರಿ ಆಗಿರುವ ಆಲಮಟ್ಟಿಯ ಲಾಲ್‌ ಬಹದ್ದೂರ್‌ ಶಾಸ್ತ್ರೀ ಜಲಾಶಯದ ಕೆಳಭಾಗದ ಹುಲ್ಲೂರ ಭಾಗದಲ್ಲಿ ಅಧಿಕ ನೀರಿನ ಸೋರಿಕೆಯಿಂದ ಸಾವಿರಾರು ಎಕರೆ ಜಮೀನು ಸವಳು- ಜವಳಾಗಿದೆ. ಹೀಗಾಗಿ ಈ ಭಾಗದ ಜನರ ಪಾಲಿಗೆ ನೀರಾವರಿ ಶಾಪವಾಗಿ ಪರಿಣಮಿಸಿದೆ. ಈ ಹಂತದಲ್ಲೇ
ನಾಗರಬೆಟ್ಟ, ಬೂದಿಹಾಳ ಪೀರಾಪುರ ಯೋಜನೆಗಳು ರೂಪುಗೊಂಡು ಈಗಷ್ಟೇ ಭೂಮಿಪೂಜೆ ಕಂಡಿವೆ.

ಇಂತಹ ಕ್ಷೇತ್ರದಲ್ಲಿ ಸಂಪುಟ ದರ್ಜೆಗೆ ಸಮಾನವಾದ ರಾಜ್ಯ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿ ಹುದ್ದೆಯಲ್ಲಿರುವ ಸಿ.ಎಸ್‌. ನಾಡಗೌಡ ಈ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿದ್ದಾರೆ. ಕಳೆದ ನಾಲ್ಕು ಚುನಾವಣೆಯಲ್ಲಿ ಸತತ ಗೆಲುವು ಕಂಡಿದ್ದಾರೆ. ಅದಕ್ಕೂ ಮೊದಲು ಒಂದು ಬಾರಿ ಆಯ್ಕೆಯಾಗಿ, ಒಂದು ಸೋಲು ಕಂಡಿದ್ದಾರೆ. ಈ ಬಾರಿಯೂ ಕಾಂಗ್ರೆಸ್‌ ಅಭ್ಯರ್ಥಿ ಅವರೇ ಎಂಬುದು ಸ್ಪಷ್ಟ. ಸತತ ಐದು ಬಾರಿ ಗೆದ್ದಾಗಲೂ ಇವರ ನೇರ ಎದುರಾಳಿ ಆಗಿದ್ದವರು ದೇಶಮುಖ ಮನೆತನದ ವಿಮಲಾಬಾಯಿ ಅವರೇ ಎಂಬುದು ಗಮನಾರ್ಹ. ನಾಡಗೌಡ ಕುಟುಂಬದ ಸಿ.ಎಸ್‌. ನಾಡಗೌಡ ಅವರಿಗಿಂತ ಮೊದಲು ಜನತಾ ಪಕ್ಷದ ಖಾತೆ ತೆರೆದವರು ನಾಲತವಾಡದ ದೇಶಮುಖ ಜಗದೇವರಾವ್‌. 1978ರಿಂದಲೇ ಸತತ ಮೂರು ಬಾರಿ ಶಾಸಕರಾಗಿ ಮೊದಲ ಹ್ಯಾಟ್ರಿಕ್‌ ಬಾರಿಸಿದ್ದ ಅವರು, ಸಚಿವರೂ ಆಗಿದ್ದರು. ಇವರ ನಿಧನದ ಬಳಿಕ ಪತ್ನಿ ವಿಮಲಾಬಾಯಿ 1994ರಲ್ಲಿ ಜನತಾದಳದಿಂದ ಸ್ಪ ರ್ಧಿಸಿ ಗೆದ್ದಿದ್ದರು. ಶಾಸಕರಾದ ಮೊದಲ
ಅವಧಿಯಲ್ಲೇ ಇವರು ಕೂಡ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆ ಮೂಲಕ ಜಿಲ್ಲೆಯಲ್ಲಿ ಸತಿ-ಪತಿ ಇಬ್ಬರೂ ಮಂತ್ರಿಯಾದ
ಕ್ಷೇತ್ರ ಎನಿಸಿದೆ.

ನಾಡಗೌಡರ ಸಾಂಪ್ರದಾಯಿಕ ಎದುರಾಳಿ ದೇಶಮುಖ ಕುಟುಂಬದ ವಿಮಲಾಬಾಯಿ ಅವರು ಈ ಬಾರಿ ಸ್ಪರ್ಧಿಸುವುದು ಅನುಮಾನ. ಕಳೆದ ಬಾರಿ ಜೆಡಿಎಸ್‌ ಟಿಕೆಟ್‌ ಸಿಗದೆ ಕೆಜೆಪಿ ಅಭ್ಯರ್ಥಿಯಾಗಿ ಸೋತಿದ್ದ ವಿಮಲಾಬಾಯಿ ಇದೀಗ ಸಕ್ರಿಯ ರಾಜಕೀಯದಿಂದ
ದೂರವಾಗಿದ್ದಾರೆ.

Advertisement

ಆರನೇ ಬಾರಿಗೆ ಶಾಸಕರಾಗುವ ಕನಸು ಕಂಡಿರುವ ಸಿ.ಎಸ್‌. ನಾಡಗೌಡ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಖಚಿತವಾಗಿದೆ. ದೇವರಹಿಪ್ಪರಗಿ ಕ್ಷೇತ್ರದ ಕಾಂಗ್ರೆಸ್‌ ಉಚ್ಛಾಟಿತ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಬಿಜೆಪಿ ಸೇರಿದ್ದು ಬಹುತೇಕ ಇವರ ಎದುರಾಳಿ ಎಂದೇ ಈಗಾಗಲೇ ಬಿಂಬಿಸಲಾಗಿದೆ. ಅಂದುಕೊಂಡಂತೆ ಆದಲ್ಲಿ ನಾಡಗೌಡ ಅವರು ಸಾಂಪ್ರದಾಯಿಕ ಎದುರಾಳಿ ದೇಶಮುಖ
ಕುಟುಂಬದ ಬದಲಾಗಿ ಹೊಸಮುಖವನ್ನು ಎದುರಿಸುವ ಮೊಲದ ಸ್ಪರ್ಧೆ ಎನಿಸಲಿದೆ. ಈ ದೇಶಮುಖ-ನಾಡಗೌಡ ಕುಟುಂಬಗಳ ಭದ್ರಕೋಟೆ ಛಿದ್ರ ಮಾಡುವ ಉಮೇದಿನಲ್ಲಿ ಬಿಜೆಪಿ ಸ್ಪ ರ್ಧಿಯಾಗಿ 2004 ಹಾಗೂ 2008ರಲ್ಲಿ ಕಣಕ್ಕಿಳಿದಿದ್ದವರು ಮಂಗಳಾದೇವಿ ಬಿರಾದಾರ.

ಎರಡು ಸೋಲು ಕಂಡಿದ್ದರೂ ಈ ಬಾರಿ ಮತ್ತೆ ಬಿಜೆಪಿ ಟಿಕೆಟ್‌ ಆಕಾಂಕ್ಷಿ. ಇದೇ ಕಾರಣಕ್ಕೆ ಎ.ಎಸ್‌. ಪಾಟೀಲ ನಡಹಳ್ಳಿ ಬಿಜೆಪಿ ಸೇರ್ಪಡೆ ಬಳಿಕ ಬಂಡಾಯದ ಕಹಳೆ ಮೊಳಗಿಸಿರುವ ಮಂಗಳಾದೇವಿ, ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತಿದ್ದಾರೆ.

ಇನ್ನು ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಅವರ ಅನಿರೀಕ್ಷಿತ ಪಕ್ಷಾಂತರದಿಂದ ಜೆಡಿಎಸ್‌ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದೆ. ನಡಹಳ್ಳಿ ಅವರ ಸಹೋದರ ಹಾಗೂ ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಮೂರನೇ ಸ್ಥಾನದಲ್ಲಿದ್ದ ಶಾಂತಗೌಡ ಪಾಟೀಲ ಕಣಕ್ಕಿಳಿಯುವುದು ಮೇಲ್ನೋಟಕ್ಕೆ ಖಚಿತವಾಗಿ¨

ಕ್ಷೇತ್ರದ ಬೆಸ್ಟ್‌ ಏನು?
ನಾಗರಬೆಟ್ಟ ಏತ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ, ತಾಳಿಕೋಟೆ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಪೂರ್ಣ, ಮುದ್ದೇಬಿಹಾಳ ಪಟ್ಟಣದಲ್ಲಿ ಅನುಷ್ಠಾನದ ಹಂತದಲ್ಲಿ, ತಾಳಿಕೋಟೆ, ತಂಗಡಗಿ, ಆಲಮಟ್ಟಿ, ನಾಲತವಾಡ ರಸ್ತೆಗಳು ರಾಜ್ಯ ಹೆದ್ದಾರಿ ಮೇಲ್ದರ್ಜೆಗೆ, ಮುದ್ದೇಬಿಹಾಳಕ್ಕೆ ಕೃಷಿ ಸಂಶೋಧನಾ ಕೇಂದ್ರ ಮಂಜೂರು, ಬಹುಹಳ್ಳಿ ಕುಡಿವ ನೀರಿನ ಯೋಜನೆಗಳು ಅನುಷ್ಠಾನಕ್ಕೆ
ಸಿದ್ಧತೆ. ಮುದ್ದೇಬಿಹಾಳ ಬಸ್‌ ನಿಲ್ದಾಣ ನವೀಕರಣ. ನ್ಯಾಯಾಲಯ, ತಹಶೀಲ್ದಾರ್‌ ಕಚೇರಿಗಳ ನೂತನ ಕಟ್ಟಡ ನಿರ್ಮಾಣ.

ಕ್ಷೇತ್ರದ ದೊಡ್ಡ ಸಮಸ್ಯೆ?
ಮುದ್ದೇಬಿಹಾಳ, ತಾಳಿಕೋಟೆ ಪಟ್ಟಣಕ್ಕೆ 24×7 ಕುಡಿವ ನೀರು ಪೂರೈಸುವ ಯೋಜನೆ ನನೆಗುದಿಗೆ, ಮುದ್ದೇಬಿಹಾಳದಲ್ಲಿ ಉಪ ವಿಭಾಗ ಕಚೇರಿ ಪ್ರಾರಂಭ ನನೆಗುದಿಗೆ. ಈಡೇರದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಘಟಕ ಸ್ಥಾಪನೆ ಬೇಡಿಕೆ, ಬೃಹತ್‌ ಕೈಗಾರಿಕೆ ಸ್ಥಾಪನೆ ಆಗಿಲ್ಲ. ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರೀ ಜಲಾಶಯ ಕೆಳ ಭಾಗದ ರೈತರ ಜಮೀನು ಸವಳು ತಡೆಗೆ ಕ್ರಮ ಕೈಗೊಂಡಿಲ್ಲ

ಶಾಸಕರು ಏನಂತಾರೆ?
ಕ್ಷೇತ್ರಕ್ಕೆ ಅಗತ್ಯ ಇರುವ ಸೌಲಭ್ಯಗಳು ಹಂತ ಹಂತವಾಗಿ ಅನುಷ್ಠಾನಕ್ಕೆ ಬರುತ್ತಿವೆ. ಎಎಲ್‌ಬಿಸಿ, ಚಿಮ್ಮಲಗಿ, ಮುಳವಾಡ ನೀರಾವರಿ ಯೋಜನೆ ಅನುಷ್ಠಾನಕ್ಕೆ ಬಂದಿರುವುದು, ನಾಗರಬೆಟ್ಟ, ಬೂದಿಹಾಳ- ಪೀರಾಪುರ ಯೋಜನೆಗಳ ಕಾಮಗಾರಿಗೆ ಚಾಲನೆ. ಪ್ರಮುಖ
ಚತುಷ್ಪಥ, ಗ್ರಾಮೀಣ ಸಂಪರ್ಕ ರಸ್ತೆಗಳ ಸುಧಾರಣೆ, ಬಹುಹಳ್ಳಿ ಕುಡಿಯುವ ನೀರು, ಪಟ್ಟಣಗಳ ಒಳಚರಂಡಿ, ಸರ್ಕಾರಿ ಪದವಿ,
ಐಟಿಯ ಕಾಲೇಜುಗಳು, ವಸತಿ ಪದವಿ ಕಾಲೇಜು ಮಂಜೂರಾಗಿದ್ದು ಅಧಿಕಾರದಲ್ಲಿ ಆಗಿರುವ ಸಾಧನೆಯ ಫಲ.
ಸಿ.ಎಸ್‌. ನಾಡಗೌಡ, ಶಾಸಕರು, ಮುದ್ದೇಬಿಹಾಳ

ಕ್ಷೇತ್ರ ಮಹಿಮೆ
ಮುದ್ದೇಬಿಹಾಳ ಕ್ಷೇತ್ರ 1957ರಿಂದ 1972ರವರೆಗೆ ನಡೆದ ಮೂರು ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಬೇರೆ ಬೇರೆ ಅಭ್ಯರ್ಥಿಗಳು
ಗೆದ್ದಿದ್ದರು. ನಂತರ ಮಾತ್ರ ಈ ಕ್ಷೇತ್ರ ನಾಲತವಾಡದ ದೇಶಮುಖ ಹಾಗೂ ಬಲದಿನ್ನಿ ನಾಡಗೌಡ ಕುಟುಂಬಗಳ ರಾಜಕೀಯ ಪ್ರತಿಷ್ಠೆಗೆ ಮೀಸಲಾದ ಕ್ಷೇತ್ರ ಎನಿಸಿದೆ. ಕಾಂಗ್ರೆಸ್‌ ಹಾಗೂ ಜನತಾ ಪರಿವಾರ ಎರಡೂ ಪಕ್ಷಗಳಿಗೆ ಭದ್ರಕೋಟೆಯಾಗಿಯೇ ಗುರುತಿಸಿಕೊಂಡಿದೆ. ಮೇಲ್ನೋಟಕ್ಕೆ ಇದು ಕಾಂಗ್ರೆಸ್‌ ಹಾಗೂ ಜನತಾ ಪರಿವಾರದ ಅಭ್ಯರ್ಥಿಗಳ ಮಧ್ಯದ ಅಖಾಡ ಎನಿಸಿಕೊಂಡು ಬಂದಿದ್ದರೂ,
ಎರಡು ವಾಡೆ ಮನೆತನಗಳು ರಾಜಕೀಯ ಪ್ರಭುತ್ವದ ಹಿಡಿತಕ್ಕಾಗಿ ನಡೆಸಿದ ಕಾಳಗದಂತಿದೆ.

ಪ್ರತಿಷ್ಠೆಗಾಗಿ ಶಾಸಕರಾಗುವ ರಾಜ್ಯದ ಏಕೈಕ ಕ್ಷೇತ್ರ ಮುದ್ದೇಬಿಹಾಳ. ಐದು ಬಾರಿ ಗೆದ್ದು 25 ವರ್ಷ ಶಾಸಕರಾಗಿ ಆಡಳಿತ ನಡೆಸಿದರೂ, ಕ್ಷೇತ್ರದಲ್ಲಿ ಸೌಲಭ್ಯ ವಂಚಿತ ಸರ್ಕಾರಿ ಶಾಲೆಗಳಿದ್ದು ಅದರತ್ತ ಗಮನ ಹರಿಸುವ ಕಾರ್ಯ ನಡೆದಿಲ್ಲ. ಅ ಧಿಕಾರಿಗಳ ಮೇಲೆ ಕ್ಷೇತ್ರದ ಆಡಳಿತ ನಡೆಯುತ್ತಿದೆ.
ಅರವಿಂದ ಕೊಪ್ಪ, ರೂಢಗಿ

ಮಹಿಳಾ ಸ್ವಾಭಿಮಾನ ಬದುಕಿಗಾಗಿ, ಸ್ವಾವಲಂಬಿ ವೃದ್ಧಿಗಾಗಿ ಏನನ್ನೂ ಮಾಡಿಲ್ಲ. ನಿರುದ್ಯೋಗ ನಿವಾರಣೆಗೆ ಬಾರದ ಒಂದೂ ಕೈಗಾರಿಕೆ, ಗುಳೆ ಹೋಗುವ ದುಃಸ್ಥಿತಿ ತಡೆಯಲು ಹಾಲಿ ಶಾಸಕ ನಾಡಗೌಡರು ಆಸಕ್ತಿ ವಹಿಸಲಿಲ್ಲ.
ಗಿರಿಜಾ ಕಡಿ, ಮುದ್ದೇಬಿಹಾಳ

ಕ್ಷೇತ್ರದಲ್ಲಿ ಕಳೆದ ಐದು ವರ್ಷದ ಅವಧಿಯಲ್ಲಿ ಉತ್ತಮ ರಸ್ತೆಗಳು ನಿರ್ಮಾಣಗೊಂಡಿವೆ. ಬಡ ಗುಡಿಸಲು ವಾಸಿ ಅರ್ಹ ಬಡವರು ಕಟ್ಟಡದ ಸೂರು ಕಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ನಾಗರಬೆಟ್ಟ ಏತ ನೀರಾವರಿ ಕಾಮಗಾರಿಗೆ ಚಾಲನೆ ನೀಡಿದ್ದು, ಬೇಗ ಪೂರ್ಣಗೊಂಡು ರೈತರ ಜಮೀನಿಗೆ ನೀರು ಹರಿಸಲಿ.
ಮಲ್ಲಿಕಾರ್ಜುನ ಸಿದ್ದರಡ್ಡಿ, ನಾಗರಬೆಟ

  ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next