Advertisement
ಕೇರಳವನ್ನು ಭೂಲೋಕದ ಸ್ವರ್ಗ, ದೇವರ ನಾಡೆಂದು ಕರೆಯಲಾಗುತ್ತದೆ. ಅಷ್ಟೊಂದು ಪ್ರವಾಸಿ ತಾಣಗಳು ಹಾಗೂ ದೇವಸ್ಥಾನಗಳು ಇಲ್ಲಿರುವುದೇ ಇದಕ್ಕೆ ಪ್ರಮುಖ ಕಾರಣ. ಕೇರಳದಲ್ಲಿರುವ ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಮಟ್ಟದ ಪ್ರವಾಸಿತಾಣಗಳಲ್ಲಿ ಕೊಲ್ಲಂ ಜಿಲ್ಲೆಯ ಚಾದಮಂಗಲಂನಲ್ಲಿರುವ ಜಟಾಯು ಪ್ರಕೃತಿ ಧಾಮ ಅಥವಾ ಜಟಾಯು ರಾಕ್ ಒಂದು. ಇದು ಸಮುದ್ರಮಟ್ಟದಿಂದ ಸುಮಾರು 1,200 ಅಡಿ ಎತ್ತರದಲ್ಲಿದೆ.
ಅತಿ ದೊಡ್ಡ ಪಕ್ಷಿ ಶಿಲ್ಪವೇ ಇಲ್ಲಿ ಪ್ರಮುಖ ಜನಾಕರ್ಷಣೆ ಕೇಂದ್ರವಾಗಿದೆ. ರಾವಣನಿಂದ ಘಾಸಿಗೊಂಡು ಜಟಾಯು ಬಿದ್ದಂಥ ಸ್ಥಿತಿಯಲ್ಲೇ ಈ ಪಕ್ಷಿ ಶಿಲ್ಪವನ್ನು ನಿರ್ಮಿಸಲಾಗಿದೆ. ಈ ಪಕ್ಷಿ ಶಿಲ್ಪವು 200 ಅಡಿ ಉದ್ದ, 150 ಅಡಿ ಅಗಲ ಮತ್ತು ಸುಮಾರು 70 ಅಡಿ ಎತ್ತರವಿದ್ದು,ಇದನ್ನು ವಿಶ್ವದ ಅತಿ ದೊಡ್ಡ ಪಕ್ಷಿ ಶಿಲ್ಪವೆಂದು ಕರೆಯಲಾಗಿದೆ. ಸುಸ್ಥಿರ ಮತ್ತು ಪರಿಸರಸ್ನೇಹಿ ಪ್ರವಾಸೋದ್ಯಮಕ್ಕೆ ಒಂದು ಉದಾಹರಣೆ. ಇದರ ತಳ ಭಾಗ ಸುಮಾರು 15,000 ಚದರ ಅಡಿ (65 ಎಕರೆ) ವಿಸ್ತಾರವಾಗಿದೆ. ಈ ವಿಶಿಷ್ಟ ತಾಣದ ನಿರ್ಮಾತೃ ಸಿನಿಮಾ ನಿರ್ದೇಶಕ, ಕಲಾ ನಿರ್ದೇಶಕ ಹಾಗೂ ಶಿಲ್ಪಿ ರಾಜೀವ್ ಆಂಚಲ…. ಈ ಸುಂದರ ತಾಣದ ನಿರ್ಮಾಣಕ್ಕೆ ಬರೋಬ್ಬರಿ ಹತ್ತು ವರ್ಷಗಳನ್ನು ತೆಗೆದುಕೊಳ್ಳಲಾಗಿರುವುದನ್ನು ಗಮನಿಸಿದಾಗ ಇದರ ನಿರ್ಮಾಣ ಕೆಲಸದ ಗಾಢತೆ ಹಾಗೂ ಕಠಿಣತೆಯನ್ನು ಅರಿಯಬಹುದಾಗಿದೆ.
Related Articles
Advertisement
ಈ ಸ್ಥಳ ಸಾಹಸ ಪ್ರಿಯರಿಗಂತೂ ಹೇಳಿಮಾಡಿಸಿದಂತಿದ್ದು, ಇಲ್ಲಿ ಶೂಟಿಂಗ್, ರಾಕ್ ಕ್ಲಬಿಂಗ್, ರಾಪ್ಪೆಲ್ಲಿಂಗ್, ಜಮ್ಮರಿಂಗ್, ವ್ಯಾಲಿಕ್ರಾಸಿಂಗ್, ಚಿಮಣಿ ಕ್ಲೈಂಬಿಂಗ್, ಬಿಲ್ಗಾರಿಕೆ, ಜಿಪ್ಲೆ„ನ್, ಕಮಾಂಡೋನೆಟ್, ರೈಫಲ್‌ಶೂಟಿಂಗ್, ಪಕ್ಷಿಶಿಲ್ಪದ ಸುತ್ತನಡಿಗೆ, ಸ್ಕೆಸೈಕ್ಲಿಂಗ್, ಕ್ಯಾಂಪ್ ಫೈರ್, ಇವೇ ಮೊದಲಾದ ಸಾಹಸಗಳನ್ನು ಮಾಡಬಹುದು. ಎರಡನೆಯ ಹಂತದಲ್ಲಿ ತ್ರೀಡಿ ಥಿಯೇಟರ್, ಡಿಜಿಟಲ್ ಮ್ಯೂಸಿಯಂ, ರಾಕ್ ಥೀಮ್ ಪಾರ್ಕ್ ಇದ್ದು ಇಲ್ಲಿಗೆ ಕೇಬಲ್ ಕಾರ್, ಹೆಲಿಟ್ಯಾಕ್ಸಿ ಸೇವೆಯ ಸೌಲಭ್ಯವಿದೆ. ಕೇಬಲ್ ಕಾರ್ ಮೂಲಕ ಜಟಾಯು ಸೆಂಟರ್ ಪ್ರಯಾಣವು ಮೈನವಿರೇಳಿಸುತ್ತದೆ. ಪೂರ್ತಿ ಗಾಜಿನಿಂದಾವೃತವಾದ ಕೇಬಲ್ ಕಾರ್ ಕ್ಯಾಬಿನ್ ಒಳಗೆ ಕುಳಿತು ಕಣಿವೆ ಹಾಗೂ ಪರ್ವತಗಳ ರೋಚಕ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿ ಈಗಾಗಲೇ 16 ಕೇಬಲ್‌ಕಾರ್ ಅಳವಡಿಸಿದ್ದು, ಪ್ರತಿಯೊಂದು ಕಾರ್‌ಮೂ ಲಕ ತಲಾ 8 ಮಂದಿ ಪ್ರವಾಸಿಗರು 1 ಕಿ.ಮೀ ದೂರವನ್ನು ಒಂದು ಸಾವಿರ ಅಡಿ ಎತ್ತರದಲ್ಲಿ ಪ್ರಯಾಣಿಸಬಹುದು.
ಅಂತರಾಷ್ಟ್ರೀಯ ಗುಣಮಟ್ಟದ ಜಟಾಯು ಸೆಂಟರ್‌ಗೆ ಕೇಬಲ್ ಕಾರ್ ಮೂಲಕ ಪ್ರವೇಶ ಶುಲ್ಕ ವಯಸ್ಕರಿಗೆ ರೂ.400. ಚಿಕ್ಕ ಮಕ್ಕಳಿಗೆ ಉಚಿತ ಪ್ರವೇಶ. ಅಡ್ವೆಂಚರ್ ಹಿಲ್ ರಾಕ್‌ಗೆ ಹೆಲಿ ಟ್ಯಾಕ್ಸಿ ಮೂಲಕ ಹೋಗಲು ರೂ.3,500 ಶುಲ್ಕ. ಪ್ರವಾಸಿಗರು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆಯ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡಬಹುದು. ಇಲ್ಲಿನ ಬೃಹತ್ ಪ್ರಾಕೃತಿಕ ಗುಹೆಗಳಲ್ಲಿ ವಸತಿ ಸೌಲಭ್ಯವಿದ್ದು, ಪಾರಂಪರಿಕ ಆಯುರ್ವೇದ ಸಿದ್ಧ ಚಿಕಿತ್ಸೆಯೂ ಇಲ್ಲಿ ಲಭ್ಯ. ಸಂಸಾರ ನೌಕೆಯನ್ನೇರಿದ ಯುವಜೋಡಿ ಚಂದ್ರನ ಬೆಳಕಿನಲ್ಲಿ ರಾತ್ರಿಯ ಊಟವನ್ನು ಸೇವಿಸಿ ಅವಕಾಶವೂ ಇಲ್ಲಿ ಲಭ್ಯ.
ಇಲ್ಲಿ ಅಳವಡಿಸಲಾಗಿರುವ ಮಳೆ ನೀರು ಕೊಯ್ಲಿನ ವ್ಯವಸ್ಥೆಯಿಂದ ಪ್ರತಿ ವರ್ಷ ಸುಮಾರು 15 ಲಕ್ಷ ಲೀ. ನೀರನ್ನು ಸಂಗ್ರಹಿಸಲಾಗುತ್ತಿದೆ. ಇಲ್ಲಿಗೆ ಒಂದು ಗಂಟೆಯ ಚಾರಣವನ್ನೂ ಇಲ್ಲಿನ ದಟ್ಟಾರಣ್ಯದ ಮೂಲಕ ಮಾಡಬಹುದು.ಇಲ್ಲಿ ಕೆರೆಯೊಂದಿದ್ದು, ಇದು ಜಟಾಯುವು ತನ್ನ ಪ್ರಾಣವನ್ನು ಬಿಡುವಾಗ ತನ್ನ ಕೊಕ್ಕಿನಿಂದ ಪರ್ವತವನ್ನು ತಿವಿದಾಗ ಉಂಟಾದುದೆಂದು ಹೇಳಲಾಗಿದೆ. ಈ ಕೆರೆಯ ನೀರು ಎಂತಹ ಬೇಸಗೆಯಲ್ಲೂ ಬತ್ತುವುದಿಲ್ಲವೆಂದು ಇಲ್ಲಿನ ಹಿರಿಯರು ಹೇಳುತ್ತಾರೆ. ಇಲ್ಲಿ ರಾಮನ ದೇವಾಲಯವೂ ಇದೆ.
ಜಟಾಯು ಅರ್ಥ್ ಸೆಂಟರ್ ಕೊಲ್ಲಂ ಜಿಲ್ಲೆಯಿಂದ 38 ಕಿ. ಮೀ. ಹಾಗೂ ಕೇರಳದ ರಾಜಧಾನಿ ತಿರುವನಂತಪುರಂ ನಿಂದ ಸುಮಾರು 46 ಕಿ. ಮೀ. ದೂರದಲ್ಲಿದೆ. ಈ ಪ್ರವಾಸಿ ತಾಣಕ್ಕೆ 2017 ನೆಯ ಡಿಸೆಂಬರ್ ತಿಂಗಳಿನಿಂದ ಸಾರ್ವಜನಿಕರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ.
ಸಂತೋಷ್ ರಾವ್ ಪೆರ್ಮುಡ