ಟೋಕಿಯೋ:ಪ್ರಬಲ ಹಗಿಬೀಸ್ ಚಂಡಮಾರುತವು ಶನಿವಾರ ಜಪಾನ್‌ನ ಟೋಕಿಯೋವನ್ನು ಅಪ್ಪಳಿಸಿದ್ದು, ಇದನ್ನು 60 ವರ್ಷಗಳಲ್ಲೇ ಅತ್ಯಂತ ಭೀಕರ ಚಂಡಮಾರುತ ಎಂದು ಬಣ್ಣಿಸಲಾಗಿದೆ.
ಇದು ಅಪ್ಪಳಿಸುವುದಕ್ಕೂ ಮುನ್ನ ಟೋಕಿಯೋ ಹಾಗೂ ಸುತ್ತಮುತ್ತಲಿನ ನಗರಗಳಲ್ಲಿ ಭಾರೀ ಮಳೆ, ಬಿರುಗಾಳಿ ಉಂಟಾಗಿದ್ದು, ಅಪಾರ ಪ್ರಮಾಣದ ಹಾನಿಯೂ ಆಗಿದೆ.
ಹಗಿಬೀಸ್ ಎಂದರೆ ಫಿಲಿಪಿನೋ ಭಾಷೆಯಲ್ಲಿ “ವೇಗ’ ಎಂದು ಅರ್ಥ. ಇದು ಉತ್ತರ-ವಾಯವ್ಯದತ್ತ ಮುನ್ನುಗ್ಗಿ, ಗಂಟೆಗೆ 162 ಕಿಲೋಮೀಟರ್ ವೇಗದಲ್ಲಿ ಅಪ್ಪಳಿಸಿದೆ.
ಚಂಡಮಾರುತದ ಹಿನ್ನೆಲೆಯಲ್ಲಿ ಎಲ್ಲ ನಿಪ್ಪನ್ ಏರ್‌ವೆàಸ್ ಹಾಗೂ ಜಪಾನ್ ಏರ್‌ಲೈನ್ಸ್‌ನ ವಿಮಾನಗಳ ಸಂಚಾರ ರದ್ದಾಗಿವೆ. ಟೋಕಿಯೋ ಮತ್ತು ಒಸಾಕಾ ನಡುವಿನ ಬುಲೆಟ್ ರೈಲು ಸಂಚಾರವೂ ಸ್ಥಗಿತಗೊಂಡಿದೆ. ಟೋಕಿಯೋ ಡಿಸ್ನಿಲ್ಯಾಂಡ್ ಅನ್ನೂ ಶನಿವಾರ ಮುಚ್ಚಲಾಗಿತ್ತು.ಸುಮಾರು 17 ಸಾವಿರ ಪೊಲೀಸರು ಹಾಗೂ ಸೇನಾ ಸಿಬ್ಬಂದಿಯನ್ನು ರಕ್ಷಣೆ ಹಾಗೂ ಪರಿಹಾರ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
60 ವರ್ಷಗಳ ಹಿಂದೆ ಅಂದರೆ 1958ರಲ್ಲಿ ಟೋಕಿಯೋಗೆ ಅಪ್ಪಳಿಸಿದ್ದ ಚಂಡಮಾರುತವು 1,200ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿತ್ತು. ಈ ದುರಂತದಲ್ಲಿ 5 ಲಕ್ಷದಷ್ಟು ಮನೆಗಳು ಜಲಾವೃತವಾಗಿದ್ದವು.