Advertisement

ಬಾಂಧವ್ಯದಲ್ಲಿ ಹೊಸ ಶಕೆ

12:37 AM Mar 20, 2022 | Team Udayavani |

ಹೊಸದಿಲ್ಲಿ:  ಭಾರತ ಮತ್ತು ಜಪಾನ್‌ ಬಾಂಧವ್ಯದಲ್ಲಿ ಹೊಸ ಶಕೆ ಆರಂಭವಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ಬರೋಬ್ಬರಿ 3.20 ಲಕ್ಷ ಕೋಟಿ ರೂ. ಮೊತ್ತವನ್ನು ಭಾರತದಲ್ಲಿ ಹೂಡಿಕೆ ಮಾಡುವುದಾಗಿ ಜಪಾನ್‌ ಘೋಷಿಸಿದೆ.

Advertisement

ಎರಡು ದಿನಗಳ ಭಾರತ ಪ್ರವಾಸದಲ್ಲಿ ರುವ ಜಪಾನ್‌ ಪ್ರಧಾನಿ ಫ‌ುಮಿಯೋ ಕಿಶಿದಾ ಅವರು ಶನಿವಾರ ದಿಲ್ಲಿಯ ಹೈದರಾಬಾದ್‌ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ಘೋಷಣೆ ಮಾಡಿದ್ದಾರೆ.

ಇದಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ವೃದ್ಧಿಸುವ ಹಾಗೂ ಪ್ರತ್ಯೇಕ ಸ್ವತ್ಛ ಇಂಧನ ಪಾಲುದಾರಿಕೆ ಹೊಂದುವ ನಿಟ್ಟಿನಲ್ಲಿ ಉಭಯ ದೇಶಗಳು ಮಹತ್ವದ ಹೆಜ್ಜೆಯಿಟ್ಟಿವೆ. ಜತೆಗೆ ಸೈಬರ್‌ ಭದ್ರತೆ,  ಸುಸ್ಥಿರ ಅಭಿವೃದ್ಧಿ ಮತ್ತು ತ್ಯಾಜ್ಯ ನೀರು ನಿರ್ವಹಣೆ ಸಂಬಂಧ 3 ಒಪ್ಪಂದಗಳಿಗೂ ಸಹಿ ಹಾಕಿವೆ.

ಭಾರತ ಮತ್ತು ಜಪಾನ್‌ ನಡುವಿನ 14ನೇ ವಾರ್ಷಿಕ ಶೃಂಗದಲ್ಲಿ ಮೋದಿ ಹಾಗೂ ಕಿಶಿದಾ ಅವರು, ಎರಡೂ ದೇಶಗಳ ನಡುವಿನ ಆರ್ಥಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಗಟ್ಟಿಗೊಳಿಸುವ ವಿಚಾರ ಮಾತ್ರವಲ್ಲದೇ ಉಕ್ರೇನ್‌ ಮೇಲೆ ರಷ್ಯಾ ನಡೆಸಿರುವ ಯುದ್ಧ ಸಹಿತ ವಿವಿಧ ಜಾಗತಿಕ ವಿಚಾರಗಳ ಕುರಿತೂ ಚರ್ಚಿಸಿದ್ದಾರೆ.

ಈಗಾಗಲೇ ಭಾರತದ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹೈಸ್ಪೀಡ್‌ ರೈಲ್ವೇಗೆ ಸಹಕಾರ ನೀಡುತ್ತಿರುವ ಜಪಾನ್‌, ಈಗ 3.20 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ಮುಂದಾಗಿರುವುದು ಎರಡೂ ದೇಶಗಳ ಉತ್ತಮ ಬಾಂಧವ್ಯಕ್ಕೆ ಸಾಕ್ಷಿ. ಜಪಾನ್‌ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಿಶಿದಾ ಅವರ ಮೊದಲ ಭಾರತ ಭೇಟಿ ಇದಾಗಿದೆ.

Advertisement

ರಷ್ಯಾ ಆಕ್ರಮಣ  ಗಂಭೀರ: ಕಿಶಿದಾ :

ರಷ್ಯಾ ನಡೆಸಿರುವ ಆಕ್ರಮಣವು ಗಂಭೀರವಾದದ್ದು, ಅದು ಅಂತಾರಾಷ್ಟ್ರೀಯ ನಿಯಮಾವಳಿಗಳ ಬೇರನ್ನೇ ಅಲುಗಾಡಿಸಿದೆ ಎಂದು ಜಪಾನ್‌ ಪ್ರಧಾನಿ ಕಿಶಿದಾ ಹೇಳಿದ್ದಾರೆ.   ರಷ್ಯಾದ ದಾಳಿಯ ಕುರಿತೂ ಚರ್ಚಿಸಿದ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ ಒತ್ತಾಯಪೂರ್ವಕವಾಗಿ ಯಥಾಸ್ಥಿತಿಯನ್ನು ಬದಲಿಸಲು ನಡೆಸುವ ಏಕಪಕ್ಷೀಯ ಯತ್ನಕ್ಕೆ ಯಾರೂ ಅವಕಾಶ ನೀಡಬಾರದು. ಯುದ್ಧಕ್ಕೆ ಅಂತಾರಾಷ್ಟ್ರೀಯ ಕಾನೂನಿನ ಆಧಾರದಲ್ಲಿ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು ಎಂದೂ ಹೇಳಿದ್ದಾರೆ.

ಚರ್ಚೆಯಲ್ಲಿ ಪ್ರಸ್ತಾವವಾದ ವಿಷಯ :

  1. ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ 3.20 ಲಕ್ಷ ಕೋ.ರೂ. ಹೂಡಿಕೆಗೆ ಜಪಾನ್‌ ನಿರ್ಧಾರ

2 .ಸ್ವಚ್ಛ ಇಂಧನ ಪಾಲುದಾರಿಕೆ ಬಗ್ಗೆ ಉಭಯ ದೇಶಗಳ ಘೋಷಣೆ

3.ಸೈಬರ್‌ ಭದ್ರತೆ, ಸುಸ್ಥಿರ ಅಭಿವೃದ್ಧಿ ಮತ್ತು ತ್ಯಾಜ್ಯ ನೀರು ನಿರ್ವಹಣೆ ಸಂಬಂಧ 3 ಒಪ್ಪಂದಗಳಿಗೆ ಸಹಿ

4.ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಆಕ್ರಮಣದ ಕುರಿತು ಪ್ರಸ್ತಾವ

5.ಲಡಾಖ್‌ನಲ್ಲಿ ಚೀನದ ಉದ್ಧಟತನ ಹಾಗೂ ಎರಡೂ ದೇಶಗಳ ನಡುವಿನ ಮಾತುಕತೆ

Advertisement

Udayavani is now on Telegram. Click here to join our channel and stay updated with the latest news.

Next