ಸಿನಿಮಾ ಬಿಡುಗಡೆಯಾದ ನಂತರ ದಿನಾ ಇಷ್ಟೊಂದು ಜನ ಬಂದು ಸಿನಿಮಾ ನೋಡಿದರೆ ಚಿತ್ರ ಹಿಟ್ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ …
– ಹಿಂದಿನ ಸೀಟಿನಿಂದ ಈ ತರಹದ ಮಾತೊಂದು ಕೇಳಿಬಂತು. ಅದಕ್ಕೆ ಕಾರಣ ಆ ಕಾರ್ಯಕ್ರಮದಲ್ಲಿ ಸೇರಿದ್ದ ಜನ. ಅದು “ಜನುಮದ ಜಾತ್ರೆ’ ಚಿತ್ರದ ಆಡಿಯೋ ಹಾಗೂ ಟೀಸರ್ ಬಿಡುಗಡೆ ಸಮಾರಂಭ. ಚಿತ್ರದ ಹೆಸರಿಗೆ ಒಂಚೂರು ಮೋಸವಾಗಬಾರದೆಂದುಕೊಂಡ ಚಿತ್ರತಂಡ, ತಮ್ಮ ಖುಷಿಯ ಸಮಾರಂಭಕ್ಕೆ ಬಂಧು-ಮಿತ್ರರು, ಹಿತೈಷಿಗಳನ್ನೆಲ್ಲಾ ಆಹ್ವಾನಿಸಿತ್ತು. ಅದರ ಪರಿಣಾಮವಾಗಿಯೇ ಎಸ್‌ಆರ್‌ವಿ ಮಿನಿ ಥಿಯೇಟರ್ ಯಾವತ್ತೂ ಕಂಡಿರದಷ್ಟು ಜನರಿಂದ ತುಂಬಿ ತುಳುಕುವಂತಾಯಿತು. ಥಿಯೇಟರ್ ಸಾಮರ್ಥ್ಯಕ್ಕಿಂತ ಡಬಲ್ ಜನ ಬಂದ ಪರಿಣಾಮ, ಅಷ್ಟೊಂದು ಜನರನ್ನು ತಂಪಾಗಿರಿಸೋದು ಸ್ವತಃ ಎಸಿಗೆ ಸವಾಲಿನಂತಾಯಿತು!
ಹೌದು, “ಜನುಮದ ಜೋಡಿ’ ಎಂಬ ಸಿನಿಮಾವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ, ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಆಟೋ ಆನಂದ್ ಈ ಚಿತ್ರದ ನಿರ್ದೇಶಕರು. ಜನ ಚಿತ್ರಮಂದಿರಕ್ಕೆ ಬರಬೇಕಾದರೆ ಪಕ್ಕಾ ಹಳ್ಳಿ ಸೊಗಡಿನ ದೇಸಿ ಸಿನಿಮಾ ಕೊಡಬೇಕೆಂಬ ಉದ್ದೇಶದಿಂದ “ಜನುಮದ ಜೋಡಿ’ ಚಿತ್ರ ಮಾಡಿದ್ದಾರೆ. ಹಾಗಾಗಿ, ಬಹುತೇಕ ಚಿತ್ರೀಕರಣ ಕೂಡಾ ಹಳ್ಳಿಯಲ್ಲೇ ನಡೆದಿದೆ. ದುಷ್ಟಶಕ್ತಿಯೊಂದು ನಾಯಕನ ಕುಟುಂಬಕ್ಕೆ ಯಾವ ರೀತಿ ತೊಂದರೆ ಕೊಡುತ್ತದೆ ಮತ್ತು ಅದರಿಂದ ಆ ಕುಟುಂಬ ಹಾಗೂ ತನ್ನ ಪ್ರೀತಿಯನ್ನು ನಾಯಕ ಹೇಗೆ ಉಳಿಸಿಕೊಳ್ಳುತ್ತಾನೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆಯಂತೆ. ಜೊತೆಗೆ ಸುಖ ಬಂದಾಗ ಹಿಂದಿನ ಕಷ್ಟವನ್ನು ಮರೆಯಬೇಡಿ ಎನ್ನುವ ಸಂದೇಶ ಕೂಡಾ ಈ ಚಿತ್ರದಲ್ಲಿದೆಯಂತೆ. ನಾಯಕನಾಗಿ ಮದನ್‌ಕುಮಾರ್, ನಾಯಕಿಯಾಗಿ ಚೈತ್ರಾ ಅಭಿನಯಿಸಿದ್ದು, ಮತ್ತೂಂದು ಜೋಡಿಯಾಗಿ ಮಂಡ್ಯ ಕೆಂಪ ಹಾಗೂ ಅಂಜಲಿ ನಟಿಸಿದ್ದಾರೆ. ಚಿತ್ರವನ್ನು ದೊಡ್ಮನೆ ಮಂಜುನಾಥ್ ನಿರ್ಮಿಸಿದ್ದಾರೆ. ನಾಯಕ ಮದನ್ ಸೇರಿದಂತೆ ಚಿತ್ರತಂಡದ ಸದಸ್ಯರು ಹಳ್ಳಿ ಸೊಗಡಿನ ಸಿನಿಮಾ ಹಾಗೂ ಹೊಸ ಕಲಾವಿದರಿಗೆ ಅವಕಾಶ ನೀಡಿದ ಬಗ್ಗೆ ಮಾತನಾಡಿದರು.
ಮಲೆ ಮಹದೇಶ್ವರ ಬೆಟ್ಟ, ಮಂಡ್ಯ, ತುಮಕೂರು, ಕೊರಟಗೆರೆ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಆಡಿಯೋ ಬಿಡುಗಡೆಗೆ ಅತಿಥಿಯಾಗಿ ಆಗಮಿಸಿದ್ದ ನಟ ನವೀನ್ ಕೃಷ್ಣ,
“ಜನುಮದ ಜಾತ್ರೆ ಅಕ್ಷಯ ಪಾತ್ರೆಯಾಗಲಿ’ ಎಂದು ಶುಭ ಹಾರೈಸಿದರು.