ಕುಷ್ಟಗಿ: ತಾಲೂಕಿನ ಶಾಖಾಪೂರ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವದ ಉಳಿಕೆ ಹಣವನ್ನು ಗ್ರಾಮಸ್ಥರು, ಅದೇ ಊರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ನೀಡಿ ಮಾದರಿಯಾಗಿದ್ದಾರೆ.
ಕಳೆದ ಡಿ.14 ರಂದು ಶಾಖಾಪೂರ ಗ್ರಾಮದಲ್ಲಿ ವೈಭವದಿಂದ ನೆರವೇರಿತ್ತು. ಈ ಜಾತ್ರೆಯಿಂದ ಖರ್ಚು ವೆಚ್ಚ ಸರಿದೂಗಿಸಿ ನಂತರ ಉಳಿದ 50 ಸಾವಿರ ರೂ. ಮೊತ್ತವನ್ನು ಶಾಲೆಯ ವಿವಿದ ಅಭಿವೃದ್ಧಿಗೆ ಬಳಸಿಕೊಳ್ಳಲು ಮಾರುತೇಶ್ವರ ಜಾತ್ರೋತ್ಸವ ಸಮಿತಿ ನೀಡಲು ಮುಂದೆ ಬಂದಿದ್ದರು.
ಈ ಹಿನ್ನೆಲೆ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ ಜಾತ್ರಮಹೋತ್ಸವ ಸಮಿತಿಯ 50 ಸಾವಿರ ಮೊತ್ತವನ್ನು ಸ್ವೀಕರಿಸಿ, ಶೈಕ್ಷಣಿಕ ಕಾಳಜಿಗೆ ದೇವರ ದುಡ್ಡನ್ನು ಶಾಲೆಗೆ ದೇಣಿಗೆಯಾಗಿ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ವೇಳೆಯ ಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಲಕ್ಕಲಕಟ್ಟಿ ಉದಯವಾಣಿಯೊಂದಿಗೆ ಮಾತನಾಡಿ, ಶಾಖಾಪೂರ ಮಾರುತೇಶ್ವರ ಜಾತ್ರೆಯಿಂದ ಉಳಿಕೆ ಮೊತ್ತವನ್ನು ಶಾಲೆಯ ಅಭಿವೃದ್ದಿಗೆ 1 ರೂ. ಲೋಪ ಆಗದ ರೀತಿಯಲ್ಲಿ ವಿನಿಯೋಗಿಸಲಾಗುವುದು. ಶಾಲೆಗೆ ಪೈಂಟಿಂಗ್, ಅಲಂಕಾರಿಕಾ ಸಸಿಗಳನ್ನು ನೆಡಲು, ಮಕ್ಕಳ ಉಪಹಾರಕ್ಕಾಗಿ ಇಡ್ಲಿ ಕುಕಿಂಗ್ ಖರೀದಿಸಲು ಯೋಜಿಸಿದ್ದೇವೆ. ಅಲ್ಲದೇ ಗ್ರಾಮಸ್ಥರು ದೇವರ ಜಾತ್ರೆಗೆ ನೀಡಿದ ಹಣವನ್ನು ಶಾಲೆಗೆ ನೀಡುವ ಮೂಲಕ ಶಾಲೆಗೆ ಅಭಿವೃದ್ಧಿ ಕೊರತೆ ನೀಗಿಸಿದ್ದಾರೆ. ಈಗಾಗಲೇ ಶಾಖಾಪೂರ ಶಾಲೆ ಸಮುದಾಯದ ಸಹಭಾಗಿತ್ವದಲ್ಲಿ ಗ್ರಾಮಸ್ಥರ ನೀಡಿದ ದೇಣಿಗೆಯಿಂದ ಯಾವ ಖಾಸಗಿ ಶಾಲೆಗೂ ನಮ್ಮ ಸರ್ಕಾರಿ ಶಾಲೆ ಕಡಿಮೆ ಇಲ್ಲ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
ಶಾಖಾಪೂರ ಗ್ರಾಮಸ್ಥರ ಶೈಕ್ಷಣಿಕ ಕಾಳಜಿ ನಡೆಗೆ ಗ್ರಾಮದ ಹಿರಿಯರು, ಗ್ರಾ.ಪಂ. ಸದಸ್ಯರು ಶಿಕ್ಷಣವು ಪ್ರೇಮಿ ಗಳು ಮೆಚ್ಚುಗೆ ವ್ಯಕ್ತವಾಗಿದೆ.