Advertisement

ಫೆಬ್ರವರಿಯಲ್ಲಿ  ಜಂತರ್‌ ಮಂತರ್‌

11:50 AM Jan 26, 2018 | |

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ “ಜಂತರ್‌ ಮಂತರ್‌’ ಚಿತ್ರ ಈ ವಾರ ತೆರೆಕಾಣಬೇಕಿತ್ತು. ಆದರೆ, ಈ ವಾರ ಒಂದಷ್ಟು ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿರುವುದರಿಂದ ಹೊಸಬರ “ಜಂತರ್‌ ಮಂತರ್‌’ ಬಿಡುಗಡೆ ಮುಂದಕ್ಕೆ ಹೋಗಿದೆ. ಚಿತ್ರವನ್ನು ಫೆ.2 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ನಿಮಗೆ ಗೊತ್ತಿರುವಂತೆ “ಜಂತರ್‌ ಮಂತರ್‌’ ಚಿತ್ರದಲ್ಲಿ ನಟಿಸಿರೋದು “ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಮೆಚ್ಚುಗೆ ಗಳಿಸಿದ ಮಂದಿ. ಈ ಚಿತ್ರವನ್ನು ಗೋವಿಂದೇಗೌಡ ನಿರ್ದೇಶಿಸಿದ್ದಾರೆ. ಗೋವಿಂದೇ ಗೌಡ ಅವರು “ಜಂತರ್‌ ಮಂತರ್‌’ ಕಥೆಯನ್ನು ಮೂರು ವರ್ಷಗಳ ಹಿಂದೆ ಮಾಡಿಕೊಂಡಿದ್ದರಂತೆ. ಆದರೆ, ಯಾವ್ಯಾವ ಪಾತ್ರಕ್ಕೆ ಯಾವ ಕಲಾವಿದರನ್ನು ಹಾಕಿಕೊಳ್ಳೋದು ಎಂಬ ಗೊಂದಲದಲ್ಲದ್ದ ಗೋವಿಂದೇಗೌಡ ಅವರಿಗೆ  ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಯಶಸ್ವಿಯಾದ ನಂತರ ಸಿನಿಮಾದ ಯಾವ ಪಾತ್ರಗಳಿಗೆ ಯಾವ ಕಲಾವಿದರು ಬೇಕೆಂಬ ಬಗ್ಗೆ ಸ್ಪಷ್ಟತೆ ಸಿಕ್ಕಿತಂತೆ.

Advertisement

ಅಷ್ಟಕೂ “ಜಂತರ್‌ ಮಂತರ್‌’ ಅಂದರೇನು, ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ಜೀವನದಲ್ಲಿ ಏನೂ ಸಾಧನೆ ಮಾಡದೇ ಇರುವ ವ್ಯಕ್ತಿಗೆ ಏಕಾಏಕಿ ಸುಯೋಗ ಬಂದರೆ ಅದು ಜಂತರ್‌ ಮಂತರ್‌. ಆ ತರಹದ ಸಂದರ್ಭದೊಂದಿಗೆ ಇಡೀ ಸಿನಿಮಾ ಸಾಗುತ್ತದೆಯಂತೆ. ಬಯಸದೇ ಬಂದ ಭಾಗ್ಯ ಎಂಬ ಕಾನ್ಸೆಪ್ಟ್ ನಡಿ ಸಾಗುವ ಸಿನಿಮಾದಲ್ಲಿ ಮನರಂಜನೆಗೆ ಒತ್ತುಕೊಡಲಾಗಿ ದೆಯಂತೆ. ಚಿತ್ರವನ್ನು ಶಿವಸುಂದರ್‌ ಎಲ್‌ ಮತ್ತು  ಬಿ. ನಾಗರಾಜ್‌ ಸಾಲುಂಡಿ ನಿರ್ಮಿಸಿದ್ದಾರೆ. ಇವರ ಜೊತೆ ಮಹೇಶ್‌, ರಾಜು, ಅನಂತ್‌ ಕೈ ಜೋಡಿಸಿದ್ದಾರೆ. ಚಿತ್ರದಲ್ಲಿ  ಶಿವರಾಜ್‌ ಕೆ.ಆರ್‌. ಪೇಟೆ, ಹಿತೇಶ್‌, ಸಂಭ್ರಮ, ನಯನಾ, ಮಾಸ್ಟರ್‌ ಆನಂದ್‌, ಸಂಜು ಬಸಯ್ಯ, ಉದಯ್‌, ಶೋಭರಾಜ್‌, ವಿ. ಮನೋಹರ್‌ ನಟಿಸಿದ್ದಾರೆ. 

ಚಿತ್ರ ಔಟ್‌ ಅಂಡ್‌ ಔಟ್‌ ಕಾಮಿಡಿಯಾಗಿದ್ದು, ಪ್ರೇಕ್ಷಕರು ಎರಡೂವರೆ ಗಂಟೆಗಳ ಕಾಲ ಖುಷಿಯಿಂದ ನಗುತ್ತಾರೆ. ಜೊತೆಗೆ ಚಿತ್ರದಲ್ಲಿ ಒಂದೊಳ್ಳೆಯ ಸಂದೇಶ ಕೂಡಾ ಇದೆ ಎಂಬುದು ಚಿತ್ರದಲ್ಲಿ ನಟಿಸಿದ ಕಲಾವಿದರ ಮಾತು. ಚಿತ್ರದ ರೆಟ್ರೋ ಹಾಡೊಂದನ್ನು ಜಗ್ಗೇಶ್‌ ಹಾಡಿದ್ದು, ಆನಂದ್‌ ಹಾಗೂ ನಯನ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಚಿತ್ರಕ್ಕೆ ರಾಕಿ ಸೋನು ಸಂಗೀತವಿದೆ. ಸುರೇಶ್‌ಬಾಬು ಛಾಯಾಗ್ರಹಣ,  ಶಿವರಾಜ್‌ ಮೇಹು ಸಂಕಲನವಿದೆ. 

Advertisement

Udayavani is now on Telegram. Click here to join our channel and stay updated with the latest news.

Next