ಮೈಸೂರು: ಮೈಸೂರು ನಗರವನ್ನು ನಿರ್ಗತಿಕ ಮುಕ್ತ ನಗರವನ್ನಾಗಿಸಲು ಜಿಲ್ಲಾಡಳಿತ ಹಾಗೂ ಮಹಾ ನಗರಪಾಲಿಕೆ ಅಗತ್ಯ ಕಾರ್ಯಕ್ರಮ ರೂಪಿಸಬೇಕೆಂದು ಆಗ್ರಹಿಸಿ ವೀ ಕೇರ್ ಸಂಸ್ಥೆ ವತಿಯಿಂದ ಸೋಮವಾರ ಜಾಗೃತಿ ಜಾಥಾ ನಡೆಸಲಾಯಿತು.
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ ನಡೆಸಿದ ಸಂಸ್ಥೆ ಸದಸ್ಯರು, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಮಾರ್ಗಸೂಚಿ ಅನುಸಾರ ಮೈಸೂರು ನಗರದ ಜನಸಂಖ್ಯೆಗೆ ಅನುಗುಣವಾಗಿ ನಿರ್ಗತಿಕರ ತಂಗುದಾಣಗಳನ್ನು ಸ್ಥಾಪಿಸಬೇಕು. ಈಗ ಪಾಲಿಕೆ ಕೇವಲ 2 ತಂಗು ದಾಣಗಳನ್ನು ಮಾತ್ರ ನಡೆಸುತ್ತಿದೆ. ಅವುಗಳಲ್ಲೂ ಮೂಲಸೌಕರ್ಯ ಕೊರತೆಯಿದೆ ಎಂದು ದೂರಿದರು.
ಈಗಾಗಲೇ ಗುರುತಿಸಿರುವ ನಿರ್ಗತಿಕರಿಗೆ ಸರ್ಕಾರಿ ಆಸ್ಪತ್ರೆ, ಇಲಾಖೆಗಳಲ್ಲಿ ಸೇವೆ ದೊರೆಯಬೇಕು ಮತ್ತು ವಿವಿಧ ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆಗಳಿಗೆ ಎಲ್ಲಾ ರೀತಿಯ ಸಹಕಾರಗಳು ನೀಡಬೇಕು.
ಜತೆಗೆ ಇನ್ನಷ್ಟು ನಿರ್ಗತಿಕರ ತಂಗುದಾಣ ಸ್ಥಾಪಿಸುವ ಸಲುವಾಗಿ ಲಭ್ಯವಿರುವ ಪಾಲಿಕೆ ಕಟ್ಟಡ ಅಥವಾ ಬಾಡಿಗೆ ಕಟ್ಟಡಗಳಲ್ಲಿ ಆಶ್ರಯ ಕೇಂದ್ರ ಸ್ಥಾಪಿಸಲು ಸರ್ಕಾರೇತರಿರಗೂ ಅವಕಾಶ ಕಲ್ಪಿಸಬೇಕೆಂಬ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿದರು.
ವೀ-ಕೇರ್ ಚಾರಿಟೀಸ್ ಸಂಸ್ಥೆ ಅಧ್ಯಕ್ಷ ಮನು ಬಿ.ಮೆನನ್ ಸೇರಿ ಸಂಸ್ಥೆ ಸದಸ್ಯರು ಜಾಥಾದಲ್ಲಿ ಭಾಗವಹಿಸಿದ್ದರು.