ತೀರ್ಥಹಳ್ಳಿ: ತಾಲೂಕು ಆಸ್ಪತ್ರೆಯ ಬಡ ರೋಗಿಗಳು ಔಷಧಿಗಾಗಿ ಪರದಾಡುತ್ತಿದ್ದಾರೆ. ಇವರ ಪರದಾಟಕ್ಕೆ ಕಾರಣ ತಾಲೂಕು ಆಸ್ಪತ್ರೆಯ ಆವರಣದಲ್ಲಿದ್ದ ಜನೌಷಧಿ ಕೇಂದ್ರ.
ಜನೌಷಧಿ ಕೇಂದ್ರ ಕಳೆದ 10ಕ್ಕೂ ಅಧಿಕ ದಿನಗಳಿಂದ ಬಾಗಿಲು ಹಾಕಿರುವ ಕಾರಣ ಸಾರ್ವಜನಿಕರು ಜನೌಷಧಿ ಕೇಂದ್ರಕ್ಕೆ ಹಿಡಿ ಶಾಪ ಹಾಕಿ, ಈಗ ಬಾಗಿಲು ತೆಗೆಯುತ್ತಾರೋ, ಸ್ವಲ್ಪ ಹೊತ್ತು ಬಿಟ್ಟು ಬಾಗಿಲು ತೆಗೆಯುತ್ತಾರೋ ಎಂದು ಕಾದು ಕಾದು ನಂತರ ಬಡರೋಗಿಗಳು ಅಧಿಕ ಹಣ ನೀಡಿ ಖಾಸಗಿ ಮೆಡಿಕಲ್ ನಿಂದ ಔಷಧಿ ಖರೀದಿಸುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಔಷಧಿ ವಿತರಿಸುತ್ತಿದ್ದರೂ ಜನೌಷಧಿ ಕೇಂದ್ರದಲ್ಲಿ ಸಿಗುವ ಔಷಧಿಗಳು ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ. ಮಧುಮೇಹಿಗಳು, ರಕ್ತದೊತ್ತಡ, ಗರ್ಭಿಣಿಯರು ಸೇರಿದಂತೆ ಚಿಕ್ಕಮಕ್ಕಳಿಗೆ ಜನೌಷಧಿ ಕೇಂದ್ರದಲ್ಲಿ ಕಡಿಮೆ ದರದಲ್ಲಿ ಔಷಧಿ ಸಿಗುತ್ತಿತ್ತು. ಆದರೆ ಈಗ ಬಡ ರೋಗಿಗಳು ಅಧಿಕ ಹಣ ನೀಡಿ ಖಾಸಗಿ ಮೆಡಿಕಲ್ ನಿಂದ ಔಷಧಿ ಖರೀದಿಸುವ ಅನಿವಾರ್ಯತೆ ಎದುರಾಗಿದೆ.
ಕಳೆದ 10ಕ್ಕೂ ಅಧಿಕ ದಿನದಿಂದ ರೋಗಿಗಳ ಸಂಬಂಧಿಕರು ಆಸ್ಪತ್ರೆಯ ಸಿಬ್ಬಂದಿ, ಅಧಿಕಾರಿಗಳಿಗೆ, ಜಿಲ್ಲಾ ಆರೋಗ್ಯ ಅಧಿಕಾರಿ, ತಾಲೂಕು ಆರೋಗ್ಯ ಅಧಿಕಾರಿ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಆದರೆ ಜನರ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂಬ ಮಾತುಗಳು ಜನರಿಂದ ಕೇಳಿಬಂದಿವೆ. ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ನೂರಾರು ಜನರು ಪ್ರತಿದಿನ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಅದರಲ್ಲೂ ಬಡರೋಗಿಗಳೇ ಅಧಿಕವಾಗಿ ಬರುತ್ತಾರೆ.
ಬಡ ಜನರಿಗೆ ಸಹಾಯವಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ಯೋಜನೆ ಸ್ಥಿತಿ ಹೀಗಾದರೆ ಇನ್ನು ಆಸ್ಪತ್ರೆ ಒಳಗಿನ ಸ್ಥಿತಿ ಹೇಗೋ ಆ ದೇವರೇ ಬಲ್ಲ ಎನ್ನುತ್ತಿದ್ದಾರೆ ಸಾರ್ವಜನಿಕರು.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನಿಸಿ ಬಡ ರೋಗಿಗಳಿಗೆ ಜನೌಷಧಿ ಕೇಂದ್ರದಲ್ಲೇ ಔಷಧಿ ಸಿಗುವಂತೆ ಆಗಲಿ ಎಂಬುದು ಎಲ್ಲರ ಅಭಿಪ್ರಾಯ.