Advertisement

T20 Worldcup: ಥ್ಯಾಂಕ್ಯೂ ಜಸ್‌ಪ್ರೀತ್‌ ಬುಮ್ರಾ…

10:29 AM Jun 11, 2024 | Team Udayavani |

ನ್ಯೂಯಾರ್ಕ್‌: “ಒಂದು ವರ್ಷದ ಹಿಂದೆ ಕೆಲವರು, ಬುಮ್ರಾ ಕ್ರಿಕೆಟ್‌ ಬಾಳ್ವೆ ಮುಗಿಯಿತು, ಇವನಿನ್ನು ಕ್ರಿಕೆಟ್‌ ಆಡಲಾರ, ಫಿನಿಶ್‌ ಎಂದಿದ್ದರು. ನನ್ನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಈಗ ಅವರೇ, ನಾನು ಅತ್ಯು ತ್ತಮ ಫಾರ್ಮ್ನಲ್ಲಿದ್ದೇನೆ, ಉತ್ತಮ ಫಿನಿಶರ್‌ ಎನ್ನುತ್ತಿದ್ದಾರೆ…’

Advertisement

ಇಂಥದೊಂದು ಹೇಳಿಕೆ ನೀಡಿದವರು ಬೇರೆ ಯಾರೂ ಅಲ್ಲ, ರವಿವಾರದ ನ್ಯೂಯಾರ್ಕ್‌ ಪಂದ್ಯದಲ್ಲಿ ಪಾಕಿಸ್ಥಾನಿ ಕ್ರಿಕೆಟಿಗರನ್ನು ಹಿಡಿದು ನಿಲ್ಲಿಸಿ, ಭಾರತಕ್ಕೆ ಅಸಾಮಾನ್ಯ ಗೆಲುವನ್ನು ತಂದಿತ್ತ ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್‌ಪ್ರೀತ್‌ ಬುಮ್ರಾ!

ಗೆಲುವಿಗೆ ಕೇವಲ 120 ರನ್‌ ಗುರಿ ಪಡೆದಿದ್ದ ಪಾಕಿಸ್ಥಾನ, ಭಾರತದ, ಅದರಲ್ಲೂ ಬುಮ್ರಾ ಅವರ ಘಾತಕ ಬೌಲಿಂಗ್‌ ದಾಳಿಗೆ ಉತ್ತರಿಸಲಾಗದೆ 7ಕ್ಕೆ 113 ರನ್‌ ಗಳಿಸಿ 6 ರನ್ನುಗಳ ಸೋಲು ಕಂಡಿತು. ಬುಮ್ರಾ ಸಾಧನೆ 14ಕ್ಕೆ 3 ವಿಕೆಟ್‌. ಅದರಲ್ಲೂ ಅವರೆಸೆದ ಪಂದ್ಯದ 19ನೇ ಓವರ್‌ “ಟರ್ನಿಂಗ್‌ ಪಾಯಿಂಟ್‌’ ಎನಿಸಿತು. ಈ ಓವರ್‌ನಲ್ಲಿ ಕೇವಲ 3 ರನ್‌ ನೀಡಿದ ಅವರು, ಇಫ್ತಿಖಾರ್‌ ಆಹ್ಮದ್‌ ವಿಕೆಟ್‌ ಕಿತ್ತು ಭಾರತಕ್ಕೆ ಮೇಲುಗೈ ಒದಗಿಸಿದರು. ಎಲ್ಲರೂ ಈಗ “ಥ್ಯಾಂಕ್ಯೂ ಜಸ್‌ಪ್ರೀತ್‌ ಬುಮ್ರಾ’ ಎಂದು ಕೊಂಡಾಡುತ್ತಿದ್ದಾರೆ.

2022ರಲ್ಲಿ ಬುಮ್ರಾ ತೀವ್ರ ಬೆನ್ನುನೋವಿನ ಸಮಸ್ಯೆಯಿಂದಾಗಿ ಆಸ್ಟ್ರೇಲಿಯದಲ್ಲಿ ನಡೆದ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಡಿರಲಿಲ್ಲ. ಆಗ ಬುಮ್ರಾ ಭವಿಷ್ಯದ ಬಗ್ಗೆ ಒಂದಿಷ್ಟು ಅನುಮಾನ ಕಾಡಿತ್ತು. ಆದರೆ ಬುಮ್ರಾ ಮರುಹುಟ್ಟು ಪಡೆದರು, ಟೀಕೆಗಳನ್ನೆಲ್ಲ ಮೆಟ್ಟಿನಿಂತರು. ಕಳೆದೊಂದು ವರ್ಷದ ಅವಧಿಯಲ್ಲಿ ಆಡಲಾದ ಮೂರೂ ಮಾದರಿಗಳ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 67 ವಿಕೆಟ್‌ ಉಡಾಯಿಸಿದ ಸಾಹಸ ಬುಮ್ರಾ ಅವರದಾಗಿದೆ.

ಮರಳಿ ಪಾಕ್‌ ಪಂದ್ಯದತ್ತ ಬರುವುದಾದರೆ…
ಬುಮ್ರಾ ಮೊದಲ ಓವರ್‌ ಹೊರತುಪಡಿಸಿ ಉಳಿದ 3 ಓವರ್‌ಗಳಲ್ಲಿ ಒಂದೊಂದು ಮಹತ್ವದ ವಿಕೆಟ್‌ ಉಡಾಯಿಸಿ ಪಾಕ್‌ಗೆ ಆಘಾತವಿಕ್ಕಿದರು. ಮೊದಲು ನಾಯಕ ಬಾಬರ್‌ ಆಜಂ, ಬಳಿಕ ಮೊಹಮ್ಮದ್‌ ರಿಜ್ವಾನ್‌, ಕೊನೆಯಲ್ಲಿ ಇಫ್ತಿಖಾರ್‌ ಆಹ್ಮದ್‌ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.

Advertisement

ಈ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು. ಪಾಕ್‌ ವಿರುದ್ಧ ಅಹ್ಮದಾಬಾದ್‌ನಲ್ಲಿ ಆಡಲಾದ ಕಳೆದ ಏಕದಿನ ವಿಶ್ವಕಪ್‌ ಪಂದ್ಯದಲ್ಲೂ ಬುಮ್ರಾ ಪಂದ್ಯಶ್ರೇಷ್ಠರಾಗಿದ್ದರು.

ಅಕ್ಷರ್‌ ಪಟೇಲ್‌ ಮತ್ತೋರ್ವ ಬೌಲಿಂಗ್‌ ಹೀರೋ. ಇವರೆಸೆದ ಪಂದ್ಯದ 16ನೇ ಓವರ್‌ನಲ್ಲಿ ಪಾಕ್‌ಗೆ ಗಳಿಸಲು ಸಾಧ್ಯವಾದದ್ದು ಎರಡೇ ರನ್‌!

3 ಓವರ್‌, 30 ರನ್‌
ಎರಡೂ ತಂಡಗಳು 80 ರನ್‌ ಬಳಿಕ ಕುಸಿತ ಕಂಡದ್ದು ಕಾಕತಾಳೀಯ. ಭಾರತ 12ನೇ ಓವರ್‌ನಲ್ಲಿ 3ಕ್ಕೆ 89 ರನ್‌ ಮಾಡಿ 150ರ ನಿರೀಕ್ಷೆ ಮೂಡಿಸಿತ್ತು. ಆದರೆ 30 ರನ್‌ ಅಂತರದಲ್ಲಿ 7 ವಿಕೆಟ್‌ ಕಳೆದುಕೊಂಡಿತು!

ಪಾಕಿಸ್ಥಾನ 13ನೇ ಓವರ್‌ನಲ್ಲಿ 2ಕ್ಕೆ 73 ರನ್‌ ಮಾಡಿ ಗೆಲುವಿನತ್ತ ಮುಖ ಮಾಡಿಕೊಂಡಿತ್ತು. ಆದರೆ ಉಳಿದ 7.4 ಓವರ್‌ಗಳಲ್ಲಿ ಗಳಿಸಿದ್ದು 40 ರನ್‌ ಮಾತ್ರ! ಅಂತಿಮ 3 ಓವರ್‌ಗಳಲ್ಲಿ 30 ರನ್‌ ಸವಾಲು ಪಡೆದಾಗಲೇ ಪಾಕ್‌ ಸೋಲು ಖಾತ್ರಿ ಯಾಗಿತ್ತು. ಸರಾಸರಿ ಹತ್ತರಂತೆ ರನ್‌ ಗಳಿಸುವುದು ನ್ಯೂಯಾರ್ಕ್‌ ಟ್ರ್ಯಾಕ್‌ನಲ್ಲಿ ಸುಲಭವಾಗಿರಲಿಲ್ಲ. ಅಲ್ಲದೇ ಸ್ಪೆಷಲಿಸ್ಟ್‌ ಬ್ಯಾಟರ್‌ಗಳೆಲ್ಲ ಆಟ ಮುಗಿಸಿ ಆಗಿತ್ತು. ಬುಮ್ರಾ ಅವರ ಬೆಂಕಿ ಚೆಂಡನ್ನು ಎದುರಿಸುವ ಸ್ಥಿತಿಯಲ್ಲಿ ಪಾಕ್‌ ಇರಲಿಲ್ಲ!

ಇದನ್ನೂ ಓದಿ: T20 Worldcup: ಪಾಕಿಸ್ಥಾನಕ್ಕೆ ಉಭಯಸಂಕಟ… ಗೆದ್ದರೂ ಹಾದಿ ದುರ್ಗಮ

Advertisement

Udayavani is now on Telegram. Click here to join our channel and stay updated with the latest news.

Next