Advertisement
ಉಳಿಯತ್ತಡ್ಕ ಎಸ್.ಪಿ. ನಗರದ ಆರು ವರ್ಷ ಪ್ರಾಯದ ಬಾಲಕನಲ್ಲಿ ಜಪಾನ್ ಜ್ವರ ಪತ್ತೆಯಾಗಿದೆ. ತೀವ್ರ ಜ್ವರ ಮತ್ತು ವಾಂತಿ ಭೇದಿಯ ಹಿನ್ನೆಲೆಯಲ್ಲಿ ಆತನನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಇದನ್ನು ಜಪಾನ್ ಜ್ವರ ಎಂದು ದೃಢೀಕರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಪ್ರದೇಶದ 60 ಮನೆಗಳಲ್ಲಿ ಆರೋಗ್ಯ ಕಾರ್ಯಕರ್ತರು ಜ್ವರದ ಬಗ್ಗೆ ಸರ್ವೇ ನಡೆಸಿದ್ದಾರೆ. ಜಿಲ್ಲಾ ವೆಕ್ಟರ್ ಕಂಟ್ರೋಲ್ ಯೂನಿಟ್ ಕೂಡ ಸರ್ವೇ ನಡೆಸಿದೆ. ಸರ್ವೇಯಲ್ಲಿ ಯಾವುದೇ ಅಪಾಯವಿಲ್ಲ ಎಂದು ಕಂಡುಕೊಳ್ಳಲಾಗಿದೆ. ಜ್ವರ ಅಥವಾ ಇನ್ನಿತರ ಅಸ್ವಸ್ಥತೆ ಕಂಡು ಬಂದಲ್ಲಿ ತತ್‌ಕ್ಷಣ ಆರೋಗ್ಯ ಕಾರ್ಯಕರ್ತರ ಗಮನಕ್ಕೆ ತರಬೇಕೆಂದು ಮಧೂರು ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯಾಧಿಕಾರಿ ಎಂ.ಎನ್. ಸಂಧ್ಯಾ ತಿಳಿಸಿದ್ದಾರೆ.ಈ ಹಿಂದೆ ಮನ್ನಿಪ್ಪಾಡಿ, ಚೌಕಿ, ಪಾರೆಕಟ್ಟೆಯ 54 ಮಂದಿಯಲ್ಲಿ ಹಳದಿ ಜ್ವರ ಪತ್ತೆಯಾಗಿತ್ತು. ಹಳದಿಜ್ವರ ನಿಯಂತ್ರಣಕ್ಕೆ ಬರುತ್ತಿದ್ದಂತೆ ಜಪಾನ್ ಜ್ವರ ಪತ್ತೆಯಾಗಿದೆ.