Advertisement

ಇನ್ನಾರು ತಿಂಗಳಲ್ಲಿ  ಜನೌಷಧ ಪೂರೈಕೆ ಯಥೇತ್ಛ 

10:02 AM Dec 22, 2017 | Team Udayavani |

ಉಡುಪಿ: ಜೆನೆರಿಕ್‌ ಔಷಧಗಳಿಗೆ ಬೇಡಿಕೆ ತೀವ್ರವಾಗಿ ಹೆಚ್ಚಿರುವ ಕಾರಣ ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳಿಗೆ ಸಮರ್ಪಕ ಪ್ರಮಾಣದಲ್ಲಿ ಔಷಧ ಪೂರೈಕೆ ಕಷ್ಟವಾಗುತ್ತಿದೆ. ಇನ್ನಾರು ತಿಂಗಳುಗಳಲ್ಲಿ ಔಷಧಗಳ ಪೂರೈಕೆ ಸಮರ್ಪಕವಾಗಲಿದೆ ಎಂದು ಯೋಜನೆಯ ಹಿರಿಯ ಮಾರುಕಟ್ಟೆ ಅಧಿಕಾರಿ ಡಾ| ಬಿ. ಅನಿಲಾ ಅವರು ಹೇಳಿದರು. 

Advertisement

ಬಳಕೆದಾರರ ವೇದಿಕೆ, ಕಿನ್ನಿಮೂಲ್ಕಿ ಸದ್ಗುರು ಸೌಹಾರ್ದ ಸಹಕಾರಿ ಜಂಟಿ ಆಶ್ರಯದಲ್ಲಿ ಹೊಟೇಲ್‌ ಕಿದಿಯೂರಿನ ಮಹಾಜನ ಸಭಾಂಗಣ ದಲ್ಲಿ ಗುರುವಾರ ನಡೆದ ಜೆನೆರಿಕ್‌ ಔಷಧ ಮತ್ತು ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರದ ಬಗ್ಗೆ ವಿಶೇಷ ಉಪನ್ಯಾಸ, ನೇರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಕಷ್ಟು ಮುಂಚಿತವಾಗಿ ಜನೌಷಧ ಕೇಂದ್ರಗಳಿಂದ ಬೇಡಿಕೆ ಪಟ್ಟಿ ಕೇಳುತ್ತೇವೆ. ಅದಕ್ಕೆ ಸರಿಯಾಗಿ ಔಷಧಗಳ ಉತ್ಪಾದನೆ ಆಗುತ್ತದೆ. ಒಮ್ಮೆಲೆ ಬೇಡಿಕೆ ಹೆಚ್ಚಿದಾಗ ಉತ್ಪಾದನೆಯನ್ನು ಕೂಡ ಅಧಿಕಗೊಳಿಸಲು ಸಾಧ್ಯವಾಗುವುದಿಲ್ಲ. ಔಷಧಗಳ ಗುಣಮಟ್ಟವನ್ನು ಕಾಪಾಡುವ ಪ್ರಕ್ರಿಯೆ ನಾಲ್ಕು ಹಂತಗಳಲ್ಲಿ ನಡೆಯುತ್ತದೆ. ಗುಣ ಮಟ್ಟ ದಲ್ಲಿ ರಾಜಿ ಇಲ್ಲ ಎಂದರು.

2008ರಲ್ಲಿ ಜನೌಷಧ ಯೋಜನೆ ಆರಂಭ ಗೊಂಡರೂ 2016ರ ವರೆಗೆ ದೇಶದಲ್ಲಿದ್ದುದು ಕೇವಲ 99 ಕೇಂದ್ರಗಳು. 2016ರಲ್ಲಿ 269, 2017ರಲ್ಲಿ 2,916, ಈಗ 3,016 ಕೇಂದ್ರಗಳಿವೆ. ಕರ್ನಾಟಕದಲ್ಲಿ 210 ಕೇಂದ್ರಗಳಿವೆ. ಯಾವುದೇ ಫಾರ್ಮಸಿಸ್ಟ್‌ಗಳು ಈ ಕೇಂದ್ರವನ್ನು ತೆರೆಯ ಬಹುದು. ಆದರೆ ಇದರಲ್ಲಿ ಲಾಭ ಕಡಿಮೆ. ಬಹುತೇಕ ಬ್ರ್ಯಾಂಡೆಡ್‌ ಕಂಪೆನಿಗಳ ಔಷಧಗಳಿಗೆ ಗ್ರಾಹಕರು ತೆರುವ ಬೆಲೆಯಲ್ಲಿ ಬಹುಪಾಲು ಮೊತ್ತ ಆಯಾ ಬ್ರಾಂಡ್‌ಗಳ ಬೆಲೆಯಾಗಿರುತ್ತದೆ, ನಿಜಕ್ಕೂ ಆ ಔಷಧ ಉತ್ಪಾದನೆಗೆ ತಗಲುವ ವೆಚ್ಚ ಅತೀ ಕಡಿಮೆ. ಆದರೆ ಜೆನೆರಿಕ್‌ (ಜನೌಷಧ) ಔಷಧಗಳಿಗೆ ಕೇವಲ ಉತ್ಪಾದನಾ ವೆಚ್ಚವನ್ನು ಮಾತ್ರ ಗ್ರಾಹಕರು ತೆತ್ತರೆ ಸಾಕು ಎಂದು ಡಾ| ಅನಿಲಾ ಹೇಳಿದರು. ಬಸೂರು ರಾಜೀವ ಶೆಟ್ಟಿ ಉಪಸ್ಥಿತರಿದ್ದರು. ದಾಮೋದರ ಐತಾಳ ಸ್ವಾಗತಿಸಿ, ಬಾ. ನಾ. ಶಾಂತಪ್ರಿಯ ಪ್ರಸ್ತಾವನೆಗೈದರು. ಸವಿತಾ ಶಾಂತಪ್ರಿಯ ಕಾರ್ಯಕ್ರಮ ನಿರ್ವಹಿಸಿದರು. 

ಮೋದಿ ಹೆಸರಿಗೆ ಆಕ್ಷೇಪ
2008ರಲ್ಲಿ ಜನೌಷಧ ಯೋಜನೆ ಆರಂಭ ಗೊಂಡಿತ್ತು. ಆದರೆ ಈಗ ಮೋದಿ ಹೆಸರನ್ನೇ ಏಕೆ ಹೇಳುತ್ತೀರಿ ಎಂದು ಬಳಕೆದಾರರ ವೇದಿಕೆಯ ವಿಶ್ವಸ್ತರಲ್ಲಿ ಒಬ್ಬರಾದ ಅಲ್ತಾಫ್ ಅಹಮ್ಮದ್‌ ಆಕ್ಷೇಪಿಸಿದಾಗ ಪ್ರಧಾನಮಂತ್ರಿಯಾಗಿರಲಿ, ಮುಖ್ಯ ಮಂತ್ರಿ ಯಾಗಿರಲಿ- ಶಿಷ್ಟಾಚಾರದಂತೆ ಅವರಿಗೆ ನೀಡ ಬೇಕಾದ ಗೌರವವನ್ನು ನೀಡಬೇಕು ಎಂದು ಡಾ| ಅನಿಲಾ ಹೇಳಿದರು. ಇದು ಬಿಸಿಬಿಸಿ ಚರ್ಚೆಗೆ ಕಾರಣವಾದಾಗ ಜನಪರ ವಿಷಯದ ಸಂವಾದದ ನಡುವೆ ವಿಷಯಾಂತರ ನಡೆಸಬೇಡಿ ಎಂದು ಹಲವರು ಒತ್ತಾಯಿಸಿದರು. ಸಂವಾದದ ನಡುವೆ ಬಿ. ಜಿ. ಮೋಹನದಾಸ್‌ ಅವರು “ಹಿಂದೆ ಇಂದಿರಾ ಜೆನೆರಿಕ್‌ ಔಷಧಿ ಎಂದು ಹೆಸರಿಸಬಹುದಿತ್ತು’ ಎಂದು ತೇಲಿಕೆ ಯಾಗಿ ಕುಟುಕಿದರು. ವೈದ್ಯರು ಜೆನೆರಿಕ್‌ ಔಷಧ ಗಳಿಗೆ ಪ್ರೋತ್ಸಾಹ ಕೊಡುತ್ತಿಲ್ಲ ಎಂದು ಹಿರಿಯ ನಾಗರಿಕ ರೊಬ್ಬರು ಹೇಳಿದರು. ವೈದ್ಯರಲ್ಲಿ ಜೆನೆರಿಕ್‌ ಔಷಧ ಗಳಿಗೆ ಪ್ರೋತ್ಸಾಹ ಕೊಡುವ ಮತ್ತು ಕೊಡದವರಿಬ್ಬರೂ ಇದ್ದಾರೆ ಎಂದು ಡಾ| ಅನಿಲಾ ಹೇಳಿದರು. ಭಾರತೀಯ ವೈದ್ಯ ಮಂಡಳಿ (ಐಎಂಎ) ಕೇಳಿದ ಪ್ರಶ್ನೆಗಳನ್ನು ಶಾಂತರಾಜ ಐತಾಳ್‌ ವಾಚಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next