ಮೌಂಟ್ ಮೌಂಗನಿ: ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿ ಗೆದ್ದಿದೆ. ರವಿವಾರ ನಡೆದ ಅಂತಿಮ ಪಂದ್ಯವನ್ನು ಭಾರತ ಏಳು ವಿಕೆಟ್ ಗಳಿಂದ ಗೆದ್ದುಕೊಂಡಿದೆ.
ಸರಣಿಯಲ್ಲಿ ಅಷ್ಟಾಗಿ ಫಾರ್ಮ್ ನಲ್ಲಿರದ ಭಾರತದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಅಂತಿಮ ಪಂದ್ಯದಲ್ಲಿ ಮಿಂಚಿದರು. ಅದ್ಭುತ ಸ್ಪೆಲ್ ಮಾಡಿದ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು.
ಇದೇ ಮೌಂಟ್ ಮೌಂಗನಿ ಪಂದ್ಯದಲ್ಲಿ ಬುಮ್ರಾ ನೂತನ ವಿಶ್ವದಾಖಲೆಯನ್ನು ಬರೆದಿದ್ದಾರೆ. ರವಿವಾರದ ಪಂದ್ಯದಲ್ಲಿ ತಾನೆಸೆದ ಮೊದಲ ಓವರ್ ಅನ್ನೇ ವಿಕೆಟ್ ಮೇಡನ್ ಮಾಡಿದ ಬುಮ್ರಾ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತೀ ಹೆಚ್ಚು ಮೇಡನ್ ಓವರ್ ಮಾಡಿದ ಬೌಲರ್ ಎಂಬ ದಾಖಲೆ ಬರೆದರು.
ಈ ವೇಳೆಗೆ ಶ್ರೀಲಂಕಾದ ನುವಾನ್ ಕುಲಶೇಖರ ಅವರ ದಾಖಲೆಯನ್ನು ಬುಮ್ರಾ ಮುರಿದರು. ಅಂತಾರಾಷ್ಟ್ರೀಯ ಟಿ20ಯಲ್ಲಿ ಬುಮ್ರಾ ಒಟ್ಟು 7 ಓವರ್ ಗಳನ್ನು ಮೇಡನ್ ಮಾಡಿದ್ದಾರೆ. ಬುಮ್ರಾ ಅಂತಾರಾಷ್ಟ್ರೀಯ ಟಿ20ಯಲ್ಲಿ ಇದುವೆರಗೆ 178.1 ಓವರ್ ಎಸೆದಿದ್ದಾರೆ.
ನುವಾನ್ ಕುಲಶೇಖರ್ ಅಂತಾರಾಷ್ಟ್ರೀಯ ಟಿ20ಯಲ್ಲಿ ಒಟ್ಟು 205.1 ಓವರ್ ಎಸೆದಿದ್ದು ಅದರಲ್ಲಿ ಆರು ಓವರ್ ಗಳನ್ನು ಮೇಡನ್ ಮಾಡಿದ್ದಾರೆ.
ಬುಮ್ರಾ ರವಿವಾರ 50ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿದರು. ಈ ಸಾಧನೆ ಮಾಡಿದ ಇತರ ಭಾರತೀಯರೆಂದರೆ ರೋಹಿತ್ ಶರ್ಮಾ, ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ.