ಚಿಕ್ಕಬಳ್ಳಾಪುರ: ಅವರೆಲ್ಲಾ ಕೈ ತುಂಬ ಸಂಬಳ ಪಡೆಯವರು, ಮನಸ್ಸು ಮಾಡಿದರೆ ವಾರಾಂತ್ಯದಲ್ಲಿ ಮೋಜು, ಮಸ್ತಿ ಅಂತ ತಿರುಗಾಡಿ ಸುಖದ ಸುಪ್ಪತ್ತಿಗೆಯಲ್ಲಿ ಜೀವನ ಕಳೆಯಬಹುದು. ಆದರೆ, ಅವರ ಹಸಿರು ಪ್ರೇಮ ಈಗ ಕಿರು ಅರಣ್ಯಗಳ ನಿರ್ಮಾಣದತ್ತ ನೆಟ್ಟಿದೆ. ಬರದ ಬವಣೆ ಅನುಭವಿಸಿರುವ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಲು ಚಿಕ್ಕಬಳ್ಳಾಪುರದ ಹಸಿರು ಸ್ವಯಂ ಸೇವಾ ಸಂಸ್ಥೆ ಸದಸ್ಯರು ಸದ್ದಿಲ್ಲದೇ ಮುಂದಾಗಿದ್ದಾರೆ.
ಅತಿ ಕಡಿಮೆ ಜಾಗದಲ್ಲಿ ಹೆಚ್ಚು ಕಾಡು ಬೆಳೆಸುವ ಮಿಯಾವಾಕಿ ಕಿರು ಅರಣ್ಯ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಿ ಗಮನ ಸೆಳೆಯುತ್ತಿದೆ. ಇದೊಂದು ಜಪಾನ್ ಮಾದರಿ ಕ್ರಮವಾಗಿದೆ. ಈಗಾಗಲೇ ಈ ಹಸಿರು ತಂಡ ಎರಡು ವರ್ಷದ ಹಿಂದೆ ನಗರಸಭೆ ಉದ್ಯಾನವನದಲ್ಲಿ ನಿರ್ಮಿಸಿರುವ ಮಿಯಾವಾಕಿ ಕಿರು ಅರಣ್ಯವನ್ನು ರಾಜ್ಯ ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಗಳ ಗಮನ ಸೆಳೆದಿದೆ.
ಆರಂಭದಲ್ಲಿ ನಗರಸಭೆ ಉದ್ಯಾನವನ ಗುರಿ ಮಾಡಿ ಕೊಂಡು ಅಲ್ಲಿರುವ ಅಲ್ಪಸ್ವಲ್ಪ ಜಾಗದಲ್ಲಿ ಹೊಂಗೆ, ನೇರಳೆ ಮತ್ತಿತರ ಸಸಿ ನೆಟ್ಟು ಪೋಷಿಸಿದ್ದರು. ನಂತರ, ಪ್ರತಿವಾರವೂ ಅರಣ್ಯ ಸಂರಕ್ಷಣೆಗೆ ಟೊಂಕ ಕಟ್ಟಿ ನಿಲ್ಲುತ್ತಿದೆ.
ತಾವೇ ಗಿಡ ಖರೀದಿಸಿ ನಾಟಿ: ಹಸಿರು ತಂಡದ ಸದಸ್ಯರು ತಾವೇ ಸ್ವತಃ ಅರಣ್ಯ ಇಲಾಖೆಯಲ್ಲಿ ಸಿಗುವ ವಿವಿಧ ಬಗೆಯ ಅದರಲ್ಲೂ ಸ್ಥಳೀಯ ಪರಿಸರಕ್ಕೆ ಹೊಂದಿಕೊಳ್ಳುವ ಸಸಿಗಳನ್ನು ರಿಯಾಯ್ತಿ ದರದಲ್ಲಿ ಖರೀದಿಸಿ ನೆಡುತ್ತಾರೆ.
ಪ್ಲಾಸ್ಟಿಕ್ ತ್ಯಜಿಸಿ: ಈಗಾಗಲೇ ಚಿಕ್ಕಬಳ್ಳಾಪುರ ತಾಲೂಕಿನ ಹಲವು ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡಲು ಜಾಗೃತಿ ಮೂಡಿಸಿ ಬಳಸಿ ಬಿಸಾಡಿದ್ದ ಪ್ಲಾಸ್ಟಿಕ್‌ಗಳನ್ನು ಟನ್‌ಗಟ್ಟಲೇ ಸಂಗ್ರಹಿಸಿ ವಿಲೇವಾರಿ ಮಾಡಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಸರ್ಕಾರಿ ಶಾಲೆಗಳ ಅಂದ, ಚೆಂದ ಹೆಚ್ಚಿಸಲು ಕಾಂಪೌಂಡ್, ಗೋಡೆಗಳಿಗೆ ವರ್ಲಿ ಕಲೆ ಬಿಡಿಸುತ್ತಾರೆ. ತಂಡದಲ್ಲಿ ಐಟಿ, ಬಿಟಿ ಉದ್ಯೋಗಿಗಳು: ಹಸಿರು ತಂಡದಲ್ಲಿ ಬಹುತೇಕರು ಐಟಿ, ಬಿಟಿ ಉದ್ಯೋಗಿಗಳು. ಜತೆಗೆ ಕಾಲೇಜು ಉಪನ್ಯಾಸಕರು, ಶಾಲಾ, ಶಿಕ್ಷಕರು, ವಿದ್ಯಾರ್ಥಿಗಳು, ನಗರದ ವ್ಯಾಪಾರಿಗಳು, ಸರ್ಕಾರಿ ನೌಕರರು, ಸಿಬ್ಬಂದಿಯೂ ತಂಡದಲ್ಲಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಮಂದಿ ಇದ್ದು ಪ್ರತಿ ವಾರ ಪರಿಸರ ಬೆಳೆಸುವ ಕಾರ್ಯದಲ್ಲಿ ತೊಡಗುತ್ತಾರೆ.
ಮಿಯಾವಾಕಿ ಕಿರು ಅರಣ್ಯ: ಈಗಾಗಲೇ ಚಿಕ್ಕಬಳ್ಳಾಪುರದ ಹಸಿರು ಸ್ವಯಂ ಸೇವಾ ಸಂಸ್ಥೆ ಸದಸ್ಯರು ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯ ಬಿ.ಬಿ.ರಸ್ತೆಯ ಸೌಮ್ಯಾ ಕಣ್ಣಾಸ್ಪತ್ರೆ ರಸ್ತೆ ನಗರಸಭೆ ಉದ್ಯಾನ ವನದಲ್ಲಿ ಮಿಯಾವಾಕಿ ಕಿರು ಅರಣ್ಯ ಬೆಳೆಸಿದ್ದಾರೆ. 2 ವರ್ಷದ ಹಿಂದೆ ನೆಟ್ಟಿರುವ ಗಿಡ ಈಗ ಮರಗಳಾಗಿವೆ. ಅಪಾರ ಜೀವ ವೈವಿಧ್ಯ ವಾಸಿಸಲು ಅನುಕೂಲವಾಗಿದೆ.
ಮಿಯಾವಾಕಿ ಕಿರು ಅರಣ್ಯ ಪ್ರದೇಶ ಬೆಳೆಸಲು ಸಾಕಷ್ಟು ತಯಾರಿ ಬೇಕು. ಗಿಡ ನೆಡಕ್ಕೂ ಮೊದಲು ಜೆಸಿಬಿಯಿಂದ ಭೂಮಿ ಹದ ಮಾಡಬೇಕಾ ಗುತ್ತದೆ. ಬಳಿಕ ಗಿಡ ನೆಟ್ಟ ಬಳಿಕ ಕನಿಷ್ಠ ವರ್ಷ ನೀರು ಚೆನ್ನಾಗಿ ಕೊಡಬೇಕು. ಜತೆಗೆ ಗೊಬ್ಬರ ಹಾಕಬೇಕು.
● ಮಧುಕೃಷ್ಣಪ್ಪ, ಹಸಿರು ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷರು, ಚಿಕ್ಕಬಳ್ಳಾಪುರದ ಐಟಿ ಉದ್ಯೋಗಿ
– ಕಾಗತಿ ನಾಗರಾಜಪ್ಪ