ಟೋಕಿಯೋ: ಅದಕ್ಕೆ ಪ್ರಾಣಿಗಳಂತೆಯೇ ನಾಲ್ಕು ಕಾಲಿದೆ. ಪ್ರಾಣಿಗಳಂತೆಯೇ ನಡೆಯುತ್ತದೆ ಕೂಡ. ಆದರೆ ಅದು ಪ್ರಾಣಿಯಲ್ಲ ಬದಲಾಗಿ ರೋಬೋಟ್!
ಜಪಾನ್‌ನ ವಿಜ್ಞಾನಿಗಳು ಕಾಡು ರಕ್ಷಣೆ ಹಾಗೂ ಕಾಡು ಬೆಳೆಸುವುದಕ್ಕೆಂದೇ ವಿಶೇಷವಾಗಿ ತಯಾರಿಸಿದ ರೋಬೋಟ್ ಅದು.
ಬೋಸ್ಟನ್ ಡೈನಮಿಕ್ಸ್ ಹೆಸರಿನ ಸಂಸ್ಥೆ ಇಂಥದ್ದೊಂದು ರೋಬೋಟ್ ತಯಾರಿಸಿದ್ದು, ಅರಣ್ಯ ಮತ್ತು ಅರಣ್ಯ ಉತ್ಪನ್ನಗಳ ಸಂಶೋಧನಾ ಸಂಸ್ಥೆ(ಎಫ್ಎಫ್ ಪಿಆರ್‌ಐ) ಮತ್ತು ಸಾಫ್ಟ್ ಬ್ಯಾಂಕ್ ಕಾರ್ಪೋರೇಷನ್ ಸಂಸ್ಥೆಗಳು ಇತ್ತೀಚೆಗೆ ರೋಬೋಟ್‌ನ ಪರೀಕ್ಷೆ ನಡೆಸಿವೆ. ಬೇರೆಯವರಿಂದ ನಿರ್ವಹಣೆಯ ಅವಶ್ಯಕತೆಯಿಲ್ಲದೆ, ತನ್ನಿಂತಾನಾಗಿಯೇ ಕೆಲಸ ಮಾಡುವ ಈ ರೋಬೋಟ್ ಯಾವ ರೀತಿಯಲ್ಲಿ ನಡೆಯುತ್ತದೆ? ಯಾವ ರೀತಿಯ ಸ್ಥಳಗಳಲ್ಲಿ ನಡೆಯಬಲ್ಲದು ಎನ್ನುವುದನ್ನು ಪರಿಶೀಲಿಸಲಾಗಿದೆ. ಜಪಾನ್‌ನಲ್ಲಿ ಕಾಡಿನ ಕೆಲಸ ಮಾಡುವವರಿಗೆ ಪರ್ಯಾಯವಾಗಿ ಈ ರೋಬೋಟ್ ಬಳಕೆಗೆ ಚಿಂತನೆ ನಡೆದಿದೆ.
ಜಪಾನ್‌ನಲ್ಲಿ ಕಾಡು ರಕ್ಷಣೆ ಮತ್ತು ಕಾಡಿನ ಸೃಷ್ಠಿಯೇ ಒಂದು ದೊಡ್ಡ ಕೆಲಸವಾಗಿದೆ. ಆದರೆ ಈ ಕ್ಷೇತ್ರದಲ್ಲಿ ಕಡಿಮೆ ವೇತನವಿರುವ ಹಿನ್ನೆಲೆ ಇದರಲ್ಲಿ ಉದ್ಯೋಗಿಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಆ ಹಿನ್ನೆಲೆ ಇಂತಹ ರೋಬೋಟ್ ಅವಶ್ಯಕ ಎಂದಿದ್ದಾರೆ ತಯಾರಕರು.
ಈ ವರ್ಷದ ಅಂತ್ಯದೊಳಗೆ ರೋಬೋಟ್‌ನ ಇನ್ನೆರೆಡು ಪರೀಕ್ಷೆ ಮಾಡಲಾಗುವುದು ಎಂದು ತಿಳಿಸಲಾಗಿದೆ.