Advertisement

ಜಾರಕಿಹೊಳಿ ಸಿ.ಡಿ. ಪ್ರಕರಣ: ತನಿಖಾ ವರದಿ ಸಲ್ಲಿಸಲು ಹೈಕೋರ್ಟ್‌ ಅನುಮತಿ

10:16 PM Feb 03, 2022 | Team Udayavani |

ಬೆಂಗಳೂರು: ಅತ್ಯಾಚಾರ ಆರೋಪ ಸಂಬಂಧ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಸಂತ್ರಸ್ತ ಯುವತಿ ದಾಖಲಿಸಿದ್ದ ದೂರಿಗೆ ಸಂಬಂಧಿಸಿದ ಅಂತಿಮ ತನಿಖಾ ವರದಿಯನ್ನು ವಿಚಾರಣ ನ್ಯಾಯಾಲಯಕ್ಕೆ ಸಲ್ಲಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ)ಕ್ಕೆ ಹೈಕೋರ್ಟ್‌ ಅನುಮತಿ ನೀಡಿದೆ.

Advertisement

ಪ್ರಕರಣದ ಅಂತಿಮ ತನಿಖಾ ವರದಿಯನ್ನು ವಿಚಾರಣ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಎಂದು ಎಸ್‌ಐಟಿ ಸಲ್ಲಿಸಿದ್ದ ಮಧ್ಯಾಂತರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ| ರಿತುರಾಜ್‌ ಅವಸ್ಥಿ ಹಾಗೂ ನ್ಯಾ| ಸೂರಜ್‌ ಗೋವಿಂದರಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ಈ ಆದೇಶ ನೀಡಿದೆ.

ಬಾಕ್ಸ್‌ಸುಪ್ರೀಂನಲ್ಲಿ ಪ್ರಶ್ನಿಸುತ್ತೇವೆ:

ಎಸ್‌ಐಟಿ ಅಂತಿಮ ತನಿಖಾ ವರದಿಯನ್ನು ವಿಚಾರಣ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡಿ ಹೈಕೋರ್ಟ್‌ ಆದೇಶ ಹೊರಡಿಸಿದ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಸಂತ್ರಸ್ತೆ ಪರ ಹೈಕೋರ್ಟ್‌ನಲ್ಲಿ ವಕಾಲತ್ತು ವಹಿಸಿದ್ದ  ಸಂಕೇತ್‌ ಏಣಗಿ,  ಎಸ್‌ಐಟಿ ರಚನೆಯ ನ್ಯಾಯಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯು ವಿಚಾರಣೆಗೆ ಬಾಕಿ ಇರುವಾಗ,  ತನಿಖಾ ವರದಿ ಸಲ್ಲಿಸಲು ಅನುಮತಿ ನೀಡಿರುವ ಹೈಕೋರ್ಟ್‌ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದ್ದಾರೆ.

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ  ಸಿಡಿ’ ಪ್ರಕರಣ ಕುರಿತ ತನಿಖೆ ಅಂತಿಮ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡುವಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

Advertisement

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಆರೋಪ ಕುರಿತು ಸಂತ್ರಸ್ತೆ ಯುವತಿ 2021 ಮಾ.26ರಂದು ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಗೆ (ಕ್ರೈಂ ನಂ-30/2021) ದಾಖಲಿಸಿರುವ ದೂರಿಗೆ ಸಂಬಂಧಿಸಿದ ತನಿಖಾ ವರದಿಯನ್ನು  ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ಕೋರಿ ಎಸ್‌ಟಿಸಿ ಮಧ್ಯಂತರ ಅರ್ಜಿ ಸಲ್ಲಿಸಿದೆ. ಅದರಂತೆ ಈಗಾಗಲೇ ತನಿಖೆ ಪೂರ್ಣಗೊಂಡಿದೆ. ತನಿಖಾ ವರದಿಯನ್ನು ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರು ಸಂಪೂರ್ಣವಾಗಿ ಸಮ್ಮತಿಸಿ ಅನುಮೋದನೆ ನೀಡಿದ್ದಾರೆ. ಹಾಗಾಗಿ, ಆ ತನಿಖಾ ವರದಿಯನ್ನು ವಿಚಾರಣಾ  ನ್ಯಾಯಾಲಯಕ್ಕೆ ಸಲ್ಲಿಸುವುದರಿಂದ ಎಸ್‌ಐಟಿಯನ್ನು ನಿರ್ಬಂಧಿಸಲು ಸೂಕ್ತ ಕಾರಣಗಳು ಹೈಕೋರ್ಟ್‌ ಮುಂದೆ ಕಾನುತ್ತಿಲ್ಲ. ಆದ್ದರಿಂದ ಎಸ್‌ಐಟಿ ತನಿಖಾಧಿಕಾರಿಯು ತನಿಖಾ ವರದಿಯನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಸಲ್ಲಿಸಬಹುದು ಎಂದು ನ್ಯಾಯಪೀಠ ಆದೇಶಿಸಿತು.

ಇದೇ ವೇಳೆ ಎಸ್‌ಐಟಿ ರಚನೆಯ ನ್ಯಾಯಬದ್ಧತೆ ಹಾಗೂ ತನಿಖಾಧಿಕಾರಿ ಪ್ರಕರಣದ ತನಿಖೆ ನಡೆಸುವ ಅಧಿಕಾರ ವ್ಯಾಪ್ತಿ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ಆಕ್ಷೇಪಣೆ ಹಾಗೂ ಪ್ರಶ್ನೆಗಳನ್ನು ಮುಕ್ತವಾಗಿರಿಸಲಾಗಿದೆ. ಈ ವಿಚಾರಗಳನ್ನು ವಿಚಾರಣಾ ನ್ಯಾಯಾಲಯದ ಮುಂದೆ ತರಲು ಅರ್ಜಿದಾರರು ಹಾಗೂ ಅವುಗಳನ್ನು ಪರಿಗಣಿಸಲು ವಿಚಾರಣಾ ನ್ಯಾಯಾಲಯ ಸ್ವತಂತ್ರವಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಹಾಗೆಯೇ, ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ ನಗರ ಪೊಲೀಸ್‌ ಆಯುಕ್ತರು ಹೊರಡಿಸಿರುವ ಆದೇಶದ ಸಾಂವಿಧಾನಿಕ ಸಿಂಧುತ್ವವನ್ನು ಹೈಕೋರ್ಟ್‌ ಪರಿಗಣಿಸಲಿದೆ ಎಂದು ತಿಳಿಸಿದ ನ್ಯಾಯಪೀಠ ವಿಚಾರಣೆಯನ್ನು ಮಾ.9ಕ್ಕೆ ಮುಂದೂಡಿತು.

ಅರ್ಜಿದಾರರ ವಾದ:

ವಿಚಾರಣೆ ವೇಳೆ ಸಂತ್ರಸ್ತ ಯುವತಿ ಪರ ಸುಪ್ರೀಂಕೋಟ್‌ರ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ವಾದ ಮಂಡಿಸಿ, ರಾಜ್ಯ ಸರ್ಕಾರ ಅಥವಾ ಹೈಕೋರ್ಟ್‌ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಿಲ್ಲ. ಸಂತ್ರಸ್ತೆ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಕ್ಕೂ ಮುನ್ನ ಎಸ್‌ಐಟಿ ರಚಿಸಲಾಗಿತ್ತು. ಅದೂ ರಮೇಶ್‌ ಜಾರಕಿಹೊಳಿಯ ಮನವಿ ಮೇರೆಗೆ ಅಂದಿನ ಗೃಹ ಸಚಿವರು ನೀಡಿದ ನಿರ್ದೇಶನ್ವಯ ನಗರ ಪೊಲೀಸ್‌ ಆಯುಕ್ತರು ಎಸ್‌ಐಟಿ ರಚಿಸಿದ್ದರು. ಆರೋಪಿ ಸಚಿವರ ಅನುಕೂಲಕ್ಕೆ ತಕ್ಕಂತೆ ಎಸ್‌ಐಟಿ ರಚಿಸಲಾಗಿದೆ. ಇದರಿಂದ ಪ್ರಕರಣದ ತನಿಖೆ ನಡೆಸುವ ಅಧಿಕಾರವು ಎಸ್‌ಐಟಿಗೆ ಇಲ್ಲವಾಗಿದೆ. ಇನ್ನು ಇಡೀ ತನಿಖೆಯನ್ನು ಸಿಆರ್‌ಪಿಸಿ ನಿಯಮಗಳಿಗೆ ಅನುಗುಣವಾಗಿ ನಡೆದಿಲ್ಲ ಈ ಸಂಗತಿಗಳು ಮತ್ತು ಪರಿಸ್ಥಿತಿಗಳನ್ನು ಪರಿಗಣಿಸಿ ತನಿಖೆಯ ಮೇಲೆ ಹೈಕೋರ್ಟ್‌ ಮೇಲ್ವಿಚಾರಣೆ ನಡೆಸಿತ್ತು ಎಂದು ತಿಳಿಸಿದರು.

ಅಲ್ಲದೆ, ಎಸ್‌ಐಟಿ ರಚನೆಯ ಸಿಂಧುÌತ್ವವನ್ನೇ ಪ್ರಶ್ನಿಸಲಾಗಿದೆ. ಸಿಂಧುತ್ವದ ವಿಚಾರ ನಿರ್ಧಾರವಾಗುವುದಿಲ್ಲವೋ, ಅಲ್ಲಿಯವರೆಗೆ ವಿಚಾರಣಾ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಅನುಮತಿ ಸಾಧ್ಯವಿಲ್ಲ. ಆದ್ದರಿಂದ ವಿಚಾರಣಾ ನ್ಯಾಯಾಲಯಕ್ಕೆ ಎಸ್‌ಐಟಿ ವರದಿ ಸಲ್ಲಿಸಲು ಅನುಮತಿ ನೀಡಬಾರದು. ಅಲ್ಲದೇ ತನಿಖಾ ವರದಿ ಮಾಧ್ಯಮಗಳಿಗೆ ಸೋರಿಕೆಯಾಗಿದೆ. ಬಿ ರಿಪೋರ್ಟ್‌ ಸಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರವನ್ನು ನ್ಯಾಯಾಲಯ ಪರಿಗಣಿಸಬೇಕು ಎಂದು ಕೋರಿದರು.

ಎಸ್‌ಐಟಿ ವಾದ:

ಎಸಐಟಿ ಪರ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ವಾದ ಮಂಡಿಸಿ, ಸಂತ್ರಸ್ತೆ ದಾಖಲಿಸಿದ್ದ ದೂರಿಗೆ ಸಂಬಂಧಿಸಿದ ಪ್ರಕರಣದ ತನಿಖೆಗೆ ಬೆಂಗಳೂರು ಪಶ್ಚಿಮ ಸಂಚಾರ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತೆ ಎಂ.ಸಿ.ಕವಿತಾ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿತ್ತು. ಅವರನ್ನು ಎಸ್‌ಐಟಿ ತಂಡಕ್ಕೆ ನಿಯೋಜಿಸಲಾಗಿತ್ತು. ಅವರು ತನಿಖೆ ಪೂರ್ಣಗೊಳಿಸಿ ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರಿಗೆ ವರದಿ ಸಲ್ಲಿಸಿದ್ದಾರೆ. ಮುಖರ್ಜಿ ವರದಿಯನ್ನು ಅನುಮೋದಿಸಿದ್ದಾರೆ. ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಿ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಅದರಂತೆ ಪ್ರಕರಣದ ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಅನಮತಿ ನೀಡಬೇಕು. ಕಾನೂನು ಪ್ರಕಾರವೇ ತನಿಖೆ ನಡೆಸಲಾಗಿದೆ ಎಂದು ತಿಳಿಸಿದರು.

ಅಲ್ಲದೆ, ಸದಾಶಿವ ನಗರದಲ್ಲಿ ಜಾರಕಿಹೊಳಿ ಅವರು ನೀಡಿರುವ ದೂರಿಗೆ ಸಂಬಂಧಿಸಿದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಸಂತ್ರಸ್ತೆಯ ತಂದೆಯು ಆರ್‌.ಟಿ. ನಗರದಲ್ಲಿ ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದ ಪ್ರಕರಣದ ತನಿಖೆಯು ಪೂರ್ಣಗೊಂಡಿದ್ದು, ಬಿ ರಿಪೋರ್ಟ್‌ ಸಲ್ಲಸಿಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next