ಬೆಂಗಳೂರು: ನೀರಾವರಿ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಹಮ್ಮಿಕೊಂಡ “ಜನತಾ ಜಲಧಾರೆ ರಥಯಾತ್ರೆ’ ಮೇ 13ಕ್ಕೆ ಅಂತ್ಯಗೊಳ್ಳಲಿದ್ದು, ಈ ರಥಯಾತ್ರೆಯ ಸಮಾರೋಪ ಸಮಾವೇಶವನ್ನು ಐತಿಹಾಸಿಕವಾಗಿ ಮಾಡಲು ಜೆಡಿಎಸ್ ನಿರ್ಧರಿಸಿದೆ. ಈ ವೇದಿಕೆ ಮೂಲಕ ಚುನಾವಣ ಕಹಳೆ ಮೊಳಗಿಸಲು ಸಿದ್ಧತೆ ನಡೆಸಿದೆ.
ಚುನಾವಣ ವರ್ಷದಲ್ಲಿ ನಡೆಯುತ್ತಿರುವ ಈ ಜನತಾ ಜಲಧಾರೆ ರಥಯಾತ್ರೆಯು ರಾಜ್ಯದ 15 ಮಾರ್ಗಗಳ ಮೂಲಕ ಸಾವಿರಾರು ಕಿ.ಮೀ. ಕ್ರಮಿಸಿ, ಜನರಿಗೆ ನೀರಾವರಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದೆ. ಮೇ 13ರಂದು ನಗರದ ಹೊರವಲಯದ ನೆಲಮಂಗಲದಲ್ಲಿ ಬೃಹತ್ ಸಮಾವೇಶದೊಂದಿಗೆ ಇದಕ್ಕೆ ಅದ್ದೂರಿ ತೆರೆ ಎಳೆಯಲು ಉದ್ದೇಶಿಸಿದೆ. ಇದಕ್ಕೆ ರಾಜ್ಯದ ನಾನಾ ಭಾಗಗಳಿಂದ ಸುಮಾರು 5ರಿಂದ 6 ಲಕ್ಷ ಜನ ಸಾಕ್ಷಿಯಾಗಲಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಕಾಶೆಂಪುರ ತಿಳಿಸಿದರು.
ಪಕ್ಷದ ಜೆ.ಪಿ. ಭವನದಲ್ಲಿ ಗುರುವಾರ ಪಕ್ಷದ ಕೋರ್ ಕಮಿಟಿ ಸಭೆಯ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತಾ ಜಲಧಾರೆಯನ್ನು ಯಶಸ್ವಿಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಭ್ರಷ್ಟಾಚಾರ ವಿಚಾರವಾಗಿ ಕೆಸರೆರಚಾಟ ನಡೆಯುತ್ತಿದೆ. ಸರಕಾರಕ್ಕೆ ಬದ್ಧತೆ ಇದ್ದರೆ, ವ್ಯವಸ್ಥೆಯನ್ನ ಸರಿಪಡಿಸಲಿ. ನಾವು ರೈತರ, ಜನಪರ ಕೆಲಸ ಮಾಡುತ್ತೇವೆ. ನಮ್ಮ ಸರಕಾರ ಬಂದರೆ ನಿರ್ದಿಷ್ಟ ಅವಧಿಯಲ್ಲಿ ಎಲ್ಲ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತೇವೆ. ಇದು ನಮ್ಮ ಬದ್ಧತೆ ಎಂದರು.
ಲೋನಿನ್ ಜೆಡಿಎಸ್ ಅಭ್ಯರ್ಥಿ:
ವಿಧಾನ ಪರಿಷತ್‌ನ ವಾಯವ್ಯ ಶಿಕ್ಷಕರ ಕ್ಷೇತ್ರಕ್ಕೆ ಚಂದ್ರಶೇಖರ್ ಲೋನಿನ್ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಕೋರ್ ಕಮಿಟಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರಾಗಿ ಚಂದ್ರಶೇಖರ್ ಲೋನಿನ್ ಹಲವಾರು ವರ್ಷಗಳಿಂದ ಶ್ರಮಿಸಿದ್ದಾರೆ. ಅವರನ್ನು ವಾಯವ್ಯ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಕಣಕ್ಕಿಳಿಸಲು ಕೋರ್ ಕಮಿಟಿ ನಿರ್ಧರಿಸಿದೆ ಎಂದು ಬಂಡೆಪ್ಪ ಕಾಶೆಂಪುರ ತಿಳಿಸಿದರು.