Advertisement

ಅನ್ನದಾತನ ಕೈ ಹಿಡಿಯದ ಮಲ್ಲಿಗೆ

03:11 PM Jun 04, 2018 | |

ಹೂವಿನಹಡಗಲಿ: ಎಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ರೈತನ ಕೈಹಿಡಿದಿದ್ದ ಮಲ್ಲಿಗೆ ಬೆಳೆ ಇಂದು ಬೆಲೆ ಕುಸಿತದಿಂದಾಗಿ ಆತಂಕದಲ್ಲಿಯೇ ಕಾಲ ನೂಕುವಂತಹ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಹನಕನಹಳ್ಳಿ, ದೇವಗೊಂಡನಹಳ್ಳಿ, ಗುಜನೂರು, ಮೀರಾಕೊರ್ನಹಳ್ಳಿ, ಶಿವಲಿಂಗನಹಳ್ಳಿ, ನಾಗತಿಬಸಾಪುರ, ಹಗುಲೂರು, ಮುದೇನೂರು, ಹಡಗಲಿ, ಕೊಂಬಳಿ, ಆಂಕ್ಲಿ, ಪುರ, ಹೊನ್ನುರು, ಹಾಳ್‌ತಿಮ್ಲಾಪುರ, ತಿಪ್ಪಪುರ, ಹಗರನೂರು, ಹಿರೇಹಡಗಲಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಒಟ್ಟು 300 ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಮಲ್ಲಿಗೆ ಹೂವು ಬೆಳೆಯುತ್ತಿದ್ದಾರೆ. 

Advertisement

ಆದರೆ ಇಷ್ಟೊಂದು ಪ್ರಮಾಣದಲ್ಲಿ ಮಲ್ಲಿಗೆ ಹೂವಿನ ಬೆಳೆಯುತ್ತಿರುವ ರೈತರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಆದರೂ ಇಲ್ಲಿ ಬೆಳೆದ ಮಲ್ಲಿಗೆ ಹೂವು ದೂರದ ಶಹರಗಳಿಗೆ ದಲ್ಲಾಳಿಗಳ ಮೂಲಕ ಪೂರೈಕೆಯಾಗುತ್ತದೆ. ಆದರೆ ಅವರು ಬಯಸಿದ ಲಾಭಕ್ಕೂ ಹೂವು ಮಾರಾಟವಾಗುವುದಿಲ್ಲ.
 
ಕನಿಷ್ಠ ಆರು ತಿಂಗಳು ಬೆಳೆಯಾಗಿರುವ ಮಲ್ಲಿಗೆ ಹೂವು, ಸಾಮಾನ್ಯವಾಗಿ ಮಾರ್ಚ್‌ ಕೊನೆ ವಾರದಿಂದ ಫಸಲು ಬರಲು ಪ್ರಾರಂಭವಾಗುತ್ತದೆ. ಅಲ್ಲಿಂದ ಸುಮಾರು ಸೆಪ್ಟಂಬರ್‌ ತಿಂಗಳವರೆಗೆ ಸುಮಾರು 6 ರಿಂದ 8 ತಿಂಗಳು ರೈತರಿಗೆ ಉದ್ಯೋಗ ಒದಗಿಸುವ ಬೆಳೆಯಾಗಿದೆ. ಮಲ್ಲಿಗೆ ಸಸಿ ಒಮ್ಮೆ ನಾಟಿ ಮಾಡಿ ವರ್ಷ ಪೋಷಣೆ ಮಾಡಿದರೆ ಸಾಕು, ಅದು ಸುಮಾರು 10 ರಿಂದ 15 ವರ್ಷಗಳವರೆಗೆ ರೈತನಿಗೆ ಆಸರೆಯಾಗಿ ನಿಲ್ಲುತ್ತದೆ. ಮೊದಲು 2 ರಿಂದ 3 ವರ್ಷದಲ್ಲಿ ಕಡಿಮೆ ಮೊಗ್ಗು ಕೊಡುತ್ತದೆ. ವರ್ಷ ಕಳೆದಂತೆ ಹೆಚ್ಚು ಹೆಚ್ಚು ಮೊಗ್ಗು ಬರಲು ಪ್ರಾರಂಭವಾಗುತ್ತದೆ. ಇದರಿಂದಾಗಿ ರೈತರಿಗೆ ಹೆಚ್ಚು ಲಾಭ ಸಿಗುತ್ತದೆ.

ಹೀಗಾಗಿಯೇ ತಾಲೂಕಿನಲ್ಲಿ ವರ್ಷದಿಂದ ವರ್ಷಕ್ಕೆ ಮಲ್ಲಿಗೆ ಬೆಳೆಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಮೂರು ವರ್ಷದಲ್ಲಿ ಮಲ್ಲಿಗೆ ಬೆಳೆಗಾರರ ಸಂಖ್ಯೆ ದುಪ್ಪಟು ಆಗಿದೆ. ಆದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಲ್ಲಿಗೆ ಬೆಳೆಯುತ್ತಿರುವ ರೈತರಿಗೆ ಮಾರುಕಟ್ಟೆ ಒಂದು ದೊಡ್ಡ ಸಮಸ್ಯೆಯಾಗಿದ್ದು, ರೈತ ತಾನು ಬೆಳೆದ ಮಲ್ಲಿಗೆಗೆ ಸರಿಯಾದ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾನೆ. 

ರೈತರು ಮೊದಲಿನಿಂದಲೂ ಸಾಮಾನ್ಯವಾಗಿ ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ, ಹಾವೇರಿ ಮುಂತಾದ ಶಹರಗಳಿಗೆ ಮಾತ್ರ ಮಾರುಕಟ್ಟೆ ಹುಡಿಕಿಕೊಂಡು ಕಳುಹಿಸುವುದು ವಾಡಿಕೆಯಾಗಿದೆ. ಈ ಮಾರುಕಟ್ಟೆಯಲ್ಲಿ ಯಾವಾಗ ಬೇಡಿಕೆಗಿಂತ ಹೆಚ್ಚು ಮಲ್ಲಿಗೆ ಮಗ್ಗು ಬರುತ್ತದೆಯೋ ಆ ತಕ್ಷಣದಲ್ಲಿ ದರ ಕಡಿಮೆಯಾಗುವ ಸಂದರ್ಭಗಳು ರೈತರಿಗೆ ಬಂದೋದಗುತ್ತದೆ. ಅಲ್ಲಿ ಕನಿಷ್ಠ ಬೆಲೆಗೆ ಪ್ರತಿ ಕ್ವಿಂಟಲ್‌ಗೆ ದರ ನಿಗದಿ ಮಾಡಿ ದಲ್ಲಾಳಿಗಳು ಮಾರಾಟ ಮಾಡುತ್ತಾರೆ. ಇದರಿಂದಾಗಿ ರೈತರಿಗೆ
ತುಂಬಲಾರದ ನಷ್ಟವಾಗುತ್ತದೆ.

ಮಲ್ಲಿಗೆ ಮೊಗ್ಗು ಬಿಡಿಸಲು ಕಾರ್ಮಿಕರಿಗೆ ಪ್ರತಿ ಕೆಜಿಗೆ 60 ರಿಂದ 70 ರೂ. ಕೂಲಿ ಕೊಡಬೇಕು. ಒಳ್ಳೆಯ ಬೆಲೆ ಸಿಕ್ಕರೆ ರೈತರಿಗೆ ತುಂಬಾ ಖುಷಿ.ಆದರೆ ಕೆಲವೊಮ್ಮೆ ಯಾವುದೇ ದರ ಸಿಗದೆ 30ರಿಂದ 35 ರೂ.ಗೆ ಕೆಜಿಯಂತೆ ದರ ಸಿಕ್ಕಾಗ ರೈತರಿಗೆ ತುಂಬಾ ನಷ್ಟವಾಗುತ್ತದೆ. ಇದರಿಂದ ರೈತ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಾನೆ. ಇತ್ತೀಚಿಗೆ ಕಳೆದ 2 ರಿಂದ 3 ವಾರದಲ್ಲಿ ಮಲ್ಲಿಗೆ ಬೆಲೆ ಪಾತಾಳಕ್ಕೆ ಕುಸಿದು ರೈತರು ತುಂಬಾ ನಷ್ಟ ಅನುಭವಿಸುವ ಪರಿಸ್ಥಿತಿ ರ್ಮಾಣವಾಗಿದೆ.

Advertisement

ತಾಲೂಕಿನಲ್ಲಿ ಅತಿ ಹೆಚ್ಚು ಮಲ್ಲಿಗೆ ಬೆಳೆಯುತ್ತಿದ್ದು, ರೈತರಿಗೆ ಮಾರುಕಟ್ಟೆ ಒದಗಿಸುವುದು ದೊಡ್ಡ ಸವಾಲಾಗಿದೆ. ಈ ಬಗ್ಗೆ ಯೋಜನೆಯೊಂದು ರೂಪಿಸಿದ್ದು ಮಲ್ಲಿಗೆ ಬೆಳೆಗಾರಿಂದಲೇ ರೈತ ಉತ್ಪಾದಕ ಸಂಸ್ಥೆ ಸ್ಥಾಪಿಸಿ ಅವರಿಂದ ಷೇರು ಬಂಡವಾಳ ಪಡೆದುಕೊಂಡು ಸರ್ಕಾರದಿಂದ ಆವರ್ತ ನಿಧಿ,
ಸಹಾಯಧನ ರೂಪದಲ್ಲಿ ಬರುವಂತೆ ಮಾಡುವುದು ಒಂದು ಮಾರ್ಗವಾಗಿದೆ. ರೈತರು ಬೆಳೆದ ಮಲ್ಲಿಗೆ ಮೊಗ್ಗು ಬೇರೆ ಮಾರುಕಟ್ಟೆಗೆ ಕಳುಹಿಸುವ ಬದಲು ಇಲ್ಲಿಯೇ ರಾಜ್ಯ ಹಾಗೂ ಹೊರ ರಾಜ್ಯದ ಮಾರುಕಟ್ಟೆ ಕಲ್ಪಿಸುವ ವ್ಯವಸ್ಥೆ ಮಾಡಬೇಕಾಗಿದೆ. ತುಂಬಾ ದೂರದ ಮಾರುಕಟ್ಟೆಗೆ ಕೊಂಡೊಯ್ಯಲು ಸುಸಜ್ಜಿತ ವಾಹನ, ಇತರೆ ಸೌಕರ್ಯ ಕಲ್ಪಿಸುವ ಚಿಂತನೆ ಇದೆ. ಮುಂದಿನ ದಿನಗಳಲ್ಲಿ ರೈತರ ಸಹಕಾರದಿಂದ ಈ ಯೋಜನೆ ಜಾರಿಗೊಳಿಸಲು ಇಲಾಖೆ ಯೋಚಿಸಿದೆ.

ರೈತರು ಮಲ್ಲಿಗೆ ಬೆಳೆ ಜತೆಯಲ್ಲಿ ಪರ್ಯಾಯ ಬೆಳೆಯಾದ ಕನಕಾಂಬರಿ, ದುಂಡು ಮಲ್ಲಿಗೆ ಮುಂತಾದ ಬೆಳೆ ಬೆಳೆಯಲು ಮುಂದಾಗಬೇಕೆಂದು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಪಿ.ಎಂ.ರಮೇಶ್‌ ರೈತರಿಗೆ ಸಲಹೆ ನೀಡಿದ್ದಾರೆ.

ಸುಮಾರು 50 ವರ್ಷದಿಂದ ಮಲ್ಲಿಗೆ ಬೆಳೆಯನ್ನು ಗುತ್ತಿಗೆ ಪಡೆದು ವ್ಯಾಪಾರ ಮಾಡುತ್ತಿದ್ದೇನೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಲ್ಲಿಗೆ ಬೆಲೆ ಕುಸಿತ ಕಂಡಿರುವುದು ಇದೇ ಮೊದಲು. ಬೆಲೆ ಕುಸಿತದಿಂದ ಸುಮಾರು 5 ರಿಂದ 6 ಲಕ್ಷ ರೂ. ನಷ್ಟ ಹೊಂದಿದ್ದೇನೆ. 
ಗೌಸು ಸಾಹೇಬ್‌, ಮಲ್ಲಿಗೆ ಬೆಳೆಗಾರ.

ಪ್ರತಿ ಕೆಜಿ ಮೊಗ್ಗು ಬಿಡಿಸಲು 60ರಿಂದ 70 ರೂ. ಕೂಲಿ ಕೊಡಬೇಕು. ಎಕರೆ ಮಲ್ಲಿಗೆ ಬೆಳೆಯಲು ಲಕ್ಷಾಂತರ ರೂ. ಖರ್ಚಾಗುತ್ತದೆ. ಇಷ್ಟು ಖರ್ಚು ಮಾಡಿ ಬೆಳೆದ ಮಲ್ಲಿಗೆಗೆ ಸೂಕ್ತ ಬೆಲೆ ಸಿಗದೆ ತುಂಬಾ ಸಂಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗುತ್ತದೆ. ಮಲ್ಲಿಗೆ ಬೆಳೆಗಾರನ ಬದುಕು ಉತ್ತಮ ವಾಗಬೇಕಾದರೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು.
ಮಲ್ಲಿಗೆ ಬೆಳೆಗಾರ

„ವಿಶ್ವನಾಥ ಹಳ್ಳಿಗುಡಿ

Advertisement

Udayavani is now on Telegram. Click here to join our channel and stay updated with the latest news.

Next