Advertisement

ಜಿಲ್ಲೆಯಲ್ಲಿ ಜನೌಷಧಿ ಕೇಂದ್ರಗಳು ಜನಮುಖೀಯಾಗಿ ಕೆಲಸ ಮಾಡಬೇಕು

01:46 PM Oct 11, 2021 | Team Udayavani |

ಬೀದರ: ಜಿಲ್ಲೆಯಲ್ಲಿ ಜನೌಷಧಿ ಕೇಂದ್ರಗಳು ಜನಮುಖೀಯಾಗಿ ಕೆಲಸ ಮಾಡಬೇಕು. ವ್ಯಾಪಾರ-ವಹಿವಾಟು ಮಾಡುವುದೇ ಮುಖ್ಯವಾಗದೇ ಜನ ಸೇವಾ ಉದ್ದೇಶದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಕೇಂದ್ರ ನವೀಕರಿಸಬಹುದಾದ ಇಂಧನಮೂಲ ಹಾಗೂ ರಸಾಯನಿಕ -ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಹೇಳಿದರು.

Advertisement

ನಗರದ ರಂಗಮಂದಿರದಲ್ಲಿ ರವಿವಾರ ಜಿಲ್ಲಾ ಜನೌಷಧಿ ಕೇಂದ್ರಗಳ ಸಹಯೋಗದೊಂದಿಗೆ “ಫಾರ್ಮಾಸ್ಯುಟಿಕಲ್ಸ್‌ ಮತ್ತು ಮೆಡಿಕಲ್‌ ಡಿವೈಸಸ್‌ ಬ್ಯೂರೋ ಆಫ್‌ ಇಂಡಿಯಾ’ದ ಮೂಲಕ ಸ್ವಾತಂತ್ರ್ಯ ಅಮೃತ ಮಹೋತ್ಸವ ಬೃಹತ್‌ ಕಾರ್ಯಕ್ರಮ ಹಾಗೂ ಆರೋಗ್ಯ ಮೇಳ, ಹಿರಿಯ ನಾಗರಿಕರ ಆರೋಗ್ಯ ಪರೀಕ್ಷೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಕೇವಲ ಏಳು ವರ್ಷಗಳಲ್ಲಿ ದೇಶದಾದ್ಯಂತ 736 ಜಿಲ್ಲೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 8,200ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರದಲ್ಲಿ 14,049 ಔಷಧಿಗಳ ಲಭ್ಯತೆ ಇದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರಗಳು ಆರಂಭವಾಗಬೇಕು ಎಂದ ಅವರು, ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯು ಅತ್ಯಂತ ಗುಣಮಟ್ಟದ ಔಷಧಿಗಳನ್ನು ಅತಿ ಕಡಿಮೆ ಬೆಲೆಗೆ ಜನಸಾಮಾನ್ಯರಿಗೆ ಒದಗಿಸುವುದಾಗಿದೆ ಎಂದರು.

ಇದನ್ನೂ ಓದಿ:ಚಿತ್ತಾಪುರ ಕಮಲ ನಾಯಕರ ಕಸರತ್ತು

ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ನಡೆಯುವ ಎಲ್ಲ ಕಾರ್ಯಕ್ರಮಗಳು ದೇಶದ ಹಿರಿಯ ನಾಗರಿಕರಿಗೆ ಸಮರ್ಪಿತವಾಗಿದೆ. ಪ್ರಧಾನಮಂತ್ರಿಗಳ ದೂರದೃಷ್ಟಿ 2.0 ಆತ್ಮ ನಿರ್ಭರ ಭಾರತವನ್ನು ಸಾಕಾರಗೊಳಿಸಲಾಗುತ್ತಿದೆ ಎಂದರು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಮಾತನಾಡಿ, ಪ್ರಧಾನಮಂತ್ರಿಗಳು ಜನೌಷಧಿ ಯೋಜನೆ, ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಂತಹ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು, ಸಾರ್ವಜನಿಕರು ಇಂತಹ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಶಾಸಕ ಬಂಡೆಪ್ಪ ಖಾಶೆಂಪೂರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಆರೋಗ್ಯ ಸೇವೆಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಜಿ.ಪಂ ಸಿಇಒ ಜಹೀರಾ ನಸೀಮ್‌ ಅವರು ಮಾತನಾಡಿದರು. ಶಾಸಕ ರಹೀಮ್‌ ಖಾನ್‌ ಅಧ್ಯಕ್ಷತೆ ವಹಿಸಿದ್ದರು. ಹಜ್‌ ಸಮಿತಿ ಅಧ್ಯಕ್ಷ ರವೂಫುದ್ದೀನ್‌ ಕಚೇರಿವಾಲೆ, ಜನೌಷಧಿ ಮಾರ್ಕೆಟಿಂಗ್‌ ಸಹಾಯಕ ವ್ಯವಸ್ಥಾಪಕ ಅನೀಲಾ ದೀಪಕ್‌ ಶೆಟ್ಟಿ, ಡಿಎಚ್‌ಒ ಡಾ| ವಿ.ಜಿ. ರೆಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ರತಿಕಾಂತ ಸ್ವಾಮಿ, ವೈದ್ಯಕೀಯ ಅಧೀಕ್ಷಕ ಶಿವಕುಮಾರ ಶೆಟಕಾರ ಇನ್ನಿತರರು ವೇದಿಕೆಯಲ್ಲಿದ್ದರು. ಮಂಗಲಾ ಭಾಗವತ್‌ ನಿರೂಪಿಸಿದರು.

75 ಹಿರಿಯ ನಾಗರಿಕರಿಗೆ ಸನ್ಮಾನ

ದೇಶದಾದ್ಯಂತ 75 ಜಿಲ್ಲೆಗಳಲ್ಲಿ 750 ಜನೌಷಧಿ ಕೇಂದ್ರಗಳಲ್ಲಿ 75 ವರ್ಷ ತುಂಬಿದ 75 ಹಿರಿಯ ನಾಗರಿಕರಿಗೆ ಸನ್ಮಾನ ನಡೆಯಿತು. ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಪ್ರಥಮ ಚಿಕಿತ್ಸಾ ಪೆಟ್ಟಿಗೆ ವಿತರಣಾ ಕಾರ್ಯಕ್ರಮ ನಡೆದಿದ್ದು ಕೂಡ ವಿಶೇಷವಾಗಿತ್ತು. ಹಿರಿಯ ನಾಗರಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ನಡೆಯಿತು. ಡಾ| ಸಲ್ಮಾನ್‌, ಚರ್ಮರೋಗ ತಜ್ಞ ಡಾ| ಷಣ್ಮುಖಪ್ರಿಯ, ನೇತ್ರ ತಜ್ಞ ಡಾ| ಅರ್ಜುನ್‌, ಮೂಳೆಚಿಕಿತ್ಸಾ ತಜ್ಞ ಡಾ| ಎಂ.ಕೆ. ನಿಜಾಮುದ್ದೀನ್‌ ವೈದ್ಯರು ಉಚಿತ ಸೇವೆ ನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next