Advertisement

ತೀವ್ರ ಅನಾರೋಗ್ಯದ ಕಾರಣದಿಂದ ಪ್ರಧಾನ ಮಂತ್ರಿ ಸ್ಥಾನ ತೊರೆದ ಶಿಂಜೋ ಅಬೆ

04:32 PM Aug 28, 2020 | Hari Prasad |

ಟೋಕಿಯೋ: ಜಪಾನ್ ದೇಶದ ಪ್ರಧಾನಮಂತ್ರಿ ಶಿಂಜೋ ಅಬೆ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ.

Advertisement

‘ತನ್ನ ಆರೋಗ್ಯ ಸ್ಥಿತಿ ಕೈಕೊಡುತ್ತಿರುವ ಕಾರಣದಿಂದ ತಾನು ಈ ಜವಾಬ್ದಾರಿಯುತ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ’ ಎಂಬುದಾಗಿ ಅಬೆ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಜಪಾನ್ ಮಾಧ್ಯಮ ವರದಿಗಳನ್ನುದ್ದೇಶಿಸಿ ಇಂಡಿಯಾ ಟುಡೇ ವರದಿ ಮಾಡಿದೆ.

‘ನನ್ನ ಜನರಿಗೆ ಉತ್ತಮವಾದ ನಿರ್ದಾರಗಳನ್ನು ನಾನು ತೆಗೆದುಕೊಳ್ಳಲಾಗದಿದ್ದರೆ ನಾನು ಪ್ರಧಾನ ಮಂತ್ರಿಯಾಗಿ ಈ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಹಾಗಾಗಿ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ’ ಎಂದು 65 ವರ್ಷದ ಶಿಂಜೋ ಅಬೆ ಅವರು ತಿಳಿಸಿದ್ದಾರೆ.

ಲಿಬರಲ್ ಡೆಮಾಕ್ರಾಟಿಕ್ ಪಕ್ಷದ ಅಧ್ಯಕ್ಷರೂ ಆಗಿರುವ ಶಿಂಜೋ ಅಬೆ ಅವರು 2012ರಿಂದ ಜಪಾನ್ ದೇಶದ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಅಬೆ ಅವರು ಯುವಕರಾಗಿದ್ದ ಸಮಯದಿಂದಲೂ ದೊಡ್ಡ ಕರುಳಿನ ತೀವ್ರ ಉರಿಯೂತ ಸಮಸ್ಯೆಯಿಂದ ಬಳಲುತ್ತಿದ್ದರು (Ulcerative Colitis). ಮತ್ತು ಈ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಇನ್ನಷ್ಟು ಬಿಗಡಾಯಿಸಿತ್ತು. ಮತ್ತು ಅಬೆ ಅವರು ಪದೇ ಪದೇ ತಪಾಸಣೆ ಹಾಗೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ನೀಡುವಂತಾಗಿತ್ತು.

Advertisement

ತಮ್ಮ ಈ ಅನಾರೋಗ್ಯ ಸ್ಥಿತಿಗೆ ಶಿಂಜೋ ಅಬೆ ಅವರು ದೀರ್ಘಕಾಲದಿಂದಲೂ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ಕೆಲ ದಿನಗಳಲ್ಲಿ ಅವರ ಆರೋಗ್ಯ ಪರಿಸ್ಥಿತಿ ತೀರಾ ಹದಗೆಡಲಾರಂಭಿಸಿತ್ತು.

ಶಿಂಜೋ ಅಬೆ ಅವರು 2006ರಲ್ಲಿ ಪ್ರಥಮ ಬಾರಿಗೆ ಜಪಾನ್ ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು ಆದರೆ ಅವರು ಈ ಹುದ್ದೆಯನ್ನು ಒಂದು ವರ್ಷಗಳ ಕಾಲ ಮಾತ್ರ ನಿಭಾಯಿಸಲು ಸಾಧ್ಯವಾಗಿತ್ತು.

2005 ರಿಂದ 2006ರವರೆಗೆ ಚೀಫ್ ಕ್ಯಾಬಿನೆಟ್ ಸೆಕ್ರೆಟರಿಯಾಗಿದ್ದ 2006 ರಿಂದ 2012ರವರೆಗೆ ಜಪಾನ್ ದೇಶದಲ್ಲಿ ಆಡಳಿತ ನಡೆಸುತ್ತಿದ್ದ ಪ್ರಧಾನ ಮಂತ್ರಿಗಳು ಅತ್ಯಲ್ಪ ಅವಧಿಯಲ್ಲೇ ತಮ್ಮ ಹುದ್ದೆಯನ್ನು ತೊರೆಯುವ ಪರಿಸ್ಥಿತಿ ಉಂಟಾಗಿತ್ತು. ಈ ಆರು ವರ್ಷಗಳ ಅವಧಿಯಲ್ಲಿ ಜಪಾನ್ ಬರೋಬ್ಬರಿ 5 ಪ್ರಧಾನಮಂತ್ರಿಗಳನ್ನು ಕಂಡಿತ್ತು. ಇಂತಹ ರಾಜಕೀಯ ಅಸ್ಥಿರತೆ ತಲೆದೋರಿದ್ದ ಸಂದರ್ಭದಲ್ಲೇ ಶಿಂಜೋ ಅಬೆ ಅವರು ದೇಶದ ಪ್ರಧಾನ ಮಂತ್ರಿಯಾಗಿ 2012ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು.

ಅಂದಿನಿಂದ ನಿರಂತರ 8 ವರ್ಷಗಳ ಕಾಲ ಅಬೆ ಅವರು ಜಪಾನ್ ದೇಶದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಈ ಹುದ್ದೆಯನ್ನು ದೀರ್ಘಕಾಲ ನಿಭಾಯಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅಬೆ ಪಾತ್ರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next