ಮುಂಬೈ: ಕಳೆದ ಮೂರು ತಿಂಗಳಿನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರವಾಗಿದ್ದ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದೆ.
ವೇಗದ ಬೌಲರ್ ಬುಮ್ರಾ ಬೆನ್ನಿನ ನೋವಿನಿಂದಾಗಿ ಕಳೆದ ವರ್ಷ ಸೆಪ್ಟೆಂಬರ್ ನಿಂದ ಹೊರಗುಳಿದಿದ್ದಾರೆ. ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರಿಹ್ಯಾಬ್ ನಲ್ಲಿದ್ದರು.
ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ತಂಡ ಪ್ರಕಟಿಸಿದಾಗಲೇ ಬುಮ್ರಾ ಫಿಟ್ ಆಗಿದ್ದರು. ಆದರೆ ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ತವರಿನ ಟಿ20 ಸರಣಿಯ ಸಮಯದಲ್ಲಿ ಅವರ ಬೆನ್ನುನೋವು ಮರುಕಳಿಸಿದ್ದರಿಂದ ಅವರನ್ನು ಬೇಗನೆ ಮರಳಿ ಕರೆತರುವ ಬಗ್ಗೆ ಆಯ್ಕೆದಾರರು ಜಾಗರೂಕರಾಗಿದ್ದರು. ಬುಮ್ರಾ ನಂತರ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ನಿಂದಲೂ ಹೊರಗುಳಿದಿದ್ದರು.
ಸದ್ಯ ಬುಮ್ರಾ ಆರೋಗ್ಯ ಪ್ರಗತಿಯ ಬಗ್ಗೆ ಆಯ್ಕೆದಾರರು ತೃಪ್ತರಾಗಿದ್ದಾರೆ. ಅವರು ಸಾಕಷ್ಟು ಫಿಟ್ ಆಗಿದ್ದರಿಂದ ಲಂಕಾ ವಿರುದ್ಧದ ಏಕದಿನ ಸರಣಿಗೆ ಅವರನ್ನು ಪರಿಗಣಿಸಲಾಗಿದೆ ಎಂದು ಕ್ರಿಕ್ ಇನ್ಫೋ ವರದಿ ಮಾಡಿದೆ.
ಶ್ರೀಲಂಕಾ ಏಕದಿನ ಪಂದ್ಯಗಳಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ಇಶಾನ್ ಕಿಶನ್ (ವಿ.ಕೀ), ಹಾರ್ದಿಕ್ ಪಾಂಡ್ಯ (ಉ.ನಾ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.