ಬಳ್ಳಾರಿ: ಪ್ರಪಂಚವನ್ನೇ ಬೆಚ್ಚಿ ಬೀಳಿಸಿರುವ ಮಾರಕ ಕೋವಿಡ್-19 ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವ ಜನತಾ ಕರ್ಫ್ಯೂಗೆ ಬಳ್ಳಾರಿ ನಗರ ಸೇರಿ ಇಡೀ ಜಿಲ್ಲೆ ಸಂಪೂರ್ಣ ಸ್ತಬ್ದವಾಗಿದೆ. ಜನತಾ ಕರ್ಫ್ಯೂಗೆ ಜಿಲ್ಲೆಯ ಜನರು ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸಿದ್ದು, ನಗರದ ಪ್ರಮುಖ ರಸ್ತೆಗಳು ಖಾಲಿ ಖಾಲಿಯಾಗಿವೆ.
ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಮೊದಲೇ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಜಿಲ್ಲೆಯಲ್ಲೂ ಸಾಕಷ್ಟು ಜಾಗೃತಿ ಮೂಡಿರುವ ಹಿನ್ನೆಲೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್, ಹೊಟೇಲ್, ಬೀದಿ ಬದಿ ಅಂಗಡಿ, ಉಪಾಹಾರ ಬಂಡಿಗಳು ಎಲ್ಲವೂ ಸಂಪೂರ್ಣವಾಗಿ ಬಂದ್ ಆಗಿವೆ.
ಇನ್ನು ನಗರ ಸಾರಿಗೆ ಸೇರಿ ದೂರದೂರುಗಳಿಗೆ ತೆರಳುವ ಬಸ್ ಗಳು ಸಹ ರಸ್ತೆಗಿಳಿಯದೆ ಬಸ್ ನಿಲ್ದಾಣದಲ್ಲೇ ನಿಲುಗಡೆಯಾಗಿವೆ. ಕೆಲವೊಂದು ಡಿಪೋ ಸೇರಿವೆ. ಇನ್ನು ಖಾಸಗಿ ಸಾರಿಗೆ ವಾಹನ, ಆಟೊ, ಇತರೆ ಪ್ರಯಾಣಿಕ ವಾಹನಗಳು ಬೆಳಗ್ಗೆಯಿಂದಲೇ ರಸ್ತೆಗಿಳಿಲ್ಲ. ಪೆಟ್ರೋಲ್ ಬಂಕ್ ಗಳು ಕೆಲವೊಂದು ಬಂದ್ ಫಲಕ ಪ್ರದರ್ಶಿಸಿದರೂ, ಕೆಲವೊಂದು ವಾಹನಗಳಿಗೆ ಅನಿವಾರ್ಯವಾಗಿ ಪೆಟ್ರೋಲ್ ಹಾಕಲಾಗುತ್ತಿದ್ದಾರೆ. ಇನ್ನು ರಾಜ್ಯಸರ್ಕಾರ ಈಗಾಗಲೇ ಆದೇಶಿಸಿದಂತೆ ಚಿತ್ರಮಂದಿರಗಳ ಪ್ರದರ್ಶನ ರದ್ದುಪಡಿಸಿರುವುದು, ದೇವಾಸ್ಥಾನಗಳ ಬಂದ್ ಮುಂದುವರೆದಿದೆ.
ತರಕಾರಿ ಮಾರುಕಟ್ಟೆ ಬಂದ್
ಜನತಾ ಕರ್ಫ್ಯೂಗೆ ಪ್ರತಿದಿನ ಬೆಳಗ್ಗೆ ಜನರಿಂದ ಗಿಜಗುಡುತ್ತಿದ್ದ ಇಲ್ಲಿನ ತರಕಾರಿ ಮಾರುಕಟ್ಟೆ ಸಂಪೂರ್ಣ ಸ್ತಬ್ದವಾಗಿದೆ. ಮಾರುಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಪೂರ್ಣ ಸ್ತಬ್ದವಾಗಿದೆ. ಆದರೆ, ಸಾರ್ವಜನಿಕರು ಸಹ ತರಕಾರಿ ಖರೀದಿಸಲು ಮಾರುಕಟ್ಟೆಗೆ ಆಗಮಿಸದಿರುವುದು ವಿಶೇಷ.
ಇನ್ನು ಸದಾ ಜನರಿಂದ, ವಾಹನಗಳ ದಟ್ಟಣೆಯಿಂದ ತುಂಬಿರುತ್ತಿದ್ದ ನಗರದ ಪ್ರಮುಖ ಗಡಗಿ ಚನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಮೋತಿ ವೃತ್ತ, ರೈಲು ನಿಲ್ದಾಣ, ಹೊಸ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ, ನಗರ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದು, ಬಳ್ಳಾರಿ ನಗರ ಸೇರಿ ಜಿಲ್ಲೆಯ ಜನರಿಂದ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.