ಟೋಕಿಯೋ: ತೀವ್ರ ಅನಾರೋಗ್ಯದ ಕಾರಣದ ಹಿನ್ನೆಲೆಯಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ ರಾಜೀನಾಮೆ ನೀಡುವುದಾಗಿ ಶುಕ್ರವಾರ ಘೋಷಿಸಿದ್ದಾರೆ. ಇದರೊಂದಿಗೆ ಜಗತ್ತಿನ ಮೂರನೇ ಬಲಿಷ್ಠ ಆರ್ಥಿಕತೆ ಹೊಂದಿರುವ ದೇಶದ ನಾಯಕತ್ವ ಸ್ಪರ್ಧೆಗೆ ಚಾಲನೆ ಕೊಟ್ಟಿರುವ ಬೆಳವಣಗೆಗೆ ಕಾರಣವಾದಂತಾಗಿದೆ.
ಪ್ರಧಾನ ಮಂತ್ರಿ ಹುದ್ದೆಯಿಂದ ನಾನು ಕೆಳಗಿಳಿಯಲು ನಿರ್ಧರಿಸಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶಿಂಜೋ ತಿಳಿಸಿದ್ದು, ತೀವ್ರ ಅನಾರೋಗ್ಯದಿಂದ (ದೊಡ್ಡ ಕರುಳಿನ ಕ್ಯಾನ್ಸರ್) ಬಳಲುತ್ತಿದ್ದುದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದರು.
ಈಗಾಗಲೇ ತಿಂಗಳಲ್ಲಿ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದ ಅಬೆ, ನೂತನ ಚಿಕಿತ್ಸೆಯನ್ನು ಪಡೆದಿದ್ದಾರೆ. ಆದರೆ ಇದಕ್ಕೆ ದೀರ್ಘಕಾಲದ ಚಿಕಿತ್ಸೆ ಅಗತ್ಯವಿರುವುದರಿಂದ ಪ್ರಧಾನಿಯಾಗಿ ದಿನಂಪ್ರತಿ ಕರ್ತವ್ಯ ನಿರ್ವಹಿಸಲು ಬೇಕಾದಷ್ಟು ಸಮಯ ದೊರಕುತ್ತಿಲ್ಲ. ಈ ನಿಟ್ಟಿನಲ್ಲಿ ನನಗೆ ಜನರ ಆಶಯ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ನನಗೆ ದೀರ್ಘಕಾಲದವರೆಗೆ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷ ಮುಂದಿನ ಪ್ರಧಾನಿ ಯಾರು ಎಂಬುದನ್ನು ಆಯ್ಕೆ ಮಾಡುವವರೆಗೆ ಶಿಂಜೋ ಅಬೆ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ವರದಿ ಹೇಳಿದೆ. ಮುಂದಿನ ಪ್ರಧಾನಿ ಯಾರು ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ.
ಜಪಾನ್ ವಿತ್ತ ಸಚಿವ ಟಾರೊ ಅಸೋ ಮತ್ತು ಜಪಾನ್ ಸರ್ಕಾರದ ವಕ್ತಾರ ಯೋಶಿಹಿಡೆ ಸುಗಾ ಹೆಸರು ಕೇಳಿಬರುತ್ತಿದೆ. ಜಪಾನ್ ರಾಜಕೀಯ ಇತಿಹಾಸದಲ್ಲಿ ಅತೀ ದೀರ್ಘಾವಧಿಯ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಕೀರ್ತಿ ಶಿಂಜೋ ಅಬೆ ಅವರದ್ದಾಗಿದೆ.