Advertisement

ಟೆಸ್ಟ್‌ ಸರಣಿಗೆ ಜಸ್‌ಪ್ರೀತ್‌ ಬುಮ್ರಾ ಇಲ್ಲ

10:38 PM Sep 24, 2019 | Team Udayavani |

ಹೊಸದಿಲ್ಲಿ: ಗಾಯದ ಸಮಸ್ಯೆಯಿಂದ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರು ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಿಂದ ಹೊರಗುಳಿಯಲಿದ್ದಾರೆ. ಇದರಿಂದ ಭಾರತದ ಸರಣಿ ಗೆಲುವಿನ ಪ್ರಯತ್ನಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ.

Advertisement

ಮೂರು ಪಂದ್ಯಗಳ ಟೆಸ್ಟ್‌ ಸರಣಿಗೆ ಬುಮ್ರಾ ಬದಲಿಗೆ ವೇಗಿ ಉಮೇಶ್‌ ಯಾದವ್‌ ಅವರನ್ನು ಸೇರ್ಪಡೆಗೊಳಿಸಲಾಗಿದೆ. ಸರಣಿಯ ಮೊದಲ ಪಂದ್ಯ ಅ. 2ರಿಂದ ವಿಶಾಖಪಟ್ಟಣದಲ್ಲಿ ಆರಂಭವಾಗಲಿದೆ. ಸರಣಿಯ ಇನ್ನೆರಡು ಪಂದ್ಯಗಳು ಪುಣೆ (ಅ. 10-14) ಮತ್ತು ರಾಂಚಿ (ಅ. 19-23) ಯಲ್ಲಿ ನಡೆಯಲಿವೆ.

ಬುಮ್ರಾ ಅವರು ಬೆನ್ನ ಕೆಳಗಿನ ಭಾಗದಲ್ಲಿ ಸ್ನಾಯುವಿನ ಒತ್ತಡದಿಂದ ಬಳಲುತ್ತಿದ್ದಾರೆ. ರೆಡಿಯೋಲಜಿ ಪರೀಕ್ಷೆ ವೇಳೆ ಈ ಸಮಸ್ಯೆ ಗೋಚರಿಸಿದೆ. ಅವರಿನ್ನು ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಲಿದ್ದು ಬಿಸಿಸಿಐಯ ವೈದ್ಯಕೀಯ ತಂಡ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲಿದೆ.ಎಂದು ಬಿಸಿಸಿಐ ಪ್ರಕಟನೆಯಲ್ಲಿ ತಿಳಿಸಿದೆ.

ಬುಮ್ರಾ ಅವರು ಮುಂದಿನ ತಿಂಗಳ ತವರಿನಲ್ಲಿ ನಡೆಯುವ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಆಡುವುದು ಸಂಶಯ. ಅವರು ಏಳರಿಂದ ಎಂಟು ವಾರ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ಹೀಗಾಗಿ ಬಾಂಗ್ಲಾ ವಿರುದ್ಧದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಪಂದ್ಯಗಳಿಂದಲೂ ದೂರ ಉಳಿಯಲಿದ್ದಾರೆ. ಇದು ಸದ್ಯ ಅವರ ವೈದ್ಯಕೀಯ ವಿವರ ತಿಳಿಸುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಬಾಂಗ್ಲಾ ಸರಣಿಯಲ್ಲಿ ಮೂರು ಟಿ20 ಮತ್ತು ಎರಡು ಟೆಸ್ಟ್‌ ಪಂದ್ಯಗಳಿವೆ. ಈ ಸರಣಿ ನ. 3ರಿಂದ 26ರ ವರೆಗೆ ನಡೆಯಲಿದೆ.

ಬುಮ್ರಾ ಸಾಧನೆ
ಬುಮ್ರಾ ದ. ಆಫ್ರಿಕಾ ವಿರುದ್ಧ ನಡೆದ ಟಿ20 ಸರಣಿಯಲ್ಲೂ ಆಡಿರಲಿಲ್ಲ. ವಿಂಡೀಸ್‌ ವಿರುದ್ಧದ ಸರಣಿಯಲ್ಲಿ ಬುಮ್ರಾ ಪ್ರಚಂಡ ನಿರ್ವಹಣೆ ದಾಖಲಿಸಿದ್ದರು. ಅಸಾಧಾರಣ ನಿರ್ವಹಣೆ ನೀಡಿ ಗಮನ ಸೆಳೆದಿದ್ದರು. ಆಡಿದ 2 ಟೆಸ್ಟ್‌ಗಳಲ್ಲಿ 13 ವಿಕೆಟ್‌ ಕಿತ್ತು ಯಶಸ್ವಿ ಬೌಲರ್‌ ಎನಿಸಿಕೊಂಡಿದ್ದರು. ಈ ವೇಳೆ ಅವರು ಟೆಸ್ಟ್‌ನಲ್ಲಿ ಅತೀ ವೇಗವಾಗಿ 50 ವಿಕೆಟ್‌ ಕಿತ್ತ ಭಾರತೀಯ ಬೌಲರೆಂಬ ಗೌರವಕ್ಕೂ ಪಾತ್ರರಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next