ಬರ್ಮಿಂಗ್ ಹ್ಯಾಂ: ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬಿರುಸಾದ ಬ್ಯಾಟಿಂಗ್ ನಿಂದ ವಿಶ್ವದಾಖಲೆ ಬರೆದಿದ್ದ ಟೀಂ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ, ಇದೀಗ ಬೌಲಿಂಗ್ ನಲ್ಲೂ ಹೊಸ ರೆಕಾರ್ಡ್ ಮಾಡಿದ್ದಾರೆ.
ಇಂಗ್ಲೆಂಡ್ ನಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅತೀ ಹೆಚ್ಚು ವಿಕೆಟ್ ಕಿತ್ತ ಭಾರತೀಯ ಎಂಬ ಸಾಧನೆಯನ್ನು ಜಸ್ಪ್ರೀತ್ ಬುಮ್ರಾ ಬರೆದಿದ್ದಾರೆ. ಬುಮ್ರಾ ಐದು ಪಂದ್ಯಗಳಿಂದ 21 ವಿಕೆಟ್ ಕಬಳಿಸಿದ್ದು ಈ ಹಿಂದೆ 19 ವಿಕೆಟ್ ಕಿತ್ತಿದ್ದ ಭುವನೇಶ್ವರ ಕುಮಾರ್ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟರು.
ಎಜ್ ಬಾಸ್ಟನ್ ನಲ್ಲಿ ನಡೆಯುತ್ತಿರುವ ಅಂತಿಮ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಬುಮ್ರಾ 68 ರನ್ ನೀಡಿ ಮೂರು ವಿಕೆಟ್ ಕಿತ್ತರು. ಭುವನೇಶ್ವರ್ ಕುಮಾರ್ ಅವರು 2014ರ ಇಂಗ್ಲೆಂಡ್ ಪ್ರವಾಸದಲ್ಲಿ 19 ವಿಕೆಟ್ ಸಾಧನೆ ಮಾಡಿದ್ದರು.
2007ರ ಸರಣಿಯಲ್ಲಿ ಜಹೀರ್ ಖಾನ್ ಅವರು ಮೂರು ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದರೆ, 2018ರಲ್ಲಿ ಇಶಾಂತ್ ಶರ್ಮಾ ಅವರು ಐದು ಪಂದ್ಯಗಳಿಂದ 18 ವಿಕೆಟ್ ಕಬಳಿಸಿದ್ದರು.
ಇದನ್ನೂ ಓದಿ:ಹರ್ಷಲ್ ಪಟೇಲ್ ಬೊಂಬಾಟ್ ಬ್ಯಾಟಿಂಗ್: ಎರಡನೇ ಟಿ20 ಅಭ್ಯಾಸ ಪಂದ್ಯವನ್ನೂ ಗೆದ್ದ ಭಾರತ
ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 416 ರನ್ ಗಳಿಸಿದ್ದರೆ, ಇಂಗ್ಲೆಂಡ್ 284 ರನ್ ಗೆ ಆಲೌಟಾಗಿದೆ. ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ಮೂರು ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿದೆ. ಸದ್ಯ ಭಾರತ ತಂಡ 257 ರನ್ ಮುನ್ನಡೆಯಲ್ಲಿದೆ.