ಮುಂಬೈ: ಹಿಂದೂಗಳು ಯಾವಾಗಲೂ ಸಹಿಷ್ಣುಗಳಾಗಿದ್ದಾರೆ ಮತ್ತು ಭಾರತದಲ್ಲಿ ಹಿಂದೂಗಳ ಸಂಸ್ಕೃತಿ, ಸಂಪ್ರದಾಯದಿಂದಾಗಿಯೇ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ ಎಂದು ಖ್ಯಾತ ಸಾಹಿತಿ, ಗೀತ ರಚನೆಕಾರ ಜಾವೇದ್ ಅಖ್ತರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:Pak Fisherman: ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಾಧಿಪತಿಯಾದ ಮೀನುಗಾರ
ಹಿಂದೂಗಳು ಉದಾರ ಮತ್ತು ವಿಶಾಲ ಹೃದಯ ಹೊಂದಿದ್ದಾರೆ. ಆದರೆ ಕೆಲವು ವ್ಯಕ್ತಿಗಳು ಯಾವಾಗಲೂ ಅಸಹಿಷ್ಣುಗಳಾಗಿರುತ್ತಾರೆ. ಆದರೆ ಹಿಂದೂಗಳು ಸಹಿಷ್ಣುಗಳಾಗಿರುವುದೇ ಅವರ ಮೇರು ವ್ಯಕ್ತಿತ್ವದ ಗುಣವಾಗಿದೆ ಎಂದು ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ್ ಸೇನಾ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಅಖ್ತರ್ ಹೇಳಿದರು.
ಸ್ವಯಂಘೋಷಿತ ನಾಸ್ತಿಕರಾಗಿರುವ ಅಖ್ತರ್, ಭಗವಂತ ರಾಮ ಮತ್ತು ಸೀತೆಯ ಭೂಮಿಯಲ್ಲಿ ಜನಿಸಿರುವುದಕ್ಕೆ ನನಗೆ ಹೆಮ್ಮೆ ಇದೆ. ರಾಮಾಯಣ ನಮ್ಮ ಸಂಸ್ಕೃತಿಯ ಪರಂಪರೆಯಾಗಿದೆ ಎಂದು ಹೇಳಿ ಕಾರ್ಯಕ್ರಮದಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿರುವುದಾಗಿ ವರದಿ ತಿಳಿಸಿದೆ.
ನಾನು ನಾಸ್ತಿಕನಾಗಿರಬಹುದು, ಆದರೆ ಮರ್ಯಾದಾ ಪುರುಷೋತ್ತಮ ರಾಮನ ಬಗ್ಗೆ ನನಗೆ ಅಪಾರ ಗೌರವವಿದೆ. ಶ್ರೀರಾಮ ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯ ಭಾಗವಾಗಿದ್ದಾನೆ. ಆ ಕಾರಣದಿಂದಾಗಿಯೇ ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಎಂದು ಅಖ್ತರ್ ಹೇಳಿದರು.