ಟೋಕಿಯೊ: ಲಾಕ್‌ಡೌನ್ ಇಲ್ಲದೆ, ಸಮೂಹ ಪರೀಕ್ಷೆಗಳನ್ನೂ ನಡೆಸದೇ ಜಪಾನ್ ಕೋವಿಡ್ ಹೋರಾಟದಲ್ಲಿ ಗೆದ್ದಿದೆ. ಕೊರೊನಾ ತುರ್ತು ಪರಿಸ್ಥಿತಿ ರದ್ದುಗೊಳಿಸುತ್ತಿರುವಂತೆಯೇ ಕೇವಲ 12 ಮಂದಿಯಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ. ಜಪಾನಿನ ಎಮರ್ಜೆನ್ಸಿ ಬೇರೆಡೆಯಂತೆ ಸಂಪೂರ್ಣ ನಿಷೇಧಾಜ್ಞೆ ಆಗಿರಲಿಲ್ಲ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಜನ ಓಡಾಡುತ್ತಿದ್ದರು. ಹೊಟೇಲ್‌ಗಳು, ಸೆಲೂನ್‌ಗಳು, ಮಾಲ್‌ಗಳು ಎಂದಿನಂತೆ ತೆರೆದಿದ್ದವು. ಆ್ಯಪ್ ಡೌನ್‌ಲೋಡ್‌ನಂಥ ದಾರಿಯಲ್ಲೂ ಜಪಾನ್ ಸಾಗಲಿಲ್ಲ. ಇಡೀ ಜಗತ್ತು ಪರೀಕ್ಷೆ ಪರೀಕ್ಷೆ ಎನ್ನುತ್ತಿದ್ದಾಗ, ಜಪಾನ್ ತನ್ನ ಜನಸಂಖ್ಯೆಯ ಶೇ.0.2ರಷ್ಟು ಮಂದಿಯನ್ನು ಮಾತ್ರವೇ ಪರೀಕ್ಷೆಗೊಳಪಡಿಸಿದೆ. ಇದುವರೆಗೆ ಜಪಾನ್‌ನಲ್ಲಿ ಕೇವಲ 820 ಮಂದಿಯಷ್ಟೇ ಸಾವನ್ನಪ್ಪಿದ್ದಾರೆ. ಇತರೆ 7 ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ, ಈ ಸಂಖ್ಯೆ ತೀರಾ ಕಡಿಮೆ.
ಕಾರಣ ಏನು?: ಜಪಾನ್ ಕೋವಿಡ್ ಹೇಗೆ ಗೆದ್ದಿತು ಎನ್ನುವುದೇ ತಜ್ಞರಿಗೆ ಅಚ್ಚರಿ. ಆರಂಭದಲ್ಲೇ ಮಾಸ್ಕ್ ಸಂಸ್ಕೃತಿ ಕಡ್ಡಾಯಗೊಳಿಸಿ, ಶಾಲೆಗಳನ್ನೆಲ್ಲ ಮುಚ್ಚಲಾಗಿತ್ತು. ಅತಿ ಕಡಿಮೆ ಸ್ಥೂಲಕಾಯದ ಮಂದಿ ಇರುವುದರಿಂದ, ವೈರಾಣುವಿನ ಮಾರಣಾಂತಿಕ ದಾಳಿ ಸಾಧ್ಯವಾಗಲಿಲ್ಲ ಎಂದು ಊಹಿಸಲಾಗುತ್ತಿದೆ.
50 ಸಾವಿರ ದಾದಿಯರ ತಪಸ್ಸು: ಜನವರಿ ಮಧ್ಯದಲ್ಲಿ ಮೊದಲ ಪ್ರಕರಣ ಕಂಡು ಬಂದಾಗ, ಸರಕಾರ ಸೂಕ್ತ ಮುನ್ನೆಚ್ಚರಿಕೆ ಕೈಗೊಂಡಿತು. ದೇಶಕ್ಕೆ ಪದೇಪದೇ ಕಾಡುವ ಇನ್ ಫ್ಲ್ಯೂಯೆಂಝಾ, ಕ್ಷಯ ರೋಗಗಳ ನಿವಾರಣೆಗೆ ಕೆಲಸ ಮಾಡುತ್ತಿದ್ದ 50 ಸಾವಿರ ದಾದಿಯರಿಗೆ, ಸೋಂಕಿತರ ಪತ್ತೆಯ ಕೆಲಸ ಹಚ್ಚಲಾಯಿತು. ಸೋಂಕು ಹಬ್ಬುವಿಕೆಯ ಕುರಿತು ಸಮಗ್ರ ಜ್ಞಾನ ಹೊಂದಿದ್ದ, ಅನುಭವಿ ದಾದಿಯರು ಕೊರೊನಾವನ್ನು ಸುಲಭದಲ್ಲಿ ಕಟ್ಟಿಹಾಕಿದ್ದಾರೆ.
ಮರು ಅಲೆಯ ಭಯ
ತುರ್ತು ಪರಿಸ್ಥಿತಿಯನ್ನು ವಾಪಸ್ ಪಡೆದುಕೊಂಡರೂ ಕೋವಿಡ್ ದ ಮರುಅಲೆಯ ಭಯವಿದೆ. ಈಗಾಗಲೇ ಜಪಾನ್, ಅಮೆರಿಕದ ಗಿಲ್ಯಾಡ್ ಸೈನ್ಸಸ್ ಸಂಶೋಧಿಸುತ್ತಿರುವ ರೆಮ್‌ಡಿಸಿವರ್ ಲಸಿಕೆಯ ಮಾರಾಟ ಒಪ್ಪಂದಕ್ಕೆ ಎಲ್ಲ ದೇಶಗಳಿಗೂ ಮೊದಲೇ ಜಪಾನ್ ಸರಕಾರ ಸಹಿ ಹಾಕಿದೆ.