Advertisement
ಸುಮಾರು 3,77,873 ಚ. ಕಿ.ಮೀ. ವಿಸ್ತೀರ್ಣದಲ್ಲಿ ಪಸರಿಸಿದ ಜಪಾನ್ ನಿಜಕ್ಕೂ “ಅಚ್ಚರಿಯ ನಾಡು’. “ದೇಶಪ್ರೇಮ’ ಎನ್ನುವ ಶಬ್ದ ಅರ್ಥ ತುಂಬಿಕೊಂಡದ್ದನ್ನು ಟೊಕಿಯೊ ನಗರದ ಹೊರ ವಲಯದ ನರಿಟಾ ವಿಮಾನ ನಿಲ್ದಾಣದಲ್ಲೇ ನಾನು ಹಾಗೂ ನನ್ನಾಕೆ ಕಂಡುಕೊಂಡೆವು. ಆಂಗ್ಲ ಭಾಷೆಯನ್ನೇ ಅರಿಯಲು ಯತ್ನಿಸದೆ, ತಮ್ಮದೇ ತಾಯ್ನುಡಿ ಜಪಾನೀ ಭಾಷೆಯಲ್ಲೇ ಸಾಮಾನ್ಯ ಮಾತುಕತೆ ವ್ಯವಹಾರದಿಂದ ತೊಡಗಿ ಸಮಗ್ರ ರಾಷ್ಟ್ರದ ತಾಂತ್ರಿಕತೆಯ ಉತ್ತುಂಗತೆಗೆ ಪಸರಿದ ಸಾಹಸ ಅಲ್ಲಿನದು. ಇಂಗ್ಲಿಷ್ ಭಾಷೆ ವಿರಹಿತವಾಗಿಯೇ ವಿಜ್ಞಾನ, ಶಿಕ್ಷಣ, ಬಾಹ್ಯಾಕಾಶ, ಕೈಗಾರಿಕೆ, ಕೃಷಿ, ಕ್ರೀಡೆ, ಅಂತಾರಾಷ್ಟ್ರೀಯ ವಾಣಿಜ್ಯ ಸಂಬಂಧ ಎಲ್ಲವನ್ನೂ ಹೇಗೆ ಎತ್ತರ ಬಿತ್ತರದ ಮಜಲಿಗೆ ಕೊಂಡೊಯ್ಯಲು ಸಾಧ್ಯ ಎನ್ನುವುದಕ್ಕೆ ಜಪಾನ್ ಒಂದು ಜೀವಂತ ಸಾಕ್ಷಿ. ಈ ದೇಶ 2ನೇ ಮಹಾಯುದ್ಧದಲ್ಲಿ ಸಂಪೂರ್ಣ ವಿನಾಶದ ಅಂಚನ್ನು ತಲುಪಿದುದು ಜಾಗತಿಕ ಇತಿಹಾಸ ಶ್ರುತಪಡಿಸುವಂತಹದು. ಮುಂದೆ 1945ರ ಬಳಿಕವೂ ಚಂಡಮಾರುತ, ಭೂಕಂಪನ, ಜ್ವಾಲಾಮುಖೀಗಳು ಕಡಲಿನ ತೆರೆಗಳಂತೆ ಸವಾಲಾಗಿ ಈ ಪುಟ್ಟ ರಾಷ್ಟ್ರಕ್ಕೆ ಅಪ್ಪಳಿಸುತ್ತಲೇ ಇವೆ. ಟೋಕಿಯೊ, ಒಸಾಕಾ, ಕ್ಯೂಟೋನಗರದ ಗಗನಚುಂಬಿ ಕಟ್ಟಡಗಳು, ಅಗಲವಾದ ರಸ್ತೆ, ಪೊಲೀಸ್ ಕಣ್ಗಾವಲಿನ ಬದಲು ಎಲ್ಲೆಡೆಯೂ ಕೆಂಪು ಹಸುರು ಸೂಚನಾ ಬೆಳಕು (Signal Light) ಗಳ ಕಾರುಬಾರು, ಹೂಗಿಡಗಳ ಸೌಂದರ್ಯ- ಒಂದು ಹೊಸ ಲೋಕದಲ್ಲೇ ವಿಹರಿಸುವ “ಅನಿರ್ವಚನೀಯ’ ಆನಂದ.
ಜಪಾನಿನ ಹೊರನೋಟದ ಸೊಬಗಿನ ವಾಸ್ತವಿಕತೆಯ ಹೂವಿನಲ್ಲಿ ಹುದುಗಿದ ಆಂತರಿಕ ಸತ್ವದ ಮಕರಂದ ಅರಿಯುವ ಕಿರು ಪ್ರಯತ್ನವೂ ಸಫಲತೆ ನೀಡಿತ್ತು. ಪ್ರಥಮ ದಿನದಲ್ಲೇ ಆತ್ಮೀಯವಾಗಿ ಔತಣಕೂಟಕ್ಕೆ ಟೋಕಿಯೋದಲ್ಲಿ ನಮ್ಮನ್ನು ಆಹ್ವಾನಿಸಿದ ಎಚ್‌ಎಸ್‌ಎಸ್ (Hindu Swayam Sevak Sangh) ಮಿತ್ರರೊಂದಿಗಿನ ಚಿಂತನ-ಮಂಥನ ಒಂದಿನಿತು ಅರಿವಿನ ಪರದೆ ಸರಿಸಿತು. “”ನೋಡಿ ಸರ್, ಇಲ್ಲಿನ ಪ್ರತಿಯೊಬ್ಬ ಪುರುಷ ಹಾಗೂ ಮಹಿಳೆಯರು ಸರಾಸರಿ 10ರಿಂದ 12 ಗಂಟೆ ದುಡಿಯುವುದನ್ನು ಮೈಗೂಡಿಸಿಕೊಂಡಿದ್ದಾರೆ. ಒಬ್ಬರು ಒಂದು ಕೈಗಾರಿಕೆ ಅಥವಾ ಕಚೇರಿ ಸೇರಿದರು ಎಂದರೆ ಅದು ಅವರದೇ ಕುಟುಂಬದ ಅವಿಭಾಜ್ಯ ಅಂಗ. ತನ್ನ ಗಂಡ ತಡ ರಾತ್ರಿ 11ಕ್ಕೆ ದೈನಂದಿನ ಕೆಲಸ ಮುಗಿಸಿ ಮನೆಬಾಗಿಲು ತಟ್ಟಿದರೂ, ಮನೆಯೊಡತಿಯ ಮನದ ಕದವೂ ಎಂದೂ ಮುಚ್ಚಿಕೊಳ್ಳುವುದಿಲ್ಲ. “ಓಹ್, ಇಂಡಿಯನ್’
ಹೀಗೆ ನಾನು ಕಂಡುಕೊಂಡದ್ದು ಅವರ “ಶ್ರಮಮೇವ ಜಯತೇ’ಯ ಸೂಕ್ಷ್ಮ ಸತ್ಯದಲ್ಲಿ “ರಾಷ್ಟ್ರ ಪ್ರಗತಿ’ಯ ಬಿಂದು ಗಳನ್ನು. ಈ ಬಗ್ಗೆ ಸಾಕಷ್ಟು ಕೇಳಿದ್ದ ನನಗೆ, ಅಲ್ಲಿನ ರೈಲು, ಬಸ್ಸುಗಳ ಧಾವಂತದಲ್ಲಿಯೂ ಲ್ಯಾಪ್‌ಟಾಪ್ ಬಿಡಿಸಿಟ್ಟು , ಮಗ್ನರಾಗುತ್ತಲೇ ಪಯಣಿಸುವ ಸಾಲು ಸಾಲು ಜಪಾನಿಯರು ನಮ್ಮ ಕಣ್ಮನ ಸೆಳೆದರು. ಆಗ ನನಗೆ ಅನಿಸಿದ್ದು “ನಮ್ಮ ಭಾರತದ ಸರ್ವ ವಲಯಗಳಲ್ಲೂ ಬೆವರಿನ ಹನಿಗಳು ರಾಷ್ಟ್ರದ ಉತ್ತುಂಗತೆ ಎಂದು ಸಾಧಿಸೀತು?’ ಎಂಬ ಸ್ವಗತದ, ಬಯಕೆಗಳು. ಅಲ್ಲಿನ “ಕಾಯಕವೇ ಕೈಲಾಸ’ದ ಕೇವಲ ಒಂದೆರಡು ತುಣುಕುಗಳನ್ನು ಹೀಗೆ ಪೋಣಿಸಬಹುದೇನೋ. ಒಂದು ಟ್ಯಾಕ್ಸಿಯಲ್ಲಿ ಏರಿ ಕುಳಿತಾಗ ಟೈ, ಬಿಳಿ ಕೋಟು ಕಂಡ ಪೋಷಾಕಿನ ಟಾಕುಠೀಕಾದ ಡ್ರೈವರ್‌ನ ಗುರುತು ಭಾವಚಿತ್ರದಲ್ಲಿ ಜನನ 1933 ಎಂಬ ಬರಹ ಅಚ್ಚರಿ ಮೂಡಿಸಿತು. ನಾವು ಇಳಿಯುವ ಸ್ಥಳ ಬಂದಾಗ ತಾನೇ ಬಾಗಿಲು ತೆರೆದು, ಬ್ಯಾಗ್ ಇಳಿಸಿ, ನಮಿಸಿ, ನಿಗದಿತ “ಯೆನ್’ ಗಳಿಸಿ, ಮುಗುಳು ನಗೆಯಿಂದ ಜಪಾನ್ ಭಾಷೆಯಲ್ಲಿ “ಶುಭ’ ನುಡಿದು ಸರಿದುಬಿಟ್ಟ. ಜೀವನದಲ್ಲಿ ಪ್ರಪ್ರಥಮ ಬಾರಿಗೆ ವಿಶ್ವದರ್ಜೆಯ ಟೊಕಿಯೋ ನಗರದಲ್ಲಿ ಹೆಜ್ಜೆ ಹಾಕುತ್ತಿದ್ದ ನಮಗೆ ನಿಗದಿತ ಗುರಿ ತಲುಪುವಲ್ಲಿ “ನಿರಕ್ಷರಿ’ಗಳ ಬವಣೆ ಅರ್ಥವಾಯಿತು. ಜಪಾನೀ ಭಾಷಾ ಪರಿಸರದಲ್ಲಿ ನಿರ್ದಿಷ್ಟ ದಾರಿಯ ಮಾಹಿತಿಯನ್ನು ಯಾರ ಹತ್ತಿರ ಕೇಳ್ಳೋದು ಎಂದು ಯೋಚಿಸಿ ಕೊನೆಗೆ ಓರ್ವ ವೃದ್ಧರಲ್ಲಿ ಆಂಗ್ಲ ಭಾಷೆಯಲ್ಲಿ ಅರುಹಿದೆವು. ಆ ಹೊಟೇಲ್ ಹೆಸರು ಮಾತ್ರ ಕೇಳಿಸಿಕೊಂಡ ಆ ಹಿರಿಯ ಜಪಾನೀ “ಆಕಸ್ಮಿಕ ಮಿತ್ರ’ ತಕ್ಷಣ ಮುಗುಳ್ನಕ್ಕು ಅವರದೇ ಭಾಷೆಯಲ್ಲಿ “ಓಹ್, ಇಂಡಿಯನ್’ ಎಂದು ಉದ್ಗರಿಸಿದರು. ತುಂಬು ಸಂತಸದಿಂದ ನನ್ನ ನೂಕು ಬ್ಯಾಗಿಗೆ ಕೈಯಿರಿಸಿದಾಗ ಖುಷಿ ಮತ್ತು ಆತಂಕವಾಯಿತು. ಸರಸರನೆ ನಮ್ಮ ದಾರಿದೀಪಕನಾಗಿ ಸರಿದು, ಪಾತಾಳ ರೈಲಿನಲ್ಲೇ ತಾನೇ ನಮಗಿಬ್ಬರಿಗೂ ಕಿರು ಟಿಕೆಟ್ ದರವನ್ನು ಭರಿಸಿ, ಖರೀದಿಸಿ, ನಿರ್ದಿಷ್ಟ ಸ್ಥಳಕ್ಕೆ ತಂದು ಕೈತೋರಿಸಿದರು, ಸಾರ್ಥಕ ಮುಗುಳ್ನಗೆಯೊಂದಿಗೆ. ನಮ್ಮ ಆಂಗ್ಲ ಭಾಷೆಯ “ಥ್ಯಾಂಕ್ಸ್’ಗೂ ಕಾಯದೆ ಹೊರಟೇಬಿಟ್ಟ. ಆ ಹಿರಿಯರ ಹೆಸರೂ ಗೊತ್ತಿಲ್ಲ. ಕೇವಲ ಚಹರೆ, ಉಪಕಾರದ ಸ್ಮರಣೆ ಮಾತ್ರ ಮನದಲ್ಲಿದೆ. ಆ ದೇಶೀ ಮಿತ್ರರು ಆಗಂತುಕರಾದ ನಮ್ಮಂಥವರಿಗೆ ತೋರುವ ಆದರದ ಸವಿಮಾತ್ರ ಉಳಿಸಿಹೋದರು.
Related Articles
Advertisement
ತಮ್ಮ ತಾಯ್ನೆಲದ ಬಗೆಗೆ ಅಗಾಧ ಪ್ರೀತಿ ಇರಿಸಿದ ಈ ಮಂದಿ ತಮ್ಮ ಕಂಪೆನಿಗೂ ಟೊಯೊಟಾ, ಹಿಟಾಚಿ, ನಿಪ್ಪೋನ್ ಎಂಬ ಹೆಸರೇ ಇರಿಸಿದುದೂ ಅಚ್ಚರಿ ಮೂಡಿಸಿತು.
ಪಿ. ಅನಂತಕೃಷ್ಣ ಭಟ್