Advertisement

ಅತಿ ಕೆಲಸಕ್ಕೆ “ಮಾದರಿ’ಯಾಗದಿರಲಿ ಜಪಾನ್‌!

03:30 AM Dec 09, 2018 | |

ತಮ್ಮ ದೇಶದಲ್ಲಿ ಪ್ರತಿ ಐವರಲ್ಲಿ ಒಬ್ಬರು ಅಧಿಕ ಕೆಲಸದಿಂದ ಸಾವನ್ನಪ್ಪಲಿದ್ದಾರೆ ಎನ್ನುವ ಆತಂಕ ಜಪಾನ್‌ನ ಮನಸ್ಥಿತಿಯನ್ನು ಬದಲಿಸುತ್ತಿದೆ

Advertisement

ಕರೋಶಿ ಎನ್ನುವುದು ಜಪಾನ್‌ನಲ್ಲಿ ಅಧಿಕೃತವಾಗಿ ಗುರುತಿಸಲಾಗಿರುವ ಪದ. ಕರೋಶಿ ಎಂದರೆ “ಅತಿಯಾದ ಕೆಲಸದಿಂದ ಸಾವು’ ಎಂದರ್ಥ. ಪರ್ಸನಲ್‌ ಸಮಯವೇ ಸಿಗದೇ ಅವರಲ್ಲಿ ಖನ್ನತೆ, ಸೇರಿದಂತೆ ಅನೇಕ ಮಾನಸಿಕ, ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿವೆ. 2012-2016ರ ನಡುವೆ 2000 ಜಪಾನಿಯರು ಅಧಿಕ ಕೆಲಸದಿಂದ ಉಂಟಾದ ಆರೋಗ್ಯ ಸಮಸ್ಯೆಗಳಿಂದ(ಹೃದಯ ಸಮಸ್ಯೆಗಳು, ಅಧಿಕ ರಕ್ತದೊತ್ತಡ, ಡಯಾಬಿಟಿಸ್‌, ಖನ್ನತೆ) ಮೃತಪಟ್ಟಿದ್ದಾರೆ.  

2013ರಲ್ಲಿ, ಜಪಾನ್‌ನ ಪತ್ರಕರ್ತೆ ಮಿವಾ ಸಾಡೋ ಹೃದಯಾಘಾತದಿಂದ ಮೃತಪಟ್ಟಳು. ಸತ್ತಾಗ ಆಕೆಗೆ ಕೇವಲ 31 ವರ್ಷ ವಯಸ್ಸು! ಆಕೆಯ ಸಾವಿಗೆ ಅಧಿಕ ಕೆಲಸವೇ ಕಾರಣವಾಯಿತು ಎಂದು ಆಕೆಗೆ ಉದ್ಯೋಗ ನೀಡಿದ್ದ ಕಂಪೆನಿ ಒಪ್ಪಿಕೊಂಡಿತು. ಮಿವಾ ಸಾಡೋ ಆ ತಿಂಗಳಲ್ಲಿ ಹೆಚ್ಚುವರಿ 159 ತಾಸು ಕೆಲಸ ಮಾಡಿದ್ದಳು. ಅಲ್ಲದೇ ಇಡೀ ತಿಂಗಳಲ್ಲಿ ಎರಡೇ ದಿನ ರಜೆ ಪಡೆದಿದ್ದಳು. 

ಜಪಾನ್‌! ಈ ದೇಶದ ಏಳಿಗೆಯನ್ನು, ದೇಶದ ನಾಗರಿಕರ ಶಿಸ್ತನ್ನು  ಹೊಗಳದವರೇ ಇಲ್ಲ. ಜಪಾನಿಯರು ವರ್ಕೋಹಾಲಿಕ್ಸ್‌ (ಉದ್ಯೋಗ ವ್ಯಸನಿಗಳು) ಎಂದು ಗುರುತಿಸಿಕೊಳ್ಳುವವರು. ಅನ್ಯ ದೇಶಗಳ ಕೆಲಸಗಾರರು, ತಮ್ಮ ಕಂಪನಿಗಳ ವಿರುದ್ಧ ಪ್ರತಿಭಟಿಸುವುದಕ್ಕಾಗಿ ಆ ದಿನ ಕೆಲಸಕ್ಕಾಗಿ ಗೈರು ಹಾಜರಾದರೆ, ಜಪಾನಿಯರು ಮಾತ್ರ ಹೆಚ್ಚುವರಿ ಕೆಲಸ ಮಾಡಿ ಪ್ರತಿಭಟಿಸುತ್ತಾರೆ ಎನ್ನುವ ಸುದ್ದಿಯನ್ನು ನೀವೂ ಓದಿರುತ್ತೀರಿ. ಜಪಾನಿಯರ ಈ ಗುಣವನ್ನು ಜಗತ್ತಿನ ಎಲ್ಲಾ ಕಾರ್ಪೊರೇಟ್‌ ಪಂಡಿತರು “ಮಾದರಿ’ ಎಂದು ಪರಿಗಣಿಸುತ್ತಾರೆ. 

ಇತರೆ ದೇಶಗಳಿಗೆ ಹೋಲಿಸಿದರೆ ಜಪಾನ್‌ನಲ್ಲಿ ಕೆಲಸದ ಅವಧಿ ಬಹಳ ದೀರ್ಘ‌ವಾದದ್ದು. ಈ ರೀತಿ ಹೆಚ್ಚು ಹೊತ್ತು ಕೆಲಸ ಮಾಡುವ ಸಂಸ್ಕೃತಿ ಬೆಳೆದದ್ದು 2ನೇ ವಿಶ್ವಯುದ್ಧದ ನಂತರದಿಂದ ಎನ್ನಲಾಗುತ್ತದೆ. 2016ರ ಸರ್ಕಾರಿ ಸಮೀಕ್ಷೆ ಪ್ರಕಾರ, ಜಪಾನ್‌ನ 25 ಪ್ರತಿಶತದಷ್ಟು ಕಂಪನಿಗಳು ತಿಂಗಳಲ್ಲಿ ತಮ್ಮ ಕೆಲಸಗಾರರಿಂದ ಹೆಚ್ಚುವರಿ 80 ಗಂಟೆಗಳು ಕೆಲಸ ಮಾಡಿಸುತ್ತವಂತೆ. ಇನ್ನು ರಜೆಗಳನ್ನು ತೆಗೆದುಕೊಳ್ಳುವ ವಿಷಯದಲ್ಲೂ ಜಪಾನಿಯರು ಎಲ್ಲರಿಗಿಂತ ಹಿಂದೆ. ಎಕ್ಸ್‌ಪೀಡಿಯಾ ಸಂಸ್ಥೆಯ ವರದಿಯ ಪ್ರಕಾರ, ಜಪಾನ್‌ನ 63 ಪ್ರತಿಶತದಷ್ಟು ಕೆಲಸಗಾರರು ಪ್ರತಿವರ್ಷ ತಮ್ಮ  ಖಾತೆಯಲ್ಲಿರುವ 10 ರಜೆಗಳನ್ನು ಬಳಸುವುದೇ ಇಲ್ಲ. ರಜೆ ತೆಗೆದುಕೊಳ್ಳುವವರಲ್ಲೂ ಬಹುಪಾಲು ಜನರು ತಪ್ಪಿತಸ್ಥ ಭಾವನೆಯಿಂದ ನರಳುತ್ತಾರೆ ಎಂಬ ಕುತೂಹಲಕರ ಅಂಶವೂ ಈ ವರದಿಯಲ್ಲಿದೆ. 

Advertisement

ಇದನ್ನೆಲ್ಲ ಓದಿದಾಗ, ಇಷ್ಟೆಲ್ಲ ಕೆಲಸ ಮಾಡುವ ಜಪಾನ್‌ ಎಷ್ಟು ಪ್ರಾಡಕ್ಟಿವ್‌ ಆಗಿರಬಹುದು. ಅದರ ಉತ್ಪಾದಕತೆ ಎಷ್ಟು ಗುಣಮಟ್ಟದಲ್ಲಿರಬಹುದು ಎಂದು ನಮಗೆ ಅನಿಸುತ್ತದೆ. ಆದರೆ ಓಇಸಿಡಿ ಸಂಸ್ಥೆಯ ಅಂಕಿಅಂಶಗಳು ಹೇಳುವುದೇ ಬೇರೆ. ಜಿ-7 ರಾಷ್ಟ್ರಗಳಲ್ಲಿ  ಅತಿ ಕಡಿಮೆ ಉತ್ಪಾದಕತೆ ಇರುವ ರಾಷ್ಟ್ರ ಜಪಾನ್‌! (ಅನ್ಯ ದೇಶಗಳ ಸರಾಸರಿ ಗುಣಮಟ್ಟಕ್ಕೆ ಹೋಲಿಸಿದರೆ) ಆದರೆ, ಕಾರ್ಪೊರೇಟ್‌ಗಳು ಈ ಅಂಶವನ್ನು ಕಡೆಗಣಿಸಿಬಿಡುತ್ತವೆ. “ಕಡಿಮೆ ಕೆಲಸಗಾರರಿಂದ’ ಹೆಚ್ಚು ಕೆಲಸ ಮಾಡಿಸಿದರೆ ಕಂಪೆನಿಗೆ ಲಾಭ ಎಂಬ ಹಳೆಯ ಸಾಂಪ್ರದಾಯಿಕ ಗುಣ ಅವುಗಳಲ್ಲಿದೆ. ಆದರೆ ಸಂಶೋಧನೆಗಳ ಪ್ರಕಾರ ಹೆಚ್ಚು ಗಂಟೆ ಕಾಲ ಕೆಲಸ ಮಾಡಿಸಿದರೆ ಉತ್ಪಾದಕತೆ (ಗುಣಮಟ್ಟದ) ಹೆಚ್ಚಾಗುತ್ತದೆ ಎನ್ನುವುದು ಹಸೀ ಸುಳ್ಳು ಎನ್ನುವುದು ಸಾಬೀತಾಗುತ್ತಲೇ ಇದೆ. ದೈಹಿಕವಾಗಿ ಒಬ್ಬ ವ್ಯಕ್ತಿ ಒಂದು ದಿನಕ್ಕೆ ಎಷ್ಟು ಶ್ರಮ ಪಡಬಲ್ಲನೋ,  ಮಾನಸಿಕವಾಗಿಯೂ ಒಬ್ಬನಿಗೆ ಒಂದು ಮಿತಿ ಇರುತ್ತದೆ. ಆ ಮಿತಿಯನ್ನು ಅರಿತುಕೊಳ್ಳುವ ಪ್ರಯತ್ನ ಕಂಪನಿಗಳಿಂದ ಆಗುತ್ತಲೇ ಇಲ್ಲ. 

ಕಂಪನಿಗಳ ಉತ್ಪಾದಕತೆಯ ವಿಚಾರ ಒತ್ತಟ್ಟಿಗಿರಲಿ, ಅತಿ ಕೆಲಸ ವ್ಯಕ್ತಿಯ ಮಾನಸಿಕ ಆರೋಗ್ಯಕ್ಕೆ ಯಾವ ಮಟ್ಟದಲ್ಲಿ ಹಾನಿ ಮಾಡಬಹುದು ಎನ್ನುವುದಕ್ಕೆ ವರ್ಕೋಹಾಲಿಕ್‌ ಜಪಾನ್‌ ಸಾಕ್ಷಿ. 
ಕರೋಶಿ: ಅಧಿಕ ಕೆಲಸದಿಂದ ಸಾವು
ಕರೋಶಿ ಎನ್ನುವುದು ಜಪಾನ್‌ನಲ್ಲಿ ಅಧಿಕೃತವಾಗಿ ಗುರುತಿಸಲಾಗಿರುವ ಪದ. ಕರೋಶಿ ಎಂದರೆ “ಅತಿಯಾದ ಕೆಲಸದಿಂದ ಸಾವು’ ಎಂದರ್ಥ. ಜಪಾನಿಯರು ಹೆಚ್ಚು ಹೊತ್ತು ಕಚೇರಿಗಳಲ್ಲೇ ಕಾಲ ಕಳೆಯುತ್ತಿರುವುದರಿಂದ ಅವರ ಖಾಸಗಿ ಜೀವನ “ಮನೆಗೆ ಹೋಗಿ ಮಲಗುವುದು’ ಎನ್ನುವುದಕ್ಕಷ್ಟೇ ಸೀಮಿತವಾಗಿಬಿಟ್ಟಿದೆ. ಪರ್ಸನಲ್‌ ಸಮಯವೇ ಸಿಗದೇ ಅವರಲ್ಲಿ ಖನ್ನತೆ, ಸೇರಿದಂತೆ ಅನೇಕ ಮಾನಸಿಕ, ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿವೆ. 2012-2016ರ ನಡುವೆ 2000 ಜಪಾನಿಯರು ಅಧಿಕ ಕೆಲಸದಿಂದ ಉಂಟಾದ ಆರೋಗ್ಯ ಸಮಸ್ಯೆಗಳಿಂದ(ಹೃದಯ ಸಮಸ್ಯೆಗಳು, ಅಧಿಕ ರಕ್ತದೊತ್ತಡ, ಡಯಾಬಿಟಿಸ್‌, ಖನ್ನತೆ) ಮೃತಪಟ್ಟಿದ್ದಾರೆ.  

2013ರಲ್ಲಿ, ಜಪಾನ್‌ನ ಪತ್ರಕರ್ತೆ ಮಿವಾ ಸಾಡೋ ಹೃದಯಾಘಾತದಿಂದ ಮೃತಪಟ್ಟಳು. ಸತ್ತಾಗ ಆಕೆಗೆ ಕೇವಲ 31 ವರ್ಷ ವಯಸ್ಸು! ಆಕೆಯ ಸಾವಿಗೆ ಅಧಿಕ ಕೆಲಸವೇ ಕಾರಣವಾಯಿತು ಎಂದು ಆಕೆಯ ಮೀಡಿಯಾ ಕಂಪೆನಿ ಒಪ್ಪಿಕೊಂಡಿತು. ಮಿವಾ ಸಾಡೋ ಆ ತಿಂಗಳಲ್ಲಿ ಹೆಚ್ಚುವರಿ 159 ತಾಸು ಕೆಲಸ ಮಾಡಿದ್ದಳು. ಅಲ್ಲದೇ ಇಡೀ ತಿಂಗಳಲ್ಲಿ ಎರಡೇ ದಿನ ರಜೆ ಪಡೆದಿದ್ದಳು. ಕೈಯಲ್ಲಿ ಗಟ್ಟಿಯಾಗಿ ಮೊಬೈಲ್‌ ಹಿಡಿದುಕೊಂಡೇ ಹಾಸಿಗೆಯ ಮೇಲೆ ಪ್ರಾಣಬಿಟ್ಟಿದ್ದಳು ಮಿವಾ. ಅವಳ ಸಾವಿನ ನಂತರ ತಮ್ಮ ದೇಶದಲ್ಲಿ ಹೆಚ್ಚಾಗುತ್ತಿರುವ ಕರೋಶಿಯ ಬಗ್ಗೆ ಪ್ರತಿಭಟನೆಗಳು, ಚರ್ಚೆಗಳು ಆದವು. ಆದರೆ ಹೇಳಿಕೊಳ್ಳುವಂಥ ಬದಲಾವಣೆಗಳು ಆಗಿರಲಿಲ್ಲ. 

2015ರಲ್ಲಿ ಜಪಾನ್‌ನ ಅತಿದೊಡ್ಡ ಜಾಹೀರಾತು ಕಂಪನಿ “ಡೆಂಟ್ಸು’ನಲ್ಲಿ 24 ವರ್ಷದ ಉದ್ಯೋಗಿಯೊಬ್ಬಳು ಬಿಲ್ಡಿಂಗ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಳು. ಅತಿಯಾದ ಕೆಲಸದಿಂದಾಗಿ ಆಕೆ ಖನ್ನತೆಗೊಳಗಾಗಿದ್ದಳು. “ತಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಪರೀತ ದಣಿದಿರುವುದೇ ಆತ್ಮಹತ್ಯೆಗೆ ಕಾರಣ’ ಎಂದು ಆ ಯುವತಿ ಅಂತಿಮ ಪತ್ರದಲ್ಲಿ ಬರೆದಿದ್ದಳು. ಆಕೆಯ ಸಾವು ದೊಡ್ಡ ಸುದ್ದಿಯಾದ ಮೇಲೆ ಡೆಂಟ್ಸು ಕಂಪನಿ, ತಾನು ತಿಂಗಳಲ್ಲಿ ಆಕೆಯಿಂದ ಹೆಚ್ಚುವರಿ 100 ತಾಸು ಕೆಲಸ ಮಾಡಿಸಿದ್ದಾಗಿ ತಪ್ಪೊಪ್ಪಿಕೊಂಡಿತು. ಡೆಂಟ್ಸು ಕಂಪನಿಯ ಸಿಇಒ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಬೇಕಾಯಿತು. ಈ ಪ್ರಕರಣದ ನಂತರ ಆ ಕಂಪನಿ ತನ್ನ ಕೆಲಸದ ಅವಧಿಯನ್ನು ತಗ್ಗಿಸಿತು. ಸ್ವಯಂ ಪ್ರೇರಣೆಯಿಂದ ಹೆಚ್ಚು ಹೊತ್ತು ಕೆಲಸ ಮಾಡುವ ಉದ್ಯೋಗಿಗಳನ್ನೂ ಬೇಗನೇ ಮನೆಗೆ ಕಳುಹಿಸುವುದಕ್ಕಾಗಿ ರಾತ್ರಿ 10 ಗಂಟೆಗೆ ಕಚೇರಿಯ ಲೈಟ್‌ಗಳನ್ನು ಆಫ್ ಮಾಡಲಾರಂಭಿಸಿತು! 

ಈ ಪ್ರಕರಣ ಜಪಾನ್‌ನಲ್ಲಿ ಯಾವ ಮಟ್ಟಕ್ಕೆ ತಳಮಳ ಮತ್ತು ಚರ್ಚೆ ಹುಟ್ಟುಹಾಕಿತೆಂದರೆ, ಇದರ ಕಾವು ಜಪಾನ್‌ ಪ್ರಧಾನಿ ಶಿಂಜೋ ಅಬೆಯವರಿಗೂ ತಟ್ಟಿತು. ಅತಿಯಾಗಿ ದುಡಿದರೆ ಹೆಚ್ಚು ಫ‌ಲಿತಾಂಶ ಎನ್ನುವ ವರ್ಕೋಹಾಲಿಕ್‌ ಸಂಸ್ಕೃತಿಯನ್ನು ಬದಲಿಸುವುದಕ್ಕಾಗಿ ಅಬೆ ಪರಿಣತರ ಒಂದು ಸಮಿತಿಯನ್ನು ರಚಿಸಿದರು. ಜಪಾನ್‌ನಲ್ಲಿ ಐವರಲ್ಲಿ ಒಬ್ಬರು ಅಧಿಕ ಕೆಲಸದಿಂದ ಸಾವನ್ನಪ್ಪುವ ಅಪಾಯ ಎದುರಿಸುತ್ತಿದ್ದಾರೆ ಎನ್ನುವ ಬೆಚ್ಚಿಬೀಳಿಸುವ ಸತ್ಯ ಅಬೆ ಸರ್ಕಾರಕ್ಕೆ ತಿಳಿಯಿತು. 

ತತ್ಪಲವಾಗಿ ಜಾರಿಗೆ ಬಂದದ್ದೇ  Hatarakikata kaikaku  (ಕೆಲಸದ ವೈಖರಿಯಲ್ಲಿ ಸುಧಾರಣೆ)ಎಂಬ ನೀತಿ. ತನ್ನ ಪ್ರಜೆಗಳನ್ನು ಕಂಪೆನಿಗಳು ಅತಿಯಾಗಿ ದುಡಿಸಿಕೊಳ್ಳದಂತೆ ತಡೆಯಲು ಶಿಂಜೋ ಅಬೆ ತಂದ ಈ ನೀತಿ, ಕೆಲಸಗಾರರಲ್ಲಿ ಉತ್ತಮ ವರ್ಕ್‌-ಲೈಫ್ ಬ್ಯಾಲೆನ್ಸ್‌ ಕಾಯ್ದುಕೊಳ್ಳಲು, ಮಹಿಳಾ ಮತ್ತು ಹಿರಿಯ ಕೆಲಸಗಾರರ ಕೌಶಲ್ಯಗಳನ್ನು ಸರಿಯಾಗಿ ಬಳಸಿಕೊಳ್ಳಲು ಹಲವು ಸೂತ್ರಗಳನ್ನು ಒಳಗೊಂಡಿದೆ. Hatarakikata kaikaku ಎನ್ನುವುದು ರಾಷ್ಟ್ರೀಯ ಘೋಷಣೆಯಾಗಿ ಬದಲಾಗಿಬಿಟ್ಟಿತು. ಉದ್ಯೋಗಿಗಳ ಹಿತರಕ್ಷಣೆ ಗಾಗಿಯೇ ಅಬೆ ಪ್ರತ್ಯೇಕ ಕ್ಯಾಬಿನೆಟ್‌ ಸಚಿವರನ್ನು ನೇಮಿಸಿದರು. 

ಉದ್ಯೋಗಿಗಳಿಂದ ದೀರ್ಘಾವಧಿ ಕೆಲಸ ಮಾಡುವ ಕಂಪೆನಿಗಳನ್ನು ಗುರುತಿಸಿ ಭಾರೀ ಪ್ರಮಾಣದಲ್ಲಿ ದಂಡ ವಿಧಿಸುವ ಕೆಲಸ ಆರಂಭವಾಯಿತು. ಜೊತೆಗೆ ಯಾವ್ಯಾವ ಕಂಪನಿಗಳು ಉದ್ಯೋಗಿಗಳನ್ನು ಹೈರಾಣಾಗಿಸುತ್ತಿವೆ ಎನ್ನುವ ಲಿಸ್ಟ್‌ ಅನ್ನು ಸರ್ಕಾರವೇ ಬಹಿರಂಗಗೊಳಿಸಲಾರಂಭಿಸಿತು.(ಕಳೆದ ವರ್ಷ 334 ಕಂಪೆನಿಗಳ ಲಿಸ್ಟ್‌ ಬಹಿರಂಗಗೊಳಿಸಿದೆ.)  ಜನರಿಗೆ ರೆಸ್ಟ್‌ ನೀಡುವ ಕಾರಣಕ್ಕಾಗಿಯೇ “ಮೌಂಟೇನ್‌ ಡೇ’ ಎನ್ನುವ ಹೊಸ ರಜೆಯನ್ನು ಘೋಷಿಸಲಾಯಿತು. ಅಲ್ಲದೇ ಕಳೆದ ವರ್ಷವಷ್ಟೇ ಜಪಾನ್‌ “ಪ್ರೀಮಿಯಂ ಫ್ರೈಡೇ’ ಎನ್ನುವ ಸಲಹಾ ಸೂತ್ರವನ್ನೂ ಜಾರಿಗೆ ತಂದಿತು. ಕಂಪನಿಗಳು ಪ್ರತಿ ತಿಂಗಳ ಕೊನೆಯ ಶುಕ್ರವಾರದಂದು ತಮ್ಮ ಉದ್ಯೋಗಿಗಳನ್ನು ಮಧ್ಯಾಹ್ನ 3 ಗಂಟೆಗೇ ಮನೆಗೆ ಕಳುಹಿಸಬೇಕು ಎನ್ನುವ ನಿಯಮವೇ ಪ್ರೀಮಿಯಂ ಫ್ರೈಡೇ. ದುರಂತವೆಂದರೆ, ಆ ವರ್ಷ ಕೇವಲ 4 ಪ್ರತಿಶತ ಉದ್ಯೋಗಿಗಳು ಮಾತ್ರ ಶುಕ್ರವಾರದಂದು 3 ಗಂಟೆಗೆ ಮನೆಗೆ ಹೋದರು ಎನ್ನುತ್ತದೆ ಒಂದು ಅಧ್ಯಯನ ವರದಿ (ಉದ್ಯೋಗದಾತರು ಮುನಿಸಿಕೊಳ್ಳಬಹುದು ಎಂಬ ಭಯವೂ ಇರಬಹುದು). ಕೆಲವು ಉದ್ಯೋಗಿಗಳು ವರ್ಕೋಹಾಲಿಕ್‌ ಕೂಡ ಆಗಿರುತ್ತಾರೆ. ಕಂಪನಿ ಅವರನ್ನು ಬೇಗ ಮನೆಗೆ ಕಳುಹಿಸಲು ಸಿದ್ಧವಿದ್ದರೂ ತಡರಾತ್ರಿಯವರೆಗೂ ಕೆಲಸ ಮಾಡುವ ವ್ಯಸನ ಅವರಿಗಿರುತ್ತದೆ. ಅಂಥವರನ್ನು ಬೇಗ ಕಚೇರಿಯಿಂದ ಹೊರಗೆ ಕಳುಹಿಸುವುದು ಹೇಗೆ ಎನ್ನುವ ಬಗ್ಗೆ ಕಂಪೆನಿಗಳು ತರಹೇವಾರಿ ಪ್ರಯೋಗಗಳನ್ನು ಮಾಡುತ್ತಿವೆ. 

ಟೋಕಿಯೋ ಮೂಲದ ಐಟಿ ಕಂಪೆನಿಯೊಂದರ ಪ್ರಯೋಗ ಬಹಳ ಪರಿಣಾಮಕಾರಿಯೆಂದು ಸಾಬೀತಾಗಿದೆ! ಯಾರು ತಡರಾತ್ರಿಯವರೆಗೂ ಕೆಲಸ ಮಾಡುತ್ತಾರೋ ಅವರನ್ನು ಗುರುತಿಸಿ ನೇರಳೆ ಬಣ್ಣದ “ಅವಮಾನದ ಶಾಲು’ ಹೊದಿಸಿ ಮರ್ಯಾದೆ ತೆಗೆಯುತ್ತಿದೆ. ಅನಗತ್ಯವಾಗಿ ಓವರ್‌ ವರ್ಕ್‌ ಮಾಡಿದರೆ ಅವರಿಗೆ ದಂಡ ವಿಧಿಸಲಾಗುವುದೆಂದೂ ಎಚ್ಚರಿಕೆ ನೀಡಿ ಸುದ್ದಿಯಾಗಿದೆ. 

ಕಂಪನಿಗಳ ಮನಸ್ಥಿತಿ ಬದಲಾಗಲೇಬೇಕಿದೆ
ಹೆಚ್ಚು ಸಂಬಳ ಕೊಟ್ಟರೆ ಉದ್ಯೋಗಿಗಳಿಂದ ಹೆಚ್ಚು ಉತ್ಪಾದಕತೆ ಪಡೆಯಬಹುದು ಎಂದು ಕಂಪೆನಿಗಳು ಭಾವಿಸುತ್ತವೆ. ಆದರೆ ಇದು ಭಾಗಶಃ ಸತ್ಯ. ಯೂನಿವರ್ಸಿಟಿ ಆಫ್ ವಾರ್‌ವಿಕ್‌ನ ಇತ್ತೀಚಿನ ಸಂಶೋಧನೆಯ ಪ್ರಕಾರ “ಉದ್ಯೋಗಿಗಳು ಖುಷಿಯಾಗಿದ್ದರೆ ಅವರ ಪ್ರಾಡಕ್ಟಿವಿಟಿ 20 ಪ್ರತಿಶತದಷ್ಟು ಹೆಚ್ಚಾಗುತ್ತದೆ’. ಅಲ್ಲದೇ ಸಂತೋಷದಿಂದ ಇರದ ಉದ್ಯೋಗಿಯ ಪ್ರಾಡಕ್ಟಿವಿಟಿ 15 ಪ್ರತಿಶತದಷ್ಟಾದರೂ ಕುಸಿಯುತ್ತದಂತೆ. 

ಒಬ್ಬ ಉದ್ಯೋಗಿ ಸಂತೋಷದಿಂದ ಇರಬೇಕೆಂದರೆ, ಅವನ ವರ್ಕ್‌ -ಲೈಫ್ ಸಮತೋಲನದಲ್ಲಿರಬೇಕು. ಮನೆಯವರೊಂದಿಗೆ ಹೆಚ್ಚು ಸಮಯ ಕಳೆಯಲು ಆತನಿಗೆ ಅವಕಾಶ ಸಿಗುವಂತಾಗಬೇಕು. ಇದು ಸಾಧ್ಯವಾಗದಿದ್ದಾಗ ಕಂಪೆನಿಯ ಉತ್ಪಾದಕತೆ ಸಹಜವಾಗಿಯೇ ಕುಸಿಯುತ್ತದೆ. ಇತ್ತೀಚಿನ ಸಂಶೋಧನೆಯೊಂದು “ಆರೋಗ್ಯ ಸೇವೆಗಳಲ್ಲಿರುವ ವರು (ವೈದ್ಯರು, ನರ್ಸ್‌ಗಳು ಇತ್ಯಾದಿ) ಎಷ್ಟು ದೀರ್ಘ‌ ಶಿಫ್ಟ್ಗಳನ್ನು ಮಾಡುತ್ತಾರೋ ಅಷ್ಟೇ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎನ್ನುತ್ತದೆ. ಅದರ ಪ್ರಕಾರ, 24 ಗಂಟೆಯೂ ಎಚ್ಚರದಿಂದಿರುವ ವೈದ್ಯನೊಬ್ಬನ ಪ್ರಜ್ಞೆಗೂ, ಅತಿಯಾದ ಮದ್ಯಪಾನ ಮಾಡಿದ ಕುಡುಕನ ಪ್ರಜ್ಞೆಗೂ ವ್ಯತ್ಯಾಸವಿರುವುದಿಲ್ಲವಂತೆ. 

ಇಡೀ ಪ್ರಪಂಚದಲ್ಲೇ “ಜಪಾನ್‌’, ಶಿಸ್ತು, ಕಾರ್ಯಕ್ಷಮತೆಗೆ ಪರ್ಯಾಯ ಪದವಾಗಿ ಬಳಸಲ್ಪಡುತ್ತದೆ. ಆದರೆ, ಇದಕ್ಕಾಗಿ ಜಪಾನ್‌ ತೆರುತ್ತಿರುವ ಬೆಲೆ ಈಗಷ್ಟೇ ಬೆಳಕಿಗೆ ಬರುತ್ತಿದೆ. 

ರೊಬಾಟ್‌ಗಳ ತಯ್ನಾರಿಯಲ್ಲಿ ಮುಂಚೂಣಿಯಲ್ಲಿರುವ ಜಪಾನ್‌, ತನ್ನ ಪ್ರಜೆಗಳನ್ನು ರೊಬಾಟ್‌ಗಳಂತೆ ಬಳಸಿಕೊಂಡರೆ ಆಗುವ ಅಪಾಯದ ಬಗ್ಗೆ ಈಗಲಾದರೂ ಎಚ್ಚೆತ್ತುಕೊಂಡಿರುವುದು ಒಳ್ಳೆಯ ಸಂಗತಿ. ಈಗ ಮಿಕ್ಕ ದೇಶಗಳ ಸರದಿ.
(ಕೃಪೆ: ಸೈಕಾಲಜಿ ಟುಡೆ)

ಪಾಲ್‌ ಬೆನೆಟ್‌

Advertisement

Udayavani is now on Telegram. Click here to join our channel and stay updated with the latest news.

Next