ಆಳಂದ: ರಾಜ್ಯದಲ್ಲಿರುವ ಮರಾಠಾ ಸಮುದಾಯಕ್ಕೆ ಅಲ್ಪಸಂಖ್ಯಾತರೆಂದು ಘೋಷಣೆ ಕೈಗೊಂಡು ಮೀಸಲಾತಿ
ಒದಗಿಸಬೇಕು ಎಂದು ಒತ್ತಾಯಿಸಿ ನ.13ರಂದು ಕಲಬುರಗಿಯಲ್ಲಿ ನಡೆಯಲಿರುವ ಮೂಕ ಮೋರ್ಚಾ ಮಹಾರ್ಯಾಲಿ ಪ್ರಯುಕ್ತ ತಾಲೂಕಿನಾದ್ಯಂತ ಕೈಗೊಳ್ಳುವ ಪ್ರಚಾರದ ಜೀಪ್ ಜಾಥಾಕ್ಕೆ ಗುರುವಾರ ಸಮಾಜದ ಜಿಲ್ಲಾ ಉಪಾಧ್ಯಕ್ಷ ದಿಲೀಪ ಪವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ರ್ಯಾಲಿಯಲ್ಲಿ 25ರಿಂದ 30 ಸಾವಿರ ಜನ ಸೇರುವ ನಿರೀಕ್ಷೆಯಿದೆ. ಈ ಪ್ರಯುಕ್ತ ಜಿಲ್ಲೆಯ ವಿವಿಧ ತಾಲೂಕು ಮತ್ತು ಗ್ರಾಮಗಳಲ್ಲಿ ವಾಸವಾಗಿರುವ ಮರಾಠಾ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಮರಾಠಾ ಸಮಾಜ ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದ ಸಮಾಜವಾಗಿದೆ. ಇದುವರೆಗೂ ಯಾವುದೇ ಸರ್ಕಾರ ಸಮಾಜಕ್ಕೆ ಮೀಸಲಾತಿ ಹಾಗೂ ಸೌಲಭ್ಯ ಕಲ್ಪಿಸಿಲ್ಲ. ರಾಜ್ಯದಲ್ಲಿರುವ ಮರಾಠಿಗರಿಗೆ ಅಲ್ಪಸಂಖ್ಯಾತರೆಂದು ಘೋಷಿಸಿ ಮೀಸಲಾತಿ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿ ರ್ಯಾಲಿಗಳನ್ನು ಕೈಗೊಳ್ಳಲಾಗುತ್ತಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಇನ್ನೊಬ್ಬ ಮುಖಂಡ ನ್ಯಾಯವಾದಿ ಭೀಮಾಶಂಕರ ಮಾಡಿಯಾಳ ಕರೆ ನೀಡಿದರು.
ಮರಾಠಾ ಸಮಾಜಕ್ಕೆ 111 ಬಿ. ಮೀಸಲಾತಿ ಕೈಬಿಟ್ಟು 11ಎ ಪ್ರವರ್ಗಕ್ಕೆ ಸೇರಿಸಬೇಕು. ಸಮಾಜದ ವಿದ್ಯಾರ್ಥಿಗಳಿಗೆ ಜಿಲ್ಲಾ ಹಾಗೂ ಆಳಂದ ಪಟ್ಟಣದಲ್ಲಿ ಪ್ರತ್ಯೇಕ ವಸತಿ ನಿಲಯ ಸ್ಥಾಪಿಸಬೇಕು ಹಾಗೂ ರಾಜ್ಯದಲ್ಲಿ ಮರಾಠ ನಿಗಮ ಮಂಡಳಿ ಸ್ಥಾಪಿಸಿ 500 ಕೋಟಿ ರೂ. ಮೀಸಲಿಡುವ ತನಕ ಹೋರಾಟ ನಡೆಯಲಿದೆ ಎಂದು ತಾಲೂಕು ಮರಾಠಾ ಸಮಾಜದ ಅಧ್ಯಕ್ಷ ನಾಗನಾಥ ಏಟೆ ಹೇಳಿದರು.
ಪಟ್ಟಣದಲ್ಲಿ ಸುಮಾರು 4 ಎಕರೆ ನಿವೇಶನ ಮಂಜೂರು ಮಾಡಿ ಮರಾಠಾ ಭವನ ನಿರ್ಮಿಸಬೇಕು. ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಮೂರ್ತಿ ಸ್ಥಾಪಿಸಬೇಕು. ದಾವಣೆಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗಿರಿ ಗ್ರಾಮದಲ್ಲಿರುವ ಶಹಾಜಿ ಜಿರಾಜೆ ಭೋಸ್ಲೆ ಅವರ ಸಮಾಧಿ ಸ್ಥಳವನ್ನು ಪುಣ್ಯ ಕ್ಷೇತ್ರವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ರವಿ ಪಾಟೀಲ ಲಿಂಗನವಾಡಿ, ಆರ್.ಡಿ. ಮಾನೆ, ಪ್ರಕಾಶ ಮಾನೆ, ಸುಭಾಷ ನಿಕಮ್, ರಮೇಶ ಉಮರೆ, ರಾಮರತನ ಪಾಟೀಲ ಮಡಕಿ, ಸುದರ್ಶನ ಭಗವತ ಹಾಗೂ ಮತ್ತಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು. ನಂತರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಾಥಾ ಕೈಗೊಳ್ಳಲಾಯಿತು.