ಬೆಂಗಳೂರು: ಯಡಿಯೂರಪ್ಪನವರ ಅಧಿಕಾರದ ಹಾದಿಯಲ್ಲಿ ಜಾರಕಿಹೊಳಿ ಸಹೋದರರು ‘ಮುಳ್ಳು-ಮೆಟ್ಟಿಲು’ ಆಗಿರುವುದು ವಿಪರ್ಯಾಸ.
2010ರಲ್ಲಿ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಲು ಅದೇ ಪಕ್ಷದ ಶಾಸಕರಾಗಿದ್ದ ಬಾಲಚಂದ್ರ ಜಾರಕಿಹೊಳಿಯವರು ‘ಮಗ್ಗುಲ ಮುಳ್ಳು’ ಆಗಿ ಕಾಡಿದ್ದರೆ, ಈಗ 9 ವರ್ಷದ ಬಳಿಕ ಯಡಿಯೂರಪ್ಪ ಅಧಿಕಾರ ಏರಲು ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ‘ಮೆಟ್ಟಿಲು’ ಆಗಿದ್ದಾರೆ.
ಆಗ ಯಡಿಯೂರಪ್ಪನವರ ಕುರ್ಚಿ ಉಳಿಯಲು ಬಾಲಚಂದ್ರ ಜಾರಕಿಹೊಳಿ ಅನರ್ಹಗೊಂಡಿದ್ದರೆ, ಈಗ ರಮೇಶ್ ಜಾರಕಿಹೊಳಿಯವರ ಅನರ್ಹತೆ ಯಡಿಯೂರಪ್ಪರಿಗೆ ಮತ್ತೂಮ್ಮೆ ಕುರ್ಚಿ ಹಿಡಿಯಲು ಅನುಕೂಲ ಮಾಡಿಕೊಟ್ಟಂತಾಗಿದೆ. ಆಗ ಬಾಲಚಂದ್ರ, ಯಡಿಯೂರಪ್ಪ ವಿರುದ್ಧ 9 ತಿಂಗಳ ಕಾನೂನು ಹೋರಾಟ ನಡೆಸಿದ್ದರೆ, ಈಗ ರಮೇಶ್ ಕಾನೂನು ಹೋರಾಟ ನಡೆಸಿದಷ್ಟು ದಿನ ಬಿಎಸ್‌ವೈ ಹಾಗೂ ಬಿಜೆಪಿಗೆ ನಿರಾಳ.
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅವರ ನಾಯಕತ್ವವನ್ನು ಪ್ರಶ್ನಿಸಿ ಬಾಲಚಂದ್ರ ಸೇರಿದಂತೆ ಬಿಜೆಪಿಯ 11 ಹಾಗೂ ಐವರು ಪಕ್ಷೇತರ ಶಾಸಕರು ಬಂಡಾಯ ಸಾರಿದ್ದರು. ವಿಶ್ವಾಸಮತ ಗೆಲ್ಲಲು ಎಲ್ಲ 16 ಶಾಸಕರನ್ನು ಅನರ್ಹಗೊಳಿಸಲಾಗಿತ್ತು. ಸ್ಪೀಕರ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ನಡೆದ ಕಾನೂನು ಹೋರಾಟದಲ್ಲಿ ಬಾಲಚಂದ್ರ ಜಾರಕಿಹೊಳಿಯವರೇ ಪ್ರಮುಖ ಪ್ರತಿವಾದಿಯಾಗಿದ್ದರು. ಬಂಡಾಯ ಸಾರಿದ್ದಾಗ ಅವರು ಮಂತ್ರಿ ಆಗಿದ್ದರು.
ಈಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮಂತ್ರಿ ಆಗಿದ್ದ ರಮೇಶ್ ಜಾರಕಿಹೊಳಿ, ಇಲಾಖೆಯ ನಿರ್ವಹಣೆಯಲ್ಲಿ ಅಷ್ಟೊಂದು ಆಸಕ್ತಿ ತೋರಿಸುತ್ತಿರಲಿಲ್ಲ. ಸಚಿವ ಸಂಪುಟ ಸಭೆಗಳಿಗೂ ಗೈರು ಹಾಜರಾಗುತ್ತಿದ್ದರು. ಈ ವಿಚಾರವನ್ನು ಕೆಲವರು ಕೋರ್ಟ್‌ನಲ್ಲೂ ಪ್ರಶ್ನಿಸಿದ್ದರು. ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವರನ್ನು ಕೈಬಿಡಲಾಯಿತು. ಆಗ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಂಡು ಪದೇ ಪದೆ ಭಿನ್ನಮತೀಯ ಚಟುವಟಿಕೆಗಳನ್ನು ನಡೆಸಿದರು. ಕುಮಾರಸ್ವಾಮಿಯವರ ಸರ್ಕಾರ ವಿಶ್ವಾಸಮತ ಕಳೆದುಕೊಳ್ಳಲು ಹಾಗೂ ಬಿಎಸ್‌ವೈ ಅವರಿಗೆ ಹಾದಿ ಸುಗಮ ಮಾಡಿಕೊಡಲು ಕಾರಣರಾದ ಕಾಂಗ್ರೆಸ್-ಜೆಡಿಎಸ್‌ನ ಅತೃಪ್ತ ಶಾಸಕರಿಗೆ ರಮೇಶ್ ಜಾರಕಿಹೊಳಿಯವರೇ ‘ನಾಯಕ’.
ಬಿಜೆಪಿಯಿಂದ ಅನರ್ಹಗೊಂಡಿದ್ದರೂ ಸುಪ್ರೀಂಕೋರ್ಟ್‌ನಲ್ಲಿ ಗೆದ್ದು ಬಾಲಚಂದ್ರ ಜಾರಕಿಹೊಳಿ ಅದೇ ಪಕ್ಷದಿಂದ 2013ರ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದರು. ತಾವು ಬಂಡಾಯ ಸಾರಿದ್ದ ಯಡಿಯೂರಪ್ಪನವರು ಬಿಜೆಪಿಯಿಂದ ಹೊರ ಬಂದು ಕೆಜೆಪಿ ಕಟ್ಟಿದ್ದರಿಂದ ಬಿಜೆಪಿಯಲ್ಲಿ ಉಳಿದುಕೊಳ್ಳುವ ಬಾಲಚಂದ್ರ ಹಾದಿ ಸುಗಮವಾಗಿತ್ತು.
ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ, ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿ ಅಧಿಕಾರ ಅನುಭವಿಸಿ ಕೊನೆಗೆ ಅತೃಪ್ತ ಶಾಸಕರ ಗುಂಪು ಕಟ್ಟಿಕೊಂಡು ಮುಂಬೈಗೆ ಹಾರಿದ ರಮೇಶ್ ಜಾರಕಿಹೊಳಿ, ಈಗ 2023ರ ಮೇ ವರೆಗೆ, ಅಂದರೆ 15ನೇ ವಿಧಾನಸಭೆ ಅವಧಿ ಮುಕ್ತಾಯಗೊಳ್ಳುವವರೆಗೆ ಅನರ್ಹಗೊಂಡಿದ್ದಾರೆ. ಕಾನೂನು ಹೋರಾಟ ಅವರ ಮುಂದಿರುವ ಹಾದಿ. 2010ರಲ್ಲಿ ಅನರ್ಹಗೊಂಡ ಬಳಿಕ ಕಾನೂನು ಹೋರಾಟ ನಡೆಸಿದ ಅನುಭವ ಹೊಂದಿದ್ದ ಬಾಲಚಂದ್ರ ಜಾರಕಿಹೊಳಿಯವರು, ಅತೃಪ್ತ ಶಾಸಕರ ಕಾನೂನು ಹೋರಾಟಕ್ಕೆ ಮಾರ್ಗದರ್ಶನ ನೀಡಲು ಮುಂಬೈ, ದೆಹಲಿ ಹೋರಾಟ ನಡೆಸಿದ್ದು ಗಮನಾರ್ಹ.