Advertisement

ಬಾಲಕಿಯರ ಜಟಾಯು ಮೋಕ್ಷ

07:53 PM Oct 10, 2019 | mahesh |

ಹದಿನೈದು ದಿವಸಗಳ ತರಬೇತಿಯಲ್ಲಿ ಸಿದ್ಧವಾದ ಪ್ರಸಂಗದ ಪ್ರದರ್ಶನ ಕೆಲವೊಂದು ಲೋಪದೊಷಗಳ ಹೊರತಾಗಿಯೂ ಕಳೆಕಟ್ಟಿತು.

Advertisement

ಕೋಟದ ಕಾಶಿ ಮಠದಲ್ಲಿ ಗುರುಗಳ ಚಾತುರ್ಮಾಸ ಹಾಗೂ ಶಾರದೋತ್ಸವದ ಸುವರ್ಣ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗೀತಾ ಕೇಂದ್ರದ ಬಾಲಕಿಯರು ಜಟಾಯು ಮೋಕ್ಷ ಪ್ರಸಂಗವನ್ನು ಪ್ರದರ್ಶಿಸಿದರು. ಈ ಬಾರಿ ಬಾಲಕಿಯರು ಸ್ವಯಂಸ್ಫೂರ್ತಿಯಿಂದ ಕೋಟದ ಗುರು ನರಸಿಂಹ ತುಂಗರ ನಿರ್ದೇಶನದಲ್ಲಿ ಗೆಜ್ಜೆಕಟ್ಟಿ ಇತಿಹಾಸ ಸೃಷ್ಟಿಸಿದರು.

ಕೇವಲ ಹದಿನೈದು ದಿವಸಗಳ ತರಬೇತಿಯಲ್ಲಿ ಸಿದ್ಧವಾದ ಪ್ರಸಂಗದ ಪ್ರದರ್ಶನ ಕೆಲವೊಂದು ಲೋಪದೊಷಗಳ ಹೊರತಾಗಿಯೂ ಕಳೆಕಟ್ಟಿತು. ಪಂಚವಟಿಯಲ್ಲಿ ಸೀತೆಯೊಂದಿಗೆ ರಾಮ ಲಕ್ಷ್ಮಣರ ತೆರೆ ಒಡ್ಡೋಲಗದ ಮೂಲಕ ಪ್ರಸಂಗಾರಂಭ. ಪರ್ಣ ಕುಟೀರದ ನಿರ್ಮಾಣ. ಅಲ್ಲಿಗೆ ಘೋರ ಶೂರ್ಪನಖಿಯ ಪ್ರವೇಶ. ರಾಮನನ್ನು ಕಂಡು ಮೋಹಗೊಂಡ ಆಕೆ ಷೋಡಶಿ ಮೋಹಕ ಮಾಯಾಂಗನೆಯಾಗಿ ರಾಮ ಲಕ್ಷ್ಮಣರಲ್ಲಿ ಮದುವೆಯಾಗುವಂತೆ ಬಿನ್ನಹ. ಪುರುಷಾತಿಕ್ರಮಣಕ್ಕೆ ರಾಮನಿಂದ ತಕ್ಕ ಶಿಕ್ಷೆ. ಶೂರ್ಪನಖೆಯಿಂದ ಅಣ್ಣ ರಾವಣನಿಗೆ ದೂರು. ಸೀತಾಪಹರಣದ ತಂತ್ರ. ಮಾರೀಚ ಮಾಯಾ ಜಿಂಕೆಯಾಗಿ ಸೀತೆಯನ್ನು ಹುಚ್ಚುಗಟ್ಟಿಸುವುದು. ಕಪಟ ಸನ್ಯಾಸಿಯಾಗಿ ರಾವಣನಿಂದ ಸೀತಾಪಹಾರ. ಸೀತೆಯ ನೆರವಿಗೆ ಜಟಾಯುವಿನ ಪ್ರಯತ್ನ, ಸೋಲು. ರಾಮ ಬರುವ ತನಕ ಜೀವದಿಂದಿರು ಎಂದು ಜಟಾಯುವಿಗೆ ಸೀತೆಯ ವರಪ್ರದಾನ. ಸೀತಾ ವೃತ್ತಾಂತವನ್ನರುಹಿ ಮಡಿದ ಜಟಾಯುವಿಗೆ ರಾಮ ಲಕ್ಷ್ಮಣರಿಂದ ಅಂತಿಮ ಸಂಸ್ಕಾರ. ಇವಿಷ್ಟು ಕಥಾ ಹಂದರ.

ಇತ್ತೀಚೆಗೆ ರಂಗದಲ್ಲಿ ಮರೆಯಾಗುತ್ತಾ ಬಂದಿರುವ ಪೂರ್ವರಂಗದ ಪೀಠಿಕಾ ಸ್ತ್ರೀವೇಷದ ಚಂದಭಾಮ ಪದ್ಯಕ್ಕೆ ಲಾಲಿತ್ಯದ ಹೆಜ್ಜೆಯಿಡುತ್ತಾ ರಂಗಪ್ರವೇಶಿಸಿದ ಪ್ರಣೀತಾ ನಾಯಕ್‌, ಸಂಜನಾ ಕಾಮತ್‌, ಪ್ರಾರ್ಥನಾ ಕಾಮತ್‌ ಪ್ರದರ್ಶನಕ್ಕೆ ಸುಂದರ ಚಾಲನೆ ನೀಡಿದರು. ರಾಮ – ಲಕ್ಷ್ಮಣ – ಸೀತೆಯರಾಗಿ ಕು| ಅಶ್ವಿ‌ನಿ ಪ್ರಭು, ಕು| ಸುಚರಿತಾ ಪೈ, ಮತ್ತು ಕು| ಶ್ರೀಲಕ್ಷ್ಮೀ ಪೈ ಹಿತಮಿತವಾದ ಅಭಿನಯದಿಂದ ರಂಜಿಸಿದರು. ಅಂಜನಿ ಪ್ರಭು ಅವರ ಘೋರ ಶೂರ್ಪನಖೀ ರೌದ್ರ ಶೃಂಗಾರ ರಸಗಳೆರಡರಲ್ಲೂ ಗೆದ್ದಿತು. ಮಾಯಾ ಶೂರ್ಪನಖೀಯಾಗಿ ರಾಜೇಶ್ವರಿ ಪ್ರಭು ಕುಣಿತ ಭಾವಾಭಿನಯಗಳಲ್ಲಿ, ರಂಗದ ಹಿಡಿತದಲ್ಲಿಯೂ ಪ್ರಬುದ್ಧತೆಯನ್ನು ಮೆರೆದರು. ಸಾಂಪ್ರದಾಯಿಕ ಬಣ್ಣದ ಒಡ್ಡೋಲಗದ ಮೂಲಕ ರಂಗ ಪ್ರವೇಶಿಸಿದ ರಾವಣ ಪಾತ್ರಧಾರಿ ಕಾತ್ಯಾಯಿನಿ ಪ್ರಭು ಅಭಿನಂದನಾರ್ಹರು. ಕಪಟ ಸಂನ್ಯಾಸಿಯಾಗಿ ದೀಕ್ಷಾ ಪ್ರಭು ಸಮರ್ಥವಾಗಿ ಅಭಿನಯಿಸಿದರು. ಮಾಯಾ ಜಿಂಕೆಯಾಗಿ ಪ್ರಣೀತಾ ನಾಯಕ್‌ ಗಮನ ಸೆಳೆದರು. ಜಟಾಯು ಪಾತ್ರಧಾರಿ ಗ್ರೀಷ್ಮಾ ಪ್ರಭು ಮಂಡಿಕುಣಿತಗಳ ವೀರಾವೇಶದ ರಂಗನಡೆ, ಆಕರ್ಷಕ ಆಹಾರ್ಯದ ಮೂಲಕ ಭರವಸೆಯ ಕಲಾವಿದರಾಗಿ ಮೂಡಿಬಂದರು.

ಭಾಗವತರಾಗಿ ಲಂಬೋದರ ಹೆಗಡೆ ನಿಟ್ಟೂರು, ನರಸಿಂಹ ತುಂಗ, ಮದ್ದಳೆಯಲ್ಲಿ ದೇವದಾಸ ರಾವ್‌ ಕೂಡ್ಲಿ, ಚಂಡೆಯಲ್ಲಿ ಗಣೇಶ ಶೆಣೈ ಮತ್ತು ಸುದೀಪ ಉರಾಳ ಮುಮ್ಮೇಳಕ್ಕೆ ಪೂರಕರಾದರು.

Advertisement

ಪೀಠಿಕಾ ಸ್ತ್ರೀವೇಷ, ರಾಮ ಲಕ್ಷ್ಮಣರ ತೆರೆ ಒಡ್ಡೋಲಗ, ಹೆಣ್ಣು-ಗಂಡು ಬಣ್ಣದ ವೇಷಗಳ ಸಾಂಪ್ರದಾಯಿಕ ಒಡ್ಡೋಲಗ, ಸೀತೆ-ಮಾಯಾಜಿಂಕೆಯ ಸನ್ನಿವೇಷದ ರಂಗತಂತ್ರಗಳು ಪ್ರದರ್ಶನದ ಧನಾತ್ಮಕ ಅಂಶಗಳು. ಸಹಜವಾಗಿಯೇ ಸ್ತ್ರೀಯ ತೆಳುವಾದ ಶಾರೀರ ಮತ್ತು ಬಳಕುವ ಶರೀರ ಸಹೃದಯರ ನೋಟಕ್ಕೆ ಹಿತವೆನಿಸದು ಎಂಬುದನ್ನುಳಿದರೆ ಉಳಿದಂತೆ ಅಚ್ಚುಕಟ್ಟಾದ ಪ್ರದರ್ಶನ.

ಕೋಟ ಸುಜಯೀಂದ್ರ ಹಂದೆ ಎಚ್‌.

Advertisement

Udayavani is now on Telegram. Click here to join our channel and stay updated with the latest news.

Next