Advertisement

ಭಾರತೀಯ ಜನತಾ ಪಕ್ಷದೊಂದಿಗೆ ಜಾರ್ಖಂಡ್ ವಿಕಾಸ್ ಮೋರ್ಚಾ ವಿಲೀನ

09:53 AM Feb 18, 2020 | Team Udayavani |

ನವದೆಹಲಿ: ಜಾರ್ಖಂಡ್ ರಾಜ್ಯದ ಮಾಜೀ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ವಿಕಾಸ್ ಮೋರ್ಚಾ ಪಕ್ಷದ ಅಧ್ಯಕ್ಷ ಬಾಬು ಲಾಲ್ ಮೊರಾಂಡಿ ಅವರು ತಮ್ಮ ಪಕ್ಷವನ್ನು ಭಾರತೀಯ ಜನತಾ ಪಕ್ಷದೊಂದಿಗೆ ವಿಲೀನಗೊಳಿಸಿದ್ದಾರೆ.

Advertisement

ಈ ಮೂಲಕ ಪ್ರಾಕೃತಿಕ ಸಂಪನ್ಮೂಲಭರಿತ ಬುಡಕಟ್ಟು ಜನರೇ ಅಧಿಕ ಸಂಖ್ಯೆಯಲ್ಲಿರುವ ರಾಜ್ಯದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬಾಬು ಲಾಲ್ ಅವರು ಸುಮಾರು ಹದಿಮೂರು ವರ್ಷಗಳ ಬಳಿಕ ತನ್ನ ಮಾತೃಪಕ್ಷಕ್ಕೆ ಮರಳಿದಂತಾಗಿದೆ. ಮೊರಾಂಡಿ ಅವರು ನವಂಬರ್ 2000ದಿಂದ ಮಾರ್ಚ್ 2003ರವರೆಗೆ ಜಾರ್ಖಂಡ್ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಭಾರತೀಯ ಜನತಾ ಪಕ್ಷದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

ರಾಂಚಿಯ ಪ್ರಭಾತ್ ತಾರಾ ಮೈದಾನದಲ್ಲಿ ಇಂದು ನಡೆದ ಭವ್ಯ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಬಾಬು ಲಾಲ್ ಅವರು ತಮ್ಮ ಮಾತೃ ಪಕ್ಷಕ್ಕೆ ವಾಪಾಸಾದರು. ಇದೇ ಸಂದರ್ಭದಲ್ಲಿ ಬಾಬು ಲಾಲ್ ಅವರೊಂದಿಗೆ ಸಾವಿರಾರು ಜೆವಿಎಂ ಕಾರ್ಯಕರ್ತರೂ ಸಹ ಬಿಜೆಪಿಗೆ ಸೇರ್ಪಡೆಗೊಂಡರು.

ಮೊರಾಂಡಿ ಅವರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಮಾತೃಪಕ್ಷಕ್ಕೆ ಮರಳುವ ಸಮಾರಂಭವನ್ನು ಬಿಜೆಪಿ ಅದ್ದೂರಿಯಾಗಿ ಆಯೋಜಿಸಿತ್ತು. ಸಮಾರಂಭದಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಓಂ ಮಾಥುರ್, ಮಾಜೀ ಮುಖ್ಯಮಂತ್ರಿ ರಘುಬರ್ ದಾಸ್ ಹಾಗೂ ಲೋಕಸಭಾ ಹಾಗೂ ರಾಜ್ಯಸಭಾ ಸಂಸದರ ಸಹಿತ ಕಮಲ ಪಕ್ಷದ ಘಟಾನುಘಟಿ ನಾಯಕರು ಉಪಸ್ಥಿತರಿದ್ದರು.

ಈ ವಿಲೀನವನ್ನು ವಿರೋಧಿಸಿದ್ದ ಇಬ್ಬರು ಜೆವಿಎಂ ನಾಯಕರನ್ನು ಆದಿತ್ಯವಾರವಷ್ಟೇ ಪಕ್ಷದಿಂದ ಉಚ್ಛಾಟಿಸಲಾಗಿತ್ತು ಮತ್ತು ಆ ಇಬ್ಬರೂ ನಾಯಕರು ಇದೀಗ ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಹೇಳಿಕೊಂಡಿದ್ದಾರೆ. ಪ್ರದೀಪ್ ಯಾದವ್ ಹಾಗೂ ಬಂಧು ಟಿರ್ಕಿ ಅವರೇ ಜೆವಿಎಂನಿಂದ ಉಚ್ಛಾಟನೆಗೊಂಡಿರುವ ನಾಯಕರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next