ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವುತ್ ವಿರುದ್ಧ, ಗೀತರಚನೆಕಾರ ಜಾವೇದ್ ಅಖ್ತರ್ ಮುಂಬೈನ ಅಂಧೇರಿಯಲ್ಲಿರುವ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಟಿವಿ ಸಂದರ್ಶನವೊಂದರಲ್ಲಿ ಕಂಗನಾ ರಣಾವತ್, ನನ್ನ ವಿರುದ್ಧ ಅವಹೇಳನಕಾರಿ, ನಿರಾಧಾರ ಹೇಳಿಕೆ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಂಗನಾ ರಣಾವುತ್ ಅವರು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನ, ನನ್ನ ಪ್ರತಿಷ್ಠೆಗೆ ಹಾನಿ ಮಾಡಿದೆ. ವೀಡಿಯೊ ಸಂದರ್ಶನವು ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ನನ್ನ ಹೆಸರನ್ನು ಅನಗತ್ಯವಾಗಿ ಎಳೆದು ತಂದಿದ್ದಾರೆ ಎಂದು ಹಿರಿಯ ಸಾಹಿತಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಹತ್ವದ ಬೆಳವಣಿಗೆ: ಖ್ಯಾತ ಪತ್ರಕರ್ತ ಅರ್ನಬ್ ಗೋಸ್ವಾಮಿಯನ್ನು ಬಂಧಿಸಿದ ಮುಂಬೈ ಪೊಲೀಸರು
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಕಂಗನಾ ರಣಾವುತ್ ಒತ್ತಾಯಿಸುತ್ತಲೇ ಬರುತ್ತಿದ್ದಾರೆ. ಮಾತ್ರವಲ್ಲದೆ ಈ ಬಗ್ಗೆ ಆಗಾಗ್ಗೆ ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರ ಜೊತೆಗೆ ವಿವಿಧ ಸುದ್ದಿ ವಾಹಿನಿಗಳಿಗೆ ಸಂದರ್ಶನವನ್ನೂ ನೀಡಿದ್ದಾರೆ.
ಇದೀಗ ಐಪಿಸಿ ಸೆಕ್ಷನ್ 499 ಮತ್ತು 500ರ ಅಡಿಯಲ್ಲಿ ಕಂಗನಾ ರಣಾವುತ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸುವಂತೆ ಜಾವೇದ್ ಅಖ್ತರ್ ಕೋರಿದ್ದಾರೆ. ಈ ಪ್ರಕರಣದ ಮೊದಲ ವಿಚಾರಣೆ ಡಿಸೆಂಬರ್ 3, 2020 ನಡೆಯಲಿದೆ.
ಇದನ್ನೂ ಓದಿ: ಘಾಜಿಯಾಬಾದ್ ನಲ್ಲಿ ಅಗ್ನಿ ಅವಘಡ: ಅಪಾಯದಲ್ಲಿ 200ಕ್ಕಿಂತ ಹೆಚ್ಚು ಸ್ಲಂ ಪ್ರದೇಶಗಳು !