Advertisement

ಪುಂಡರ ತಾಣವಾದ ಹಳೆ ಬಿಇಒ ಕಚೇರಿ

12:26 PM Jan 19, 2020 | Naveen |

ಜೇವರ್ಗಿ: ಪಟ್ಟಣದ ಶಾಸ್ತ್ರೀಚೌಕ್‌ ಬಡಾವಣೆಯ ಸಿಂಡಿಕೇಟ್‌ ಬ್ಯಾಂಕ್‌ ಹತ್ತಿರದ ಹಳೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಳು ಬಿದ್ದು ಕಸದ ತೊಟ್ಟಿ ಹಾಗೂ ಪುಂಡಪೋಕರಿಗಳ ತಾಣವಾಗಿ ಮಾರ್ಪಟ್ಟಿದೆ.

Advertisement

ಕಳೆದ ಏಳು ವರ್ಷಗಳ ಹಿಂದೆ ಸುಸಜ್ಜಿತವಾಗಿ ನಿರ್ಮಿಸಲಾಗಿರುವ ಮಿನಿವಿಧಾನಸೌಧ ಕಟ್ಟಡದ ಮೊದಲ ಮಹಡಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸ್ಥಳಾಂತರವಾದ ಹಿನ್ನಲೆಯಲ್ಲಿ ಹಳೆ ಕಟ್ಟಡ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಜೂಜು, ಮಧ್ಯವ್ಯಸನಿಗಳ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ.

ಸದ್ಯ ಬಿಇಒ ಕಚೇರಿ ಮಿನಿವಿಧಾನಸೌಧ ಕಟ್ಟಡಕ್ಕೆ ಸ್ಥಳಾಂತರವಾದ ಮೇಲೆ ಹಳೆ ಕಟ್ಟಡವನ್ನು ಅಬಕಾರಿ ಇಲಾಖೆ ಸೇರಿದಂತೆ ಬೇರೆ ಇಲಾಖೆಗಳಿಗಾಗಲಿ ಅಥವಾ ಸಾರ್ವಜನಿಕ ಗ್ರಂಥಾಲಯಕ್ಕೆ ವ್ಯವಸ್ಥೆ ಮಾಡಿಕೊಡಬಹುದಿತ್ತು. ಆದರೆ ಖಾಲಿ ಬಿಟ್ಟಿದ್ದರಿಂದ ರಾತ್ರಿಯಾದರೇ ಸಾಕು ಈ ಕಟ್ಟಡದಲ್ಲಿ ಪುಂಡರು ನಿತ್ಯ ಮೋಜು, ಮಸ್ತಿ ಮಾಡುತ್ತಿದ್ದಾರೆ. ಮದ್ಯವ್ಯಸನಿಗಳು ಇಲ್ಲಿಯೇ ಕುಡಿದು ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ.

ಈ ಭಾಗದ ಸುತ್ತಲೂ ಮನೆ, ಹೋಟೆಲ್‌ ವ್ಯಾಪಾರಸ್ಥರು ಇರುವುದರಿಂದ ಪ್ಲಾಸ್ಟಿಕ್‌, ಕಸಕಡ್ಡಿಗಳನ್ನು ಎಲ್ಲೆಂದರಲ್ಲಿ ಎಸೆಯಲಾಗತ್ತಿದೆ. ಇಲ್ಲಿಯೇ ನಿತ್ಯ ಸಾರ್ವಜನಿಕ ಶೌಚ ಮಾಡುತ್ತಿರುವುದರಿಂದ ಶೌಚ ನೀರು ಚರಂಡಿಗೆ ಹರಿದು ಹೋಗದೇ ನಿಂತಲ್ಲೇ ನಿಂತು ಗಬ್ಬುವಾಸನೆ ಬೀರುತ್ತಿದೆ. ಅಲ್ಲದೇ ವಿಪರೀತ ಸೊಳ್ಳೆ ಕಾಟ ಹೆಚ್ಚಾಗಿದೆ. ಲೋಕೊಪಯೋಗಿ ಇಲಾಖೆ ಅಧಿಕಾರಿಗಳಾಗಲಿ, ಪುರಸಭೆ ಅಧಿಕಾರಿಗಳಾಗಲಿ ಈ ಜಾಗ ಸ್ವತ್ಛಗೊಳಿಸಿ ಸುಪರ್ದಿಗೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಅಲ್ಲದೇ ಅನೇಕ ವರ್ಷಗಳಿಂದ ಕೆಟ್ಟು ನಿಂತಿರುವ ಶಿಕ್ಷಣ ಇಲಾಖೆಯ ಜೀಪು ಸಂಪೂರ್ಣ ಹಾಳಾಗಿದೆ. ಸದ್ಯ ಅವಸಾನದ ಅಂಚಿನಲ್ಲಿರುವ ಈ ಕಟ್ಟಡವನ್ನು ಸಂಪೂರ್ಣ ತೆರವುಗೊಳಿಸಬೇಕು. ಇಲ್ಲವೇ ಪಟ್ಟಣದ ಮಧ್ಯ ಭಾಗದಲ್ಲಿರುವುದರಿಂದ ಇಲ್ಲೊಂದು ಸಾರ್ವಜನಿಕ ಗ್ರಂಥಾಲಯ ನಿರ್ಮಿಸಿದರೇ ಅನುಕೂಲವಾಗುತ್ತದೆ ಎನ್ನುವುದು ಪಟ್ಟಣದ ಜನರ ಅಭಿಪ್ರಾಯವಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಳೆ ಕಟ್ಟಡದ ಸುತ್ತಮುತ್ತ ಕೆಲವು ಜನರು ಕಸಕಡ್ಡಿ ತಂದು ಹಾಕಿ, ಬೆಂಕಿ ಹಚ್ಚುತ್ತಿದ್ದಾರೆ. ರಾತ್ರಿ ವೇಳೆ ಮಲಮೂತ್ರ ವಿಸರ್ಜನೆ, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು. ಮಲ್ಲಿಕಾರ್ಜುನ ಬಿರಾದಾರ,
ಸೊನ್ನ ಬಡಾವಣೆ ನಿವಾಸಿ

Advertisement

ಕಟ್ಟಡವನ್ನು ನೆಲಸಮಗೊಳಿಸಿ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಬೇಕು. ಪಟ್ಟಣದ ಹೃದಯ ಭಾಗದಲ್ಲಿರುವ ಈ ಕಟ್ಟಡದಲ್ಲಿ ಗ್ರಂಥಾಲಯವಾದರೆ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಓದುಗರಿಗೆ ಅನುಕೂಲವಾಗುತ್ತದೆ.
ನವೀನ್‌ ಗುತ್ತೇದಾರ,
ವಿದ್ಯಾರ್ಥಿ.

ಕಳೆದ ಕೆಡಿಪಿ ಸಭೆಯಲ್ಲಿ ಇತ್ತೀಚೆಗೆ “ಉದಯವಾಣಿ’ಯಲ್ಲಿ ಪ್ರಕಟವಾದ ಗ್ರಂಥಾಲಯ ಕುರಿತ ಲೇಖನವನ್ನು ಶಾಸಕ ಡಾ| ಅಜಯಸಿಂಗ್‌ ಗಮನಕ್ಕೆ ತಂದು, ಅವರ ಜತೆ ಚರ್ಚಿಸಿ, ಹಳೆ ಬಿಇಒ ಕಟ್ಟಡವನ್ನು ಗ್ರಂಥಾಲಯಕ್ಕೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಸಿದ್ದರಾಯ ಬೋಸಗಿ,
ತಹಶೀಲ್ದಾರ್‌

ವಿಜಯಕುಮಾರ ಎಸ್‌.ಕಲ್ಲಾ

Advertisement

Udayavani is now on Telegram. Click here to join our channel and stay updated with the latest news.

Next