Advertisement

ಭಕ್ತಿ ಉದ್ದೀಪನಕ್ಕೆ ಜಪ ಮಾಲೆಯ ಪ್ರಾರ್ಥನೆ ಪೂರಕ: ಬಿಷಪ್‌

11:08 AM Sep 30, 2018 | |

ಮಹಾನಗರ: ಕೆಥೋಲಿಕ್‌ ಕ್ರೈಸ್ತರಿಗೆ ಮೇರಿ ಮಾತೆಯ ಮೇಲಿರುವ ಭಕ್ತಿಯನ್ನು ಸದಾ ಜೀವಂತವಾಗಿರಿಸಲು ರೋಜರಿ ಮಾತೆಯ (ಜಪ ಮಾಲೆ ಮಾತೆಯ) ಪ್ರಾರ್ಥನೆ ಸಹಾಯಕ ವಾಗುತ್ತದೆ ಎಂದು ಮಂಗಳೂರಿನ ವಿಶ್ರಾಂತ ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್ಲ್ 
ಡಿ’ಸೋಜಾ ಹೇಳಿದರು. ಮಿಲಾಗ್ರಿಸ್‌ ಚರ್ಚ್‌ ಮತ್ತು ರೊಜಾರಿಯೊ ಕೆಥಡ್ರಲ್‌ನ ಜಂಟಿ ಆಶ್ರಯದಲ್ಲಿ ಮಿಲಾಗ್ರಿಸ್‌ ಹಾಲ್‌ನಲ್ಲಿ ಹಮ್ಮಿಕೊಂಡಿರುವ ಕೆಥೋಲಿಕ್‌ ಕ್ರೈಸ್ತರ ಜಪ ಮಾಲೆಗಳ ಮತ್ತು ಧಾರ್ಮಿಕ ಸಾಹಿತ್ಯದ ಎರಡು ದಿನಗಳ ಪ್ರದರ್ಶನವನ್ನು ಅವರು ಶನಿವಾರ ಉದ್ಘಾಟಿಸಿದರು.

Advertisement

ಲಿಮ್ಕಾ ದಾಖಲೆ ಖ್ಯಾತಿಯ ಕೇರಳದ ಕೊಚಿನ್‌ನ ಸಾಬೂ ಕೈತಾರ್‌ ಮತ್ತು ಅವರ ತಂಡದವರಿಂದ 50,000ಕ್ಕಿಂತಲೂ ಅಧಿಕ ಜಪ ಮಾಲೆಗಳು, ಅನೇಕ ಕ್ರೈಸ್ತ ಸಂತರ ಜಪ ಸರಗಳು, ಮೇರಿ ಮಾತೆಯ 500ಕ್ಕಿಂತಲೂ ಹೆಚ್ಚು ಮೂರ್ತಿಗಳು, 400ರಷ್ಟು ವಿವಿಧ ಶಿಲುಬೆಗಳು, 100ಕ್ಕೂ ಹೆಚ್ಚು ಚಿತ್ರಗಳು ಈ ಪ್ರದರ್ಶನದಲ್ಲಿವೆ. ಎಷ್ಟೇ ಆಧುನಿಕತೆಯ ವಾತಾವರಣ ಇದ್ದರೂ ಮತ್ತು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ದೇವರ ಮೇಲಣ ನೈಜ ಭಕ್ತಿಯನ್ನು ಕಡೆಗಣಿಸ ಬಾರದು ಎಂದು ಅವರು ಹೇಳಿದರು.

ಮನೆಯಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಿದರೆ ಕುಟುಂಬ ಒಗ್ಗಟ್ಟಿನಿಂದ ಮತ್ತು ಸುಭದ್ರವಾಗಿ ಇರುತ್ತದೆ. ಕುಟುಂಬದ ಸಮಸ್ಯೆಗೆ ಪರಿಹಾರವನ್ನೂ ಈ ಮೂಲಕ ಕಂಡುಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಜಪ ಮಾಲೆಗೆ ಪ್ರಮುಖ ಸ್ಥಾನ
ಮಾಜಿ ಶಾಸಕ ಜೆ.ಆರ್‌. ಲೋಬೋ ಮುಖ್ಯ ಅತಿಥಿಯಾಗಿದ್ದರು. ಕೆಥೋಲಿಕ್‌ ಧರ್ಮ ಸಭೆಯಲ್ಲಿ ಜಪ ಮಾಲೆಗೆ ಪ್ರಮುಖ ಸ್ಥಾನವಿದೆ. ಶಿಲುಬೆಯ ಅನಂತರದ ಸ್ಥಾನ ಜಪ ಮಾಲೆಗಿದೆ. ರೋಜರಿ ಮಾತೆ ಸದಾ ನಮ್ಮ ಜತೆಗಿರುತ್ತಾರೆ. ಅವರು ನಮ್ಮ ಕೈಬಿಡುವುದಿಲ್ಲ. ಈ ನಿಟ್ಟಿನಲ್ಲಿ ತಮ್ಮ ಬದುಕಿನ ಕೆಲವೊಂದು ಅನುಭವಗಳನ್ನು ಅವರು ವಿವರಿಸಿದರು.

ಅಭಿಯಾನ ನಡೆಯಬೇಕು
ಇತ್ತೀಚೆಗೆ ಟಿ.ವಿ. ಮತ್ತು ಮೊಬೈಲ್‌ ಪ್ರಭಾವದಿಂದ ಯುವ ಪೀಳಿಗೆ ಜಪ ಮಾಲೆಯ ಪ್ರಾರ್ಥನೆಯಿಂದ ದೂರ ಸರಿಯುತ್ತಿದೆ. ಇದರಿಂದ ಯುವಕರು ದಾರಿ ತಪ್ಪಿ ಕೆಲವೊಮ್ಮೆ ಕೌಟುಂಬಿಕ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಯುವಕರನ್ನು ಸರಿ ದಾರಿಗೆ ತರಲು ಅಭಿಯಾನವನ್ನು ಹಮ್ಮಿಕೊಳ್ಳುವ ಆವಶ್ಯಕತೆ ಇದೆ ಎಂದು ಅವರು ಹೇಳಿದರು.

Advertisement

ವಿಶಿಷ್ಟ ರೀತಿಯಲ್ಲಿ ಉದ್ಘಾಟನೆ
ಚಿತ್ರ ಕಲಾವಿದೆ ಶಬರಿ ಗಾಣಿಗ ಅವರು ಸ್ಥಳದಲ್ಲಿಯೇ ರಚಿಸಿದ ಮೇರಿ ಮಾತೆಯ ಚಿತ್ರವನ್ನು ಅನಾವರಣ ಮಾಡುವ ಮೂಲಕ ವಿಶ್ರಾಂತ ಬಿಷಪ್‌ ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಅವರು ಪ್ರದರ್ಶನವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಧರ್ಮ ಪ್ರಾಂತದ ಪ್ರಧಾನ ಗುರು ಮೊ| ಮ್ಯಾಕ್ಸಿಂ ನೊರೋನ್ಹಾ, ಜಪ ಮಾಲೆಗಳ ಸಂಗ್ರಾಹಕ ಸಾಬೂ ಕೈತಾರ್‌, ರೊಜಾರಿಯೊ ಕೆಥೆಡ್ರಲ್‌ನ ರೆಕ್ಟರ್‌ ವಂ| ಜೆ.ಬಿ. ಕ್ರಾಸ್ತಾ, ಅರ್ಸುಲೈನ್‌ ಧರ್ಮ ಭಗಿನಿಯರ ಸಂಸ್ಥೆಯ ಪ್ರಾಂತೀಯ ಮುಖ್ಯಸ್ಥರಾದ ಸಿ| ರೀಟಾ ವಾಸ್‌ ಉಪಸ್ಥಿತರಿದ್ದರು. ಮಿಲಾಗ್ರಿಸ್‌ ಚರ್ಚ್‌ನ ಪ್ರಧಾನ ಗುರು ವಂ| ವಲೇರಿಯನ್‌ ಡಿ’ಸೋಜಾ ಸ್ವಾಗತಿಸಿ, ರೊಜಾರಿಯೊ ಕೆಥಡ್ರಲ್‌ನ ಸಹಾಯಕ ಗುರು ವಂ| ಫ್ಲೇವಿಯನ್‌ ಲೋಬೊ ವಂದಿಸಿದರು. ಐಸಿವೈಎಂ ನಿರ್ದೇಶಕ ವಂ| ರೊನಾಲ್ಡ್‌ ಪ್ರಕಾಶ್‌ ಡಿ’ಸೋಜಾ ಅವರು ಪ್ರಾರ್ಥನೆ ನೆರವೇರಿಸಿದರು.

ಮ್ಯೂಸಿಯಂ
ಜಪ ಮಾಲೆಗಳನ್ನು ಈಗ ತನ್ನ ಮನೆಯಲ್ಲಿ ಇರಿಸಲಾಗುತ್ತಿದ್ದು, ಕೊಚಿನ್‌ನಲ್ಲಿ ಮ್ಯೂಸಿಯಂ ಸ್ಥಾಪಿಸುವ ಉದ್ದೇಶವಿದೆ. ಅದಕ್ಕಾಗಿ 30 ಸೆಂಟ್ಸ್‌ ಜಾಗ ಒದಗಿಸಲು ವ್ಯಕ್ತಿಯೊಬ್ಬರು ಮುಂದೆ ಬಂದಿದ್ದಾರೆ ಎಂದು ಸಾಬೂ ಕೈತಾರ್‌ ವಿವರಿಸಿದರು.

ಇದು ಮಂಗಳೂರಿನಲ್ಲಿ 2ನೇ, ಜಾಗತಿಕ ಮಟ್ಟದಲ್ಲಿ 140ನೇ ಪ್ರದರ್ಶನ. 2018 ಡಿಸೆಂಬರ್‌ ತನಕ ಪ್ರತಿ ವಾರ ದೇಶದ ನಾನಾ ಕಡೆ ಪ್ರದರ್ಶನ ನಡೆಯಲಿದೆ. 2019 ಎಪ್ರಿಲ್‌- ಮೇ ತಿಂಗಳಲ್ಲಿ ಇಟೆಲಿಯಲ್ಲಿ ಪ್ರದರ್ಶನವಿದೆ. ತಮ್ಮದು ವಾಣಿಜ್ಯ ಉದ್ದೇಶದ ಪ್ರದರ್ಶನ ಅಲ್ಲದಿದ್ದರೂ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವಾಗ ತೆರಿಗೆ ಪಾವತಿ ಕಡ್ಡಾಯವಾಗಿದೆ. ಕೇರಳದಿಂದ ಕರ್ನಾಟಕಕ್ಕೆ ಬರುವಾಗ ತೆರಿಗೆಯ ಪ್ರಮಾಣ ಬಹಳಷ್ಟು ದುಬಾರಿಯಾಗಿದೆ ಎಂದರು. ಪತ್ನಿ ಬೆನಿಟಾ ಮತ್ತು ಪುತ್ರ ಫ್ರಾನ್ಸಿಸ್‌ ಅಘಿಲ್‌ ಜತೆಗಿದ್ದರು.

ಗಿನ್ನೆಸ್‌ ದಾಖಲೆ ಗುರಿ
ಈಗಾಗಲೇ 50,000 ದಷ್ಟು ಜಪ ಮಾಲೆಗಳ ಸಂಗ್ರಹ ನನ್ನ ಬಳಿ ಇದೆ. ಈ ಪೈಕಿ 300 ವೆಟಿಕನ್‌ನಿಂದ ಹಾಗೂ ಉಳಿದವುಗಳನ್ನು 28 ವಿವಿಧ ದೇಶಗಳಿಂದ ಸಂಗ್ರಹಿಸಲಾಗಿದೆ. 12 ಮೀ. ಉದ್ದದ 1,000 ಮಣಿಗಳಿರುವ ಸರ ಅತ್ಯಂತ ಉದ್ದದ ಜಪ ಸರವಾಗಿದೆ. 1 ಇಂಚು ಉದ್ದನ ಮಾಲೆ ಅತಿ ಸಣ್ಣ ಜಪ ಮಾಲೆಯಾಗಿದೆ. ವಜ್ರ ಮತ್ತು ಚಿನ್ನದಿಂದ ತಯಾರಿಸಿದ ದುಬಾರಿ ರೋಜರಿಗಳೂ ಇವೆ. 50,000 ಜಪ ಮಾಲೆಗಳ ಸಂಗ್ರಹಕ್ಕಾಗಿ ಕಳೆದ ಜೂನ್‌ನಲ್ಲಿ ನನ್ನ ಹೆಸರು ಲಿಮ್ಕಾ ದಾಖಲೆಯ ಪುಸ್ತಕದಲ್ಲಿ ದಾಖಲಾಗಿದೆ. ಇದನ್ನು 59,000 ಕ್ಕೇರಿಸಿ 2019ರಲ್ಲಿ ಗಿನ್ನೆಸ್‌ ದಾಖಲೆ ಸ್ಥಾಪಿಸುವ ಗುರಿ ಹೊಂದಲಾಗಿದೆ.  ಮುಂದಿನ ಅಕ್ಟೋಬರ್‌ ವೇಳೆಗೆ ಇದನ್ನು 1 ಲಕ್ಷಕ್ಕೆ ತಲುಪಿಸುವ ಯೋಚನೆ ಇದೆ. 400
ಶಿಲುಬೆಗಳಿದ್ದು, ಅದನ್ನು 1,000ಕ್ಕೆ ಏರಿಸಲು ಉದ್ದೇಶಿಸಲಾಗಿದೆ. 10,800 ಮೆಡಲ್‌ಗ‌ಳು, 450 ವಿವಿಧ ಸಂತರ ಸ್ಮರಣಿಕೆಗಳಿವೆ ಎಂದು ಸಾಬೂ ಕೈತಾರ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next