Advertisement

ಮಲ್ಲಿಗೆ ಬೆಳೆಗಾರರ ಕೈಹಿಡಿಯದ ಪರಿಹಾರ ಪ್ಯಾಕೇಜ್‌ ; ಹೆಮ್ಮಾಡಿ ಸೇಂವಂತಿಗೆಗೂ ಸಂಕಟ

08:28 AM May 09, 2020 | Hari Prasad |

ಶಿರ್ವ: ರಾಜ್ಯ ಸರಕಾರವು ಬುಧವಾರ ಘೋಷಿಸಿರುವ ಪರಿಹಾರ ಪ್ಯಾಕೇಜ್‌ನಲ್ಲಿ ಹೂವು ಬೆಳೆಗಾರರು ಸೇರಿದ್ದಾರಾದರೂ ಉಡುಪಿ ಭಾಗದ ಪ್ರಮುಖ ಬೆಳೆಯಾಗಿರುವ ಶಂಕರಪುರ ಮಲ್ಲಿಗೆ ಬೆಳೆಗಾರರಿಗೆ ಇದು ನಿಷ್ಪ್ರಯೋಜಕ.

Advertisement

ಸರಕಾರದ ನೆರವು ಒಂದು ಹೆಕ್ಟೇರ್‌ಗೆ 25 ಸಾವಿರ ರೂ. ಆಗಿದ್ದು, ಕೆಲವು ಸೆಂಟ್ಸ್‌ ಗಳಷ್ಟು ಕಡಿಮೆ ಸ್ಥಳದಲ್ಲಿ ಬೆಳೆ ಯುವ ಮಲ್ಲಿಗೆಗೆ ಇದರನ್ವಯ ಕೆಲವು ನೂರು ರೂಪಾಯಿಗಳಷ್ಟು ಪರಿಹಾರ ಮಾತ್ರ ಸಿಗಲಿದೆ.

ಲಾಕ್‌ಡೌನ್‌ನಿಂದಾಗಿ ಶುಭ ಸಮಾರಂಭಗಳು ನಡೆಯದೆ ಮಲ್ಲಿಗೆ ಧಾರಣೆ ಪಾತಾಳಕ್ಕೆ ಕುಸಿದಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಸ್ವಲ್ಪ ಸಮಯ ಮಲ್ಲಿಗೆ ಕಟ್ಟೆಯನ್ನು ಬಂದ್‌ ಮಾಡಬೇಕಾದ ಪರಿಸ್ಥಿತಿಯೂ ಎದುರಾಗಿತ್ತು.

5,000 ಬೆಳೆಗಾರರು
ತೋಟಗಾರಿಕೆ ಇಲಾಖೆ ಪ್ರಕಾರ ಉಡುಪಿ ಜಿಲ್ಲೆಯ ಕಾಪು ತಾಲೂಕಿನ 10 ಗ್ರಾಮಗಳಲ್ಲಿ 5,000 ಮಲ್ಲಿಗೆ ಬೆಳೆಗಾರರಿದ್ದು, ಒಟ್ಟು 103 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಶಂಕರಪುರ ಪರಿಸರದ ಕಟಪಾಡಿ, ಬಂಟಕಲ್ಲು, ಶಿರ್ವ, ಮೂಡುಬೆಳ್ಳೆ, ಇನ್ನಂಜೆ, ಹೇರೂರು ಅಲ್ಲದೆ ಹತ್ತಿರದ ಮುದರಂಗಡಿ, ಪಲಿಮಾರು, ಬೆಳ್ಮಣ್‌, ಮುಂಡ್ಕೂರುಗಳಲ್ಲಿಯೂ ಬೆಳೆಯಲಾಗುತ್ತಿದೆ.

ಸಿಗದ ಪರಿಹಾರ, ಸಹಾಯಧನ
ಸಾಮಾನ್ಯವಾಗಿ 1 ಎಕ್ರೆಗಿಂತ ಹೆಚ್ಚಿನ ಪ್ರದೇಶದ ಬೆಳೆಗಳಿಗೆ ಮಾತ್ರ ಸರಕಾರದ ಸಬ್ಸಿಡಿ, ಕೃಷಿ ಸಲಕರಣೆಗಳಿಗೆ ಸಹಾಯಧನ ಇತ್ಯಾದಿ ಲಭಿಸುತ್ತದೆ. ಮಲ್ಲಿಗೆಯನ್ನು ತೋಟಗಾರಿಕಾ ಬೆಳೆ ಎಂದು ಹೇಳಲಾಗುತ್ತಿದೆಯಾದರೂ ಅದು ಕೇವಲ 5ರಿಂದ 10 ಸೆಂಟ್ಸ್‌ ಜಮೀನಿನಲ್ಲಿ ಬೆಳೆಯುವ ಕಾರಣ ಯಾವುದೇ ರೀತಿಯ ನೆರವು ಅವರಿಗೆ ಲಭಿಸುತ್ತಿಲ್ಲ. ಘೋಷಿತ ಪರಿಹಾರ ಏನೇನೂ ಸಾಲದು. ಗಿಡವೊಂದಕ್ಕೆ ಕನಿಷ್ಠ 500 ರೂ.ಗಳಂತೆ ಪರಿಹಾರ ನೀಡಿ ಕೃಷಿಕರ ಹಿತ ಕಾಯಬೇಕಿದೆ ಎಂದು ಮಲ್ಲಿಗೆ ಬೆಳೆಗಾರರ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ ಆಗ್ರಹಿಸಿದ್ದಾರೆ.

Advertisement

ಉಡುಪಿ ಮಲ್ಲಿಗೆಗೆ ಸರಕಾರದಿಂದ ಘೋಷಣೆಯಾದ ಪರಿಹಾರ 10 ಸೆಂಟ್ಸ್‌ಗೆ 1,000 ರೂ. ಬರುತ್ತದೆ. ಇದು ಸಾಲದು. ಶಂಕರಪುರ ಮಲ್ಲಿಗೆ ಜಿಐ ಮಾನ್ಯತೆ ಪಡೆದಿರುವುದರಿಂದಾಗಿ ಹೆಚ್ಚಿನ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು.
– ಸಂಜೀವ ನಾಯ್ಕ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಉಡುಪಿ

ನೆರವಿನ ನಿರೀಕ್ಷೆಯಲ್ಲಿ ಸೇವಂತಿಗೆ ಬೆಳೆಗಾರರು
ಕುಂದಾಪುರ: ರಾಜ್ಯ ಸರಕಾರ ಘೋಷಿಸಿರುವ ಪರಿಹಾರವನ್ನು ಹವಾಮಾನ ವೈಪರೀತ್ಯ ಹಾಗೂ ಕೋವಿಡ್ ನಿಂದಾಗಿ ಸಂಕಷ್ಟ ಅನುಭವಿಸಿರುವ ನಮಗೂ ನೀಡಬೇಕು ಎಂದು ಹೆಮ್ಮಾಡಿ ಸೇವಂತಿ ಬೆಳೆಗಾರರು ಆಗ್ರಹಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿಯೇ ಅಪರೂಪವಾದ ಹೆಮ್ಮಾಡಿ ಸೇವಂತಿಗೆಗೆ ಎಲ್ಲೆಡೆ ಭಾರೀ ಬೇಡಿಕೆಯಿದೆ. ಆದರೆ ಈ ಬಾರಿ ಲಾಕ್‌ಡೌನ್‌ನಿಂದಾಗಿ ಜಾತ್ರೆ, ಕೆಂಡ ಸೇವೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳೆಲ್ಲ ರದ್ದಾಗಿರುವುದರಿಂದ ಸೇವಂತಿಗೆಗೆ ಮಾರುಕಟ್ಟೆ ಇಲ್ಲದಂತಾಗಿದೆ.

ಹೆಮ್ಮಾಡಿ ಪರಿಸರದ 60ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಸೇವಂತಿಗೆ ಬೆಳೆಯಲಾಗುತ್ತಿದೆ. ವರ್ಷಕ್ಕೆ ಲಕ್ಷಾಂತರ ರೂ. ಆದಾಯ ತರುವ ಸೇವಂತಿಗೆ ಹೂವು ಈ ಬಾರಿ ಮಾತ್ರ ಬೆಳಗಾರರಲ್ಲಿ ಕಣ್ಣೀರು ತಂದಿದೆ. ಆರಂಭದಲ್ಲಿ ಮಳೆ ಅಡ್ಡಿಯಾದರೆ, ಹೂ ಬಿಡುವ ವೇಳೆ ಮೋಡದಿಂದಾಗಿ ತೊಂದರೆಯಾಗಿತ್ತು. ಕೀಟ ಬಾಧೆ, ನೀರಿನ ಅಭಾವದಿಂದಾಗಿಯೂ ಸಾಕಷ್ಟು ನಷ್ಟ ಅನುಭವಿಸಿದ್ದೇವೆ.

ಧಾರ್ಮಿಕ ಕಾರ್ಯಕ್ರಮಗಳು ರದ್ದಾಗಿದ್ದರಿಂದಲೂ ತೊಂದರೆಯಾಗಿದೆ. ಹಾಗಾಗಿ ರಾಜ್ಯ ಸರಕಾರ ಇತರ ಹೂ ಬೆಳೆಗಾರರಿಗೆ ನೀಡುವಂತೆ ನಮಗೂ ನಷ್ಟ ಪರಿಹಾರ ನೀಡಲಿ ಎಂದು ಹೆಮ್ಮಾಡಿ ಸೇವಂತಿಗೆ ಬೆಳೆಗಾರರ ಸಂಘದ ಅಧ್ಯಕ್ಷ ಮಹಾಬಲ ದೇವಾಡಿಗ ಆಗ್ರಹಿಸಿದ್ದಾರೆ.

ನಷ್ಟ ಪರಿಹಾರದ ಮಾರ್ಗಸೂಚಿ ಇನ್ನೂ ನಮ್ಮ ಕೈಸೇರಿಲ್ಲ. ಹೆಮ್ಮಾಡಿ ಸೇವಂತಿಗೆ ಸೀಸನ್‌ ಕೊನೆಯಲ್ಲಿ ಲಾಕ್‌ಡೌನ್‌ನಿಂದ ಸ್ವಲ್ಪ ಮಟ್ಟಿಗೆ ಸಮಸ್ಯೆಯಾಗಿರುವುದ ಹೌದು. ಸೂಕ್ತ ಪರಿಹಾರಕ್ಕೆ ಇಲಾಖೆಯಿಂದ ಪ್ರಯತ್ನಿಸಲಾಗುವುದು.
– ಭುವನೇಶ್ವರಿ, ಉಪನಿರ್ದೇಶಕಿ, ತೋಟಗಾರಿಕೆ ಇಲಾಖೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next