ಶಹಾಪುರ: ಸಗರನಾಡಿನ ಆರಾಧ್ಯ ದೈವ ಶ್ರೀ ಚರಬಸವೇಶ್ವರ ತಾತಾನವರ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಜಾನುವಾರು ಜಾತ್ರೆ ಏ.6ರಿಂದ ಪ್ರಾರಂಭವಾಗಿದ್ದು, ಒಂದು ವಾರ ಕಾಲ ನಡೆಯಲಿದ್ದು, ಸಂಭ್ರಮವನ್ನು ಇಮ್ಮಡಿ ಮಾಡಿದೆ. ಹೀಗಾಗಿ ಅನ್ನದಾತರೆಲ್ಲ ಒಂದೆಡೆ ಸೇರುವ ಮೂಲಕ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಜಾತ್ರೆಯಲ್ಲಿ ಅಸಂಖ್ಯಾತ ಎತ್ತುಗಳು ಸೇರಿದ್ದು, ಅವುಗಳ ವಹಿವಾಟು ಜೋರಾಗಿ ನಡೆದಿದೆ. ಕಳೆದೆರಡು ವರ್ಷಗಳಿಂದ ಕೊರೊನಾ ಮಹಾಮಾರಿಯಿಂದ ಜಾತ್ರೆ, ಧಾರ್ಮಿಕ ಕಾರ್ಯಕ್ರಮ, ಜಾನುವಾರು ಜಾತ್ರೆಗಳಿಗೆ ಮಂಕು ಕವಿದಿತ್ತು. ರೈತರು ಕೃಷಿ ಕಾರ್ಯಕ್ಕೆ ತಮಗೆ ಬೇಕಾದ ಎತ್ತು ಖರೀದಿಸಲು ಅವಕಾಶ ದೊರೆತಿರಲಿಲ್ಲ. ಇದ್ದುದರಲ್ಲಿಯೇ ಕೃಷಿ ಕಾರ್ಯ ಮಾಡುವ ಅನಿವಾರ್ಯತೆ ಎದುರಾಗಿತ್ತು.
ಬಾರಿ ಚರಬಸವೇಶ್ವರ ಜಾನುವಾರು ಜಾತ್ರೆಗೆ ಸಾಕಷ್ಟು ಸಂಖ್ಯೆಯಲ್ಲಿ ಎತ್ತುಗಳು ಕೊಡು-ತೆಗೆದುಕೊಳ್ಳವಲ್ಲಿ ರೈತರು ಬಿಸಿಲನ್ನೂ ಲೆಕ್ಕಿಸದೇ ನಿರತರಾಗಿರುವುದು ಕಂಡು ಬರುತ್ತಿದೆ. ಕನಿಷ್ಟ ಒಂದು ಎತ್ತಿನ ಬೆಲೆ 50 ಸಾವಿರದಿಂದ ಗರಿಷ್ಠ 2.20 ಲಕ್ಷ ರೂ.ವರೆಗೆ ಮಾರಾಟವಾಗುತ್ತಿವೆ. ಇಂಗಳಿಗಿ ಸಲಾದಪುರದ ಒಂದು ಎತ್ತಿನ ಬೆಲೆ 2.50 ಲಕ್ಷ ರೂ. ಹೇಳಲಾಗಿತ್ತು.
ಎರಡು ದಿನಗಳಿಂದ ಆ ಎತ್ತು ಖರೀದಿಗೆ ಸಾಕಷ್ಟು ಜನರು ಪ್ರಯತ್ನಿಸಿ ಶುಕ್ರವಾರ 2.20 ಲಕ್ಷ ರೂ. ಕೊಟ್ಟು ಓರ್ವ ರೈತರು ಅದನ್ನು ಖರೀದಿಸಿದ್ದಾರೆ. ಜಾನುವಾರ ಜಾತ್ರೆಯಲ್ಲಿ ಸೇರಿದ್ದ ಎತ್ತುಗಳನ್ನು ನೋಡಲೆಂದೆ ಹಲವು ಗ್ರಾಮಗಳ ರೈತರು ಆಗಮಿಸುತ್ತಾರೆ. ಅಲ್ಲದೇ ಕೃಷಿ ಪರಿಕರ ಖರೀದಿಯಲ್ಲೂ ರೈತರು ಮುಗಿಬಿದ್ದಿದ್ದಾರೆ. ಬೇಸಿಗೆಯಾದ್ದರಿಂದ ಕೃಷಿ ಚಟುವಟಿಕೆಗೆ ಸ್ವಲ್ಪ ಬಿಡುವಿದೆ. ಬರುವ ಮುಂಗಾರಿಗೂ ಮುಂಚೆ ಜಮೀನನ್ನು ಹದ ಮಾಡಿಕೊಳ್ಳುವುದು, ಕೃಷಿ ಪರಿಕರ ತಯಾರಿಸಿಕೊಳ್ಳುವಲ್ಲಿ ರೈತರು ಬ್ಯುಸಿಯಾಗುತ್ತಾರೆ. ಮುಂಗಾರು ಆರಂಭವಾಗುತ್ತಿದ್ದಂತೆ ಅವರ ಕೃಷಿ ಚಟುವಟಿಕೆ ಗರಿಗೆದರುತ್ತದೆ. ಅದಕ್ಕೆ ಬೇಕಾದ ಪೂರಕ ಸಾಮಗ್ರಿ ವ್ಯವಸ್ಥೆಗೊಳಿಸಿಕೊಳ್ಳುವುದು ವಾಡಿಕೆ.
ಎರಡು ವರ್ಷದಿಂದ ಎತ್ತುಗಳ ಜಾತ್ರೆ ನಡೆಯದಿದ್ದಕ್ಕೆ ರೈತರಿಗೆ ತೊಂದರೆಯಾಗಿತ್ತು. ಈ ವರ್ಷ ಎತ್ತುಗಳ ಮಾರಾಟ-ಜಾತ್ರೆ ನಡೆಯುತ್ತಿದೆ. ನಮಗೆ ಬೇಕಾದ ಎತ್ತು ಖರೀದಿಸುತ್ತೇವೆ. ಸಣ್ಣ ರೈತರು, ದೊಡ್ಡ ರೈತರು ತಮ್ಮ ಶಕ್ತಿಗನುಗುಣವಾಗಿ ಎತ್ತುಗಳನ್ನು ಖರೀದಿಸುತ್ತಿದ್ದಾರೆ. ಕೃಷಿ ಸಾಮಗ್ರಿಗಳೂ ಜಾತ್ರೆಯಲ್ಲಿ ದೊರೆಯುತ್ತಿವೆ. ಎತ್ತುಗಳ ಬೆಲೆಯೂ ದುಬಾರಿಯಾಗಿವೆ.
-ಬಸಪ್ಪ, ಜಾತ್ರೆಗೆ ಆಗಮಿಸಿದ ರೈತ
ಕಳೆದೆರಡು ವರ್ಷಗಳಿಂದ ಯಾವುದೇ ಜಾತ್ರೆ- ಉತ್ಸವಕ್ಕೆ ಕೊರೊನಾ ಬ್ರೇಕ್ ಹಾಕಿತ್ತು. ಈ ವರ್ಷ ಜಾತ್ರೋತ್ಸವ ಆರಂಭವಾಗಿದ್ದರಿಂದ ಕೃಷಿಕರು ಉತ್ಸಾಹದಲ್ಲಿದ್ದಾರೆ. ಕೃಷಿಗೆ ಬೆನ್ನೆಲುಬಾದ ಎತ್ತುಗಳ ಖರೀದಿ ಜೋರಾಗಿ ನಡೆದಿದೆ. ಈ ಬಾರಿ ಜಾತ್ರೆಯಲ್ಲಿ ಅತಿ ಹೆಚ್ಚು ಗರಿಷ್ಠ ಬೆಲೆ ಮಾರಾಟವಾದದು ಇಂಗಳಿಗಿ ಸಲಾದಪುರ ಗ್ರಾಮದ ಎತ್ತು 2.20 ಲಕ್ಷ ರೂ. ಗೆ ಖರೀದಿಯಾಗಿದೆ ಎಂದು ರೈತರು ತಿಳಿಸಿದ್ದಾರೆ. ಇನ್ನೂ 2-3 ದಿನ ಜಾತ್ರೆ ನಡೆಯಲಿದೆ.
-ಶರಣು ಗದ್ದುಗೆ, ಚರಬಸವೇಶ್ವರ ದೇವಸ್ಥಾನ ವಂಶಸ್ಥರು
-ಮಲ್ಲಿಕಾರ್ಜುನ ಮುದ್ನೂರ