Advertisement

ಮಲ್ಲಿಗೆ ಪ್ರಿಯೆ ಸೀಮೆಯೊಡತಿಗೆ ನೇಮ ನಡಾವಳಿಯ ಸಂಭ್ರಮ

03:49 AM Apr 26, 2019 | mahesh |

ನಗರ: ಪುತ್ತೂರು ಸೀಮೆಯ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರೆಯ ಬಳಿಕ ನಡೆಯುವ ಇನ್ನೊಂದು ಧಾರ್ಮಿಕ ಕಾರ್ಯಕ್ರಮ ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಗಳ ನೇಮ ನಡಾವಳಿ. ಮಲ್ಲಿಗೆ ಪ್ರಿಯೆ ಸೀಮೆಯೊಡತಿಯ ನೇಮ ನಡಾವಳಿಗೆ ಬಲ್ನಾಡು ಕ್ಷೇತ್ರ, ಭಕ್ತರು ಸಿದ್ಧಗೊಂಡಿದ್ದಾರೆ.

Advertisement

ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಮತ್ತು ಬ್ರಹ್ಮರಥೋತ್ಸವ ಎ. 17 ರಂದು ನಲ್ಕುರಿ ಸಂಪ್ರದಾಯದಂತೆ ನಡೆಯುವಂತೆ ಬಲಾ°ಡಿನ ನೇಮ ನಡಾವಳಿ ಎ. 28 ರಂದು ಪ್ರತಿವರ್ಷ ನಡೆಯುತ್ತದೆ. ಇದು ನಿಗದಿತ ದಿನ. ಮಹಾಲಿಂಗೇಶ್ವರನಿಗೆ ಭಕ್ತಿಪೂರ್ವಕ ವಾಗಿ ನಡೆದುಕೊಂಡ ರೀತಿಯಲ್ಲಿಯೇ ಸೀಮೆಯ ಭಕ್ತರು ಬಲಾ°ಡಿನ ದಂಡನಾಯಕ ಉಳ್ಳಾಲ್ತಿ ದೈವಗಳಿಗೂ ನಡೆದುಕೊಳ್ಳುತ್ತಾರೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯ ಕೊಡಿ ಎ. 19 ರಂದು ಇಳಿಯುತ್ತದೆ. ಮರುದಿನ ಎ. 20 ರಂದು ಬಲಾ°ಡು ದೈವಸ್ಥಾನದಲ್ಲಿ ಗೊನೆ ಮುಹೂರ್ತ ನಡೆದು ನೇಮ ನಡಾವಳಿಗೆ ಚಾಲನೆ ನೀಡಲಾಗುತ್ತದೆ. ಎ. 25 ರಂದು ದೈವಗಳಿಗೆ ಮುಂಡ್ಯ ಹಾಕುವುದು (ಅಂದರೆ ಬಾಳೆ ಎಲೆಯಲ್ಲಿ ವಿವಿಧ ವಸ್ತುಗಳನ್ನು ಇರಿಸುವುದು). ಎ. 27 ರಂದು ರಾತ್ರಿ ಮೂಲಸ್ಥಾನದ ಭಂಡಾರದ ಕೊಟ್ಟಿಗೆಯಿಂದ ಭಂಡಾರ ತೆಗೆದು ದೈವಸ್ಥಾನಕ್ಕೆ ತೆಂಗಿನ ಗರಿಗಳ ಸೂಟೆಯ ಬೆಳಕಿನಲ್ಲಿ ಭಂಡಾರದ ಸವಾರಿ ಬರುತ್ತದೆ. ಅನಂತರ ತಂಬಿಲ ಸೇವೆ. ಅನ್ನ ಸಂತರ್ಪಣೆ ನಡೆಯುತ್ತದೆ. ಮರುದಿನ ದೈವಗಳ ನೇಮ ನಡೆಯುತ್ತದೆ.

ಮಹಿಳೆಯರಿಗೆ ನಿಷಿದ್ಧ
ಬಲಾ°ಡು ದೈವಸ್ಥಾನದ ಪೂರ್ವ ಶಿಷ್ಠ ಸಂಪ್ರದಾಯದಂತೆ ಉಳ್ಳಾಳ್ತಿ ದೈವದ ನೇಮವನ್ನು ಮಹಿಳೆಯರು ನೋಡ ಬಾರದು. ಮಹಿಳೆಯರಿಗೆ ನೇಮ ವೀಕ್ಷಣೆ ನಿಷಿದ್ಧ. ಉಳ್ಳಾಳ್ತಿ ದೈವವು ಹೆಣ್ಣು ದೈವವಾ ದರೂ ಹೆಂಗಸರು ನೇಮ ನೋಡ ಬಾರದು ಎಂಬ ಸಂಪ್ರದಾಯ ಇಲ್ಲಿ ಇದೆ. ಸಂಪ್ರದಾ ಯವನ್ನು ಕೂಡ ಭಕ್ತರು ಪಾಲಿಸುತ್ತಾರೆ.

ಶ್ರೀ ಉಳ್ಳಾಳ್ತಿ ದೈವವು ನೇಮ ಕಟ್ಟಿ ನಿಂತಾಗ ತನ್ನ ನುಡಿಕಟ್ಟಿನಲ್ಲಿ “ಯಾನ್‌ ದಂಡನಾಯಕನ ಮಚ್ಚರದ ತಂಗಡಿ’ (ನಾನು ದಂಡನಾಯಕನ ಮತ್ಸರದ ತಂಗಿ) ಎಂದು ಹೇಳುತ್ತದೆ. ಈ ನುಡಿಕಟ್ಟಿನ ಸಾಲು ಕೂಡ ಮಹಿಳೆಯರು ನೇಮ ನೋಡುವುದು ಸರಿಯಲ್ಲ ಎಂದು ಸಾಂಕೇತಿಸುತ್ತದೆ. ಯಾಕೆಂದರೆ ಬಲಾ°ಡಿನಲ್ಲಿ ಮಕ್ಕಳ ಸಹಿತ ಮಹಿಳೆಯರು ಕಾಲಿಗೆ ಬೆಳ್ಳಿಗಜ್ಜೆ ಕಟ್ಟಬಾರದು. ಯಾರೂ ಮುಖಕ್ಕೆ ಬಣ್ಣ ಹಚ್ಚಿ ನಾಟಕ ಮಾಡಬಾರದು, ಯಕ್ಷಗಾನ ಪ್ರದರ್ಶನ, ಭರಟನಾಟ್ಯ ಎಲ್ಲವೂ ಇಲ್ಲಿ ನಿಷಿದ್ಧ. ಮನೆಯಲ್ಲಿ ಜೋಕಾಲಿ ಕಟ್ಟವುದು ಕೂಡ ನಿಷಿದ್ಧ. ಅದೇ ರೀತಿ ಮಹಿಳೆಯರು ಮಲ್ಲಿಗೆ ಹೂವನ್ನು ಜಿಡೆಗೆ ಜೆಲ್ಲಿ ಬಿಡಬಾರದು. ಈ ನಿಯಮ ಈಗಲೂ ಪಾಲನೆಯಲ್ಲಿದೆ.

Advertisement

ಮಲ್ಲಿಗೆ ಹರಕೆ
ಎ. 28ರಂದು ಏರು ಹೊತ್ತಿನಲ್ಲಿ ನಡೆಯುವ ಬಲಾ°ಡು ಶ್ರೀ ಉಳ್ಳಾಳ್ತಿ ಅಮ್ಮನವ ನೇಮಕ್ಕೆ ಸೀಮೆಯ ಪ್ರತಿ ಮನೆಯಿಂದಲೂ ಮಲ್ಲಿಗೆ ಚೆಂಡುಗಳನ್ನು, ಕುಂಕುಮ, ಎಳನೀರು ಮತ್ತು ಕಾಣಿಕೆಯನ್ನು ಚಾಚೂ ತಪ್ಪದೆ ಸಮರ್ಪಿಸುವುದು ಇಲ್ಲಿನ ವಾಡಿಕೆ. ನೇಮೋತ್ಸವದಲ್ಲಿ ಪಾಲ್ಗೊಳ್ಳಲು ಅಸಾಧ್ಯವಾದವರು ನೇಮಕ್ಕೆ ತೆರಳುವ ಭಕ್ತಾದಿಗಳ ಕೈಯಲ್ಲಿ ತಮ್ಮ ಕಾಣಿಕೆ, ಹರಕೆ ಸೀರೆ, ಮಲ್ಲಿಗೆ ಹೂವನ್ನು ಕಳುಹಿಸುತ್ತಾರೆ.

ವಿಶಿಷ್ಟ ಪದ್ಧತಿಗಳು
·  ನಾಡಿನೆಲ್ಲೆಡೆ ಉಳ್ಳಾಲ್ತಿ ದೈವದ ನೇಮ ನಡೆಯುತ್ತದೆ. ಬಲಾ°ಡಿನಲ್ಲಿ ಉಳ್ಳಾಲ್ತಿ ದೈವ ಮದುವಣಗಿತ್ತಿಯ ಸಿಂಗಾರದಲ್ಲಿ ನೇಮ ಕಟ್ಟುತ್ತದೆ. ದೈವದ ಪಾತ್ರಿ ಮೂಗುತಿ ಧರಿಸುವ ವೇಳೆಗೆ ದೈವ ಆವೇಶಗೊಳ್ಳುತ್ತದೆ.

·  ಕೊಡಿಪ್ಪಾಡಿ ನಟ್ಟೋಜ ಶಾರ ಮನೆತನದವರು ಉಳ್ಳಾಲ್ತಿಯು ನೇಮದ ವೇಳೆ ಧರಿಸುವ ಬೆಳ್ಳಿಯ ಮುಗುಳ ಮಲ್ಲಿಗೆಯ ಆಭರಣವನ್ನು ತಂದೊಪ್ಪಿಸುತ್ತಾರೆ. ನೇಮದ ಬಳಿಕ ಈ ಆಭರಣವನ್ನು ಅವರ ವಶಕ್ಕೆ ಒಪ್ಪಿಸಲಾಗುತ್ತದೆ.

·  ಸೀಮೆಯ ಭಕ್ತರು ಉಳ್ಳಾಲ್ತಿ ದೈವಕ್ಕೆ ನೇಮದ ದಿನ ಸೀರೆ ಮತ್ತು ಮಲ್ಲಿಗೆಯನ್ನು ಒಪ್ಪಿಸುತ್ತಾರೆ. ಜತೆಗೆ ಎಳನೀರು, ಕುಂಕುಮ ಕಾಣಿಕೆ ಸಮರ್ಪಣೆ ಮಾಡುತ್ತಾರೆ.

·  ನೇಮದ ಸಂದರ್ಭದಲ್ಲಿ ಬಲಾ°ಡಿನಲ್ಲಿ ಯಾವುದೇ ವ್ಯಾಪಾರ ಮಾಡಲು ಅವಕಾಶವಿಲ್ಲ. ಭಕ್ತರು ಇಲ್ಲಿ ಉಚಿತವಾಗಿ ಮಜ್ಜಿಗೆ, ಪಾನಕ, ಲಿಂಬೆ ಶರಬತ್‌, ಕಬ್ಬಿನ ಹಾಲನ್ನು ವಿತರಿಸುತ್ತಾರೆ.

·  ಬಲ್ನಾಡಿನಲ್ಲಿ ನೇಮ ಸಂದರ್ಭದಲ್ಲಿ ನಡೆಯುವ ಅನ್ನಸಂತರ್ಪಣೆಗೆ ಮಾವಿನ ಕಾಯಿಯ ಚಟ್ನಿ ಇಲ್ಲಿ ಕಡ್ಡಾಯವಾಗಿ ಇರುತ್ತದೆ. ಮಾವಿನ ಕಾಯಿಯ ಚಟ್ನಿ ವಿಶೇಷ ರುಚಿಯನ್ನು ಹೊಂದಿರುತ್ತದೆ.

·  ಪುತ್ತೂರು ನಗರದ ಗ್ರಾಮ ಚಾವಡಿಯ ಬಳಿಯಿಂದ ಬಲಾ°ಡಿಗೆ ನೇಮಕ್ಕೆ ತೆರಳಲು ಉಚಿತ ವಾಹನ ವ್ಯವಸ್ಥೆ ಇರುತ್ತದೆ. ಯಾವುದೇ ಕಾರಣಕ್ಕೂ ಬಾಡಿಗೆ ಪಡೆದು ವಾಹನ ಸಂಚಾರ ಮಾಡುವಂತಿಲ್ಲ. ಆದ ಕಾರಣ ನಗರದ ರಿಕ್ಷಾ ಚಾಲಕರು, ಟೆಂಪೋ ಚಾಲಕರು ಮತ್ತು ಟೂರಿಸ್ಟ್‌ ವಾಹನದವರು ಎ. 28 ರಂದು ಬಲ್ನಾಡು ದೈವಸ್ಥಾನಕ್ಕೆ ಉಚಿತ ವಾಹನ ಸೇವೆಯನ್ನು ನಡೆಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next