Advertisement

ದ್ವಿತೀಯ ಸ್ಥಾನಕ್ಕೆ ಕುಸಿದ ಜಸ್‌ಪ್ರೀತ್‌ ಬುಮ್ರಾ

10:25 AM Feb 14, 2020 | sudhir |

ದುಬಾೖ: ನ್ಯೂಜಿಲ್ಯಾಂಡ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನೀರಸ ಪ್ರದರ್ಶನ ನೀಡಿದ ಭಾರತದ ಜಸ್‌ಪ್ರೀತ್‌ ಬುಮ್ರಾ ಅವರು ನೂತನ ಐಸಿಸಿ ಏಕದಿನ ರ್‍ಯಾಂಕಿಂಗ್‌ನ ಬೌಲಿಂಗ್‌ ವಿಭಾಗದಲ್ಲಿ ಅಗ್ರಸ್ಥಾನ ಕಳೆದುಕೊಂಡಿದ್ದು ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾರೆ.

Advertisement

ಮೂರು ಪಂದ್ಯಗಳ ಸರಣಿಯಲ್ಲಿ ಬುಮ್ರಾ ಯಾವುದೇ ವಿಕೆಟ್‌ ಪಡೆಯಲು ವಿಫ‌ಲರಾಗಿದ್ದರು. ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಬುಮ್ರಾ ಬರೀಕೈಯಲ್ಲಿ ಮರಳುತ್ತಿರುವುದು ಇದೇ ಮೊದಲ ಸಲವಾಗಿದೆ.

ಬುಧವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್‌ನ ಬ್ಯಾಟಿಂಗ್‌ ವಿಭಾಗದಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಉಪನಾಯಕ ರೋಹಿತ್‌ ಶರ್ಮ ಅವರು ಮೊದಲೆರಡು ಸ್ಥಾನಗಳಲ್ಲಿ ಮುಂದುವರಿದಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ ಭಾರತವು ನ್ಯೂಜಿಲ್ಯಾಂಡಿಗೆ 0-3 ಅಂತರದಿಂದ ಶರಣಾಗಿತ್ತು. ಏಕದಿನ ಸರಣಿಯಲ್ಲಿ ಕಳೆದ 31 ವರ್ಷಗಳಲ್ಲಿ ವೈಟ್‌ವಾಶ್‌ಗೆ ಗುರಿಯಾಗಿರುವುದು ಇದೇ ಮೊದಲ ಸಲವಾಗಿದೆ.

ಬೌಲ್ಟ್ ಅಗ್ರಸ್ಥಾನಕ್ಕೆ
ನ್ಯೂಜಿಲ್ಯಾಂಡ್‌ ವಿರುದ್ಧ ನೀರಸ ನಿರ್ವಹಣೆ ನೀಡಿದ ಬುಮ್ರಾ 719 ಅಂಕಗಳೊಂದಿಗೆ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾರೆ. ಆಶ್ಚರ್ಯವೆಂದರೆ ಈ ಸರಣಿಯಲ್ಲಿ ಆಡದಿದ್ದರೂ ನ್ಯೂಜಿಲ್ಯಾಂಡಿನ ಟ್ರೆಂಟ್‌ ಬೌಲ್ಟ್ 727 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿರುವುದು ಆಗಿದೆ. ಅಫ್ಘಾನಿಸ್ಥಾನದ ಮುಜೀಬ್‌ ಉರ್‌ ರೆಹಮಾನ್‌ (701), ದಕ್ಷಿಣ ಆಫ್ರಿಕಾದ ಕಾಗಿಸೊ ರಬಾಡ (674) ಮತ್ತು ಆಸ್ಟ್ರೇಲಿಯದ ಪ್ಯಾಟ್‌ ಕಮಿನ್ಸ್‌ (673) ಅಗ್ರ ಐದರೊಳಗಿನ ಸ್ಥಾನ ಪಡೆದಿದ್ದಾರೆ.

ಆಲ್‌ರೌಂಡರ್ ಪಟ್ಟಿ
ಆಲ್‌ರೌಂಡರ್ ವಿಭಾಗದಲ್ಲಿ ಅಫ್ಘಾನಿಸ್ಥಾನದ ಮೊಹಮ್ಮದ್‌ ನಬಿ (301) ಅಗ್ರಸ್ಥಾನದಲ್ಲಿದ್ದಾರೆ. ಇಂಗ್ಲೆಂಡಿನ ಬೆನ್‌ ಸ್ಟೋಕ್ಸ್‌ (294) ಮತ್ತು ಪಾಕಿಸ್ಥಾನದ ಇಮದ್‌ ವಸೀಮ್‌ (278) ಅನಂತರದ ಸ್ಥಾನದಲ್ಲಿದ್ದಾರೆ. ಅಗ್ರ ಹತ್ತರೊಳಗೆ ಇರುವ ಭಾರತದ ಏಕೈಕ ಆಟಗಾರ ರವೀಂದ್ರ ಜಡೇಜ (246) ಏಳನೇ ಸ್ಥಾನ ಹೊಂದಿದ್ದಾರೆ.

Advertisement

ಕೊಹ್ಲಿ ನಂ.1
ಕೊಹ್ಲಿ ವಿಶ್ವದ ನಂಬರ್‌ ವನ್‌ ಬ್ಯಾಟ್ಸ್‌ಮನ್‌ ಆಗಿ ಉಳಿದಿದ್ದಾರೆ. ನ್ಯೂಜಿಲ್ಯಾಂಡ್‌ ವಿರುದ್ಧದ ಸರಣಿಯಲ್ಲಿ ಕೇವಲ 75 ರನ್‌ ಗಳಿಸಿದ್ದ ಅವರು ಒಟ್ಟಾರೆ 869 ಅಂಕ ಹೊಂದಿದ್ದಾರೆ. ಗಾಯದಿಂದ ಏಕದಿನ ಸರಣಿ ಕಳೆದುಕೊಂಡಿದ್ದ ರೋಹಿತ್‌ ಶರ್ಮ ದ್ವಿತೀಯ (855) ಸ್ಥಾನದಲ್ಲಿದ್ದಾರೆ. ಪಾಕಿಸ್ಥಾನದ ಬಾಬರ್‌ ಅಜಂ (829) 3ನೇ ನ್ಯೂಜಿಲ್ಯಾಂಡಿನ ರಾಸ್‌ ಟೇಲರ್‌ (828) ನಾಲ್ಕನೇ ಮತ್ತು ದಕ್ಷಿಣ ಆಫ್ರಿಕಾದ ಫಾ ಡು ಪ್ಲೆಸಿಸ್‌ (803) ಐದನೇ ಸ್ಥಾನದಲ್ಲಿದ್ದಾರೆ. ಭಾರತ ವಿರುದ್ದದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಟೇಲರ್‌ ಸರಣಿಶ್ರೇಷ್ಠ ಪ್ರಶಸ್ತಿಗೂ ಪಾತ್ರರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next